ಐಪಿಎಲ್ನ (IPL 2021) ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಕೆಎಲ್ ರಾಹುಲ್ (KL Rahul) ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ತೊರೆಯುವುದು ಬಹುತೇಕ ಖಚಿತ. ಮುಂದಿನ ಸೀಸನ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ಪಂಜಾಬ್ ತಂಡಕ್ಕೆ ಗುಡ್ ಬೈ ಹೇಳಲು ರಾಹುಲ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಪಂಜಾಬ್ ತಂಡ ರಾಹುಲ್ ಅವರನ್ನು ಕೈ ಬಿಡುವ ಇರಾದೆಯಲ್ಲಿಲ್ಲ. ಇದಾಗ್ಯೂ ತಂಡದಲ್ಲಿ ಮುಂದುವರೆಯಲು ಕೆಎಲ್ಆರ್ ಆಸಕ್ತಿ ಹೊಂದಿಲ್ಲ. ಹೀಗಾಗಿ ಅವರು ಪಂಜಾಬ್ ಜೊತೆಗಿನ ಒಪ್ಪಂದ ಕೊನೆಗೊಳಿಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲೇ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಏಕೆಂದರೆ ಈ ಹಿಂದೆ ಆರ್ಸಿಬಿ ಪರ ಕಣಕ್ಕಿಳಿದಿದ್ದ ರಾಹುಲ್ ಗಾಯದ ಸಮಸ್ಯೆಯಿಂದಾಗಿ 2017ರ ಐಪಿಎಲ್ನಿಂದ ಹೊರಗುಳಿದಿದ್ದರು. ಆ ಬಳಿಕ ಆರ್ಸಿಬಿ ಅವರನ್ನು ಕೈಬಿಟ್ಟಿತು. ಇದೇ ಅವಕಾಶವನ್ನು ಬಳಸಿಕೊಂಡ ಪಂಜಾಬ್ ತಂಡವು 11 ಕೋಟಿ ನೀಡಿ ಖರೀದಿಸಿತ್ತು. ಇದೀಗ ಆರ್ಸಿಬಿ ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ.
ಹೀಗಾಗಿ ಕೊಹ್ಲಿಯ ಸ್ಥಾನಕ್ಕೆ ಕೆಎಲ್ ರಾಹುಲ್ ಅವರು ಸೂಕ್ತ ಆಯ್ಕೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ ಪಂಜಾಬ್ ಕಿಂಗ್ಸ್ ತಂಡದಿಂದ ರಾಹುಲ್ ಹೊರಬಂದರೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳೋದು ಡೌಟ್. ಏಕೆಂದರೆ ಪಂಜಾಬ್ ತಂಡದಿಂದ ಬಿಡುಗಡೆಯಾದರೆ ಅವರು ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳಲೇಬೇಕು. ಒಂದು ವೇಳೆ ಅವರು ಹೆಸರು ನೋಂದಣಿ ಮಾಡಿಕೊಂಡರೂ, ಅವರನ್ನು ಖರೀದಿಸುವ ಅವಕಾಶ ಎರಡು ಫ್ರಾಂಚೈಸಿಗಳಿಗೆ ಇರಲಿದೆ.
ಏಕೆಂದರೆ ಮುಂದಿನ ಸೀಸನ್ನಲ್ಲಿ 2 ಹೊಸ ತಂಡಗಳು ಸೇರ್ಪಡೆಯಾಗಲಿದೆ. ಐಪಿಎಲ್ ಆಟಗಾರರ ರಿಟೈನ್ ನಿಯಮದಂತೆ 8 ತಂಡಗಳಿಗೆ ತಮ್ಮ ಮೂವರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇರಲಿದೆ. ಹೊಸ ತಂಡಗಳ ಸೇರ್ಪಡೆಯಾದರೆ ಅವರಿಗೂ ಈ ಆಯ್ಕೆ ನೀಡಬೇಕಾಗುತ್ತದೆ. ಅದರಂತೆ ಹೊಸ ಎರಡು ಫ್ರಾಂಚೈಸಿಗೆ ತಲಾ 3 ಆಟಗಾರರನ್ನು ಖರೀದಿಸುವ ಅವಕಾಶ ನೀಡಲಾಗುತ್ತದೆ. ಅದರಂತೆ ಹರಾಜಿಗೆ ನೋಂದಣಿ ಮಾಡಿಕೊಂಡ ಆಟಗಾರರ ಪಟ್ಟಿಯಿಂದ 6 ಆಟಗಾರರನ್ನು ಖರೀದಿಸುವ ಮೊದಲ ಅವಕಾಶ ಹೊಸ ಫ್ರಾಂಚೈಸಿಗಳಿಗೆ ಇರಲಿದೆ.
2016ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬದಲಿಗೆ ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ಸ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿತ್ತು. ಈ ವೇಳೆ ಎರಡು ತಂಡಗಳ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಲಾಗಿತ್ತು. ಇದಾಗ್ಯೂ ಹೊಸ ತಂಡಗಳಿಗೆ ಬಿಸಿಸಿಐ ಡ್ರಾಫ್ಟ್ ಆಯ್ಕೆಯ ಮೂಲಕ ಆಟಗಾರರ ರಿಟೈನ್ಗೆ ಅವಕಾಶ ನೀಡಿತ್ತು. ಅಂದರೆ ಪ್ರತಿ ಫ್ರಾಂಚೈಸಿಗೆ ತಲಾ ಐದು ಸ್ಟಾರ್ ಆಟಗಾರರನ್ನು ಹರಾಜಿಗೂ ಮುನ್ನ ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು. ಅದರಂತೆ ಪುಣೆ ಫ್ರಾಂಚೈಸಿ ನಿಗದಿತ 12.5 ಕೋಟಿಗೆ ಮಹೇಂದ್ರ ಸಿಂಗ್ ಧೋನಿಯನ್ನು ತನ್ನದಾಗಿಸಿಕೊಂಡಿತ್ತು. ಅತ್ತ ಗುಜರಾತ್ ತಂಡವು 12.5 ಕೋಟಿಗೆ ಸುರೇಶ್ ರೈನಾ ಅವರನ್ನು ಆಯ್ಕೆ ಮಾಡಿಕೊಂಡಿತು.
ಈ ಡ್ರಾಫ್ಟ್ ಆಯ್ಕೆ ಪ್ರಕ್ರಿಯೆ ವೇಳೆ ಹೊಸ ತಂಡಗಳಿಗೆ 50 ಆಟಗಾರರ ಗುಂಪಿನಿಂದ ಐದು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಐದು ಆಟಗಾರರಿಗೆ ರೂ. 12.5 ಕೋಟಿ, ರೂ. 9.5 ಕೋಟಿ, ರೂ. 7.5 ಕೋಟಿ, ರೂ. 5.5 ಕೋಟಿ ಮತ್ತು ರೂ. ತಲಾ 4 ಕೋಟಿ ನಿಗದಿಪಡಿಸಲಾಗಿತ್ತು. ಹೀಗಾಗಿ ಐಪಿಎಲ್ 2022 ರಲ್ಲಿ ಹೊಸ ತಂಡಗಳಿಗೆ ಮೂವರು ಆಟಗಾರರನ್ನು ರಿಟೈನ್ ಮಾಡುವ ಅವಕಾಶ ನೀಡುವುದು ಬಹುತೇಕ ಖಚಿತ.
ಇತ್ತ ಪಂಜಾಬ್ ಕಿಂಗ್ಸ್ ತಂಡದಿಂದ ರಾಹುಲ್ ಹೊರಬಂದರೆ ಅವರನ್ನು ಖರೀದಿಸುವ ಮೊದಲ ಅವಕಾಶ ಹೊಸ ಪ್ರಾಂಚೈಸಿಗಳಿಗೆ ಸಿಗಲಿದೆ. ಸದ್ಯದ ಮಾಹಿತಿ ಪ್ರಕಾರ ಐಪಿಎಲ್ 2022ರ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿ 33 ಕೋಟಿಯೊಳಗೆ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕು. ಅದರಂತೆ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ನೀಡಬೇಕಾಗುತ್ತದೆ. ಪ್ರಸ್ತುತ ರಾಹುಲ್ ಅವರಿಗೆ ಪಂಜಾಬ್ ಕಿಂಗ್ಸ್ ತಂಡ ನೀಡುತ್ತಿರುವ ಮೊತ್ತ 11 ಕೋಟಿ ರೂ. ಮಾತ್ರ. ಒಂದು ವೇಳೆ ಅವರು ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡರೆ ಹೊಸ ಫ್ರಾಂಚೈಸಿಗಳ ಮೊದಲ ಆಯ್ಕೆ ರಾಹುಲ್ ಆಗಿರಲಿದ್ದಾರೆ. ಹೀಗಾಗಿ 15 ಕೋಟಿ ನೀಡಿ ರಾಹುಲ್ ಅವರನ್ನು ಹೊಸ ತಂಡಗಳ ಮಾಲೀಕರು ಖರೀದಿಸುವುದು ಬಹುತೇಕ ಖಚಿತ.
ಇತ್ತ ಆರ್ಸಿಬಿ ಫ್ರಾಂಚೈಸಿ ರಾಹುಲ್ ಅವರನ್ನು ಹರಾಜಿನಲ್ಲಿ ಖರೀದಿಸಲು ಬಯಸಿದರೂ, ಅದಕ್ಕೂ ಮುನ್ನವೇ ಡ್ರಾಫ್ಟ್ ಪ್ರಕ್ರಿಯೆಯ ಮೂಲಕ ಕೆಎಲ್ಆರ್ ಹೊಸ ತಂಡಗಳ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣದಿಂದ ಮುಂದಿನ ಸೀಸನ್ನಲ್ಲಿ ಕೆಎಲ್ ರಾಹುಲ್ ಆರ್ಸಿಬಿ ಪರ ಆಡೋದು ಅನುಮಾನ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್ರೌಂಡರ್ ಆಯ್ಕೆ
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
Published On - 4:06 pm, Wed, 13 October 21