IND vs WI T20: ಮುಂದುವರೆದ ರೋಹಿತ್ ನಾಯಕತ್ವದ ಗೆಲುವಿನ ಓಟ: ಕೆರಿಬಿಯನ್ನರಿಗೆ ಭಾರೀ ಮುಖಭಂಗ

India vs West Indies, 2nd T20I: ಆರಂಭಿಕರ ವೈಫಲ್ಯದ ನಡುವೆಯೂ ವಿರಾಟ್ ಕೊಹ್ಲಿ (Virat Kohli) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಅವರ ಅರ್ಧಶತಕ ತಂಡಕ್ಕೆ ಸಹಕಾರಿ ಆಯಿತು. ಬೌಲರ್​ಗಳ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲವಾದರೂ ಅಂತಿಮ ಹಂತದಲ್ಲಿ ಸೋಲಿನ ಸುಳಿಯಿಂದ ಪಾರು ಮಾಡಿದರು.

IND vs WI T20: ಮುಂದುವರೆದ ರೋಹಿತ್ ನಾಯಕತ್ವದ ಗೆಲುವಿನ ಓಟ: ಕೆರಿಬಿಯನ್ನರಿಗೆ ಭಾರೀ ಮುಖಭಂಗ
IND vs WI 2nd T20
Follow us
TV9 Web
| Updated By: Vinay Bhat

Updated on: Feb 19, 2022 | 7:05 AM

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿ ಮೆರೆದಾಡಿದ್ದ ಭಾರತ (India vs West Indies) ಇದೀಗ ಟಿ20 ಸರಣಿಯನ್ನೂ ವಶಪಡಿಸಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ ಮೈದಾನದಲ್ಲಿ ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ರನ್​​ಗಳ ರೋಚಕ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕನಾದ ಬಳಿಕ ಆಡಿದ ಎಲ್ಲ ಪಂದ್ಯಗಳಲ್ಲಿ ಭಾರತ ಗೆದ್ದ ಸಾಧನೆ ಮಾಡಿದೆ. ಆರಂಭಿಕರ ವೈಫಲ್ಯದ ನಡುವೆಯೂ ವಿರಾಟ್ ಕೊಹ್ಲಿ (Virat Kohli) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಅವರ ಅರ್ಧಶತಕ ತಂಡಕ್ಕೆ ಸಹಕಾರಿ ಆಯಿತು. ಬೌಲರ್​ಗಳ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲವಾದರೂ ಅಂತಿಮ ಹಂತದಲ್ಲಿ ಸೋಲಿನ ಸುಳಿಯಿಂದ ಪಾರು ಮಾಡಿದರು. ಇತ್ತ ವೆಸ್ಟ್ ಇಂಡೀಸ್ ಈ ಬಾರಿಯ ಭಾರತದ ಪ್ರವಾಸದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೆ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮತ್ತೊಮ್ಮೆ ವಿಫಲರಾದ ಇಶಾನ್ ಕಿಶನ್ ಕೇವಲ 2ರನ್‌ಗೆ ವಿಕೆಟ್ ಒಪ್ಪಿಸಿದರು. 10ರನ್‌ಗೆ ಮೊದಲ ವಿಕೆಟ್ ಉರುಳುತ್ತಿದ್ದಂತೆ ಕಣಕ್ಕಿಳಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಆರಂಭದಿಂದಲೇ ಅಗ್ರೆಸ್ಸಿವ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ನಾಯಕ ರೋಹಿತ್ ಶರ್ಮಾ 18 ಎಸೆತಗಳಲ್ಲಿ 19 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ (8) ಈ ಬಾರಿ ಬೇಗನೆ ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಿತು.

ಆದರೆ, ನಾಲ್ಕನೇ ವಿಕೆಟ್‌ಗೆ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೊಹ್ಲಿ 41 ಎಸೆತಗಳಲ್ಲಿ 52 ರನ್ ಕಲೆಹಾಕುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 30ನೇ ಅರ್ಧಶತಕ ದಾಖಲಿಸಿದರು. ಇವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಐದನೇ ವಿಕೆಟ್‌ಗೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಮತ್ತು ಪಂತ್ ಕಡೆಯಿಂದ ಮತ್ತೊಂದು ಅಮೋಘ ಆಟ ಮೂಡಿಬಂತು. ರಿಷಭ್ ಪಂತ್ ಟಿ20 ಕ್ರಿಕೆಟ್‌ನಲ್ಲಿ ಮೂರನೇ ಅರ್ಧಶತಕ ದಾಖಲಿಸುವ ಮೂಲಕ 28 ಎಸೆತಗಳಲ್ಲಿ 52 ರನ್ ಸಿಡಿಸಿದರು. ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಅಯ್ಯರ್ ಕೂಡ ಸ್ಫೋಟಕ ಆಟವಾಡಿ 18 ಎಸೆತಗಳಲ್ಲಿ 33ರನ್‌ಗಳ ಕೊಡುಗೆ ನೀಡಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.

ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ಗೆ 3 ವಿಕೆಟ್‌ಗೆ 178 ರನ್ ಗಳಿಸಲಷ್ಟೇ ಸಾಧ್ಯವಾಯಿತು. 59 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ನಿಕೋಲಸ್ ಪೂರನ್ (62; 41 ಎಸೆತ, 5 ಬೌಂಡರಿ, 3 ಸಿಕ್ಸರ್‌) ಮತ್ತು ರೋವ್ಮನ್ ಪೊವೆಲ್ (68; 36 ಎ, 4 ಬೌಂ, 5 ಸಿಕ್ಸರ್) ಶತಕದ ಜೊತೆಯಾಟವಾಡಿ ಭರವಸೆ ಮೂಡಿಸಿದರಷ್ಟೆ. ವಿಂಡೀಸ್‌ ಗೆಲುವಿಗೆ ಕೊನೆಯ ನಾಲ್ಕು ಎಸೆತಗಳಲ್ಲಿ 23 ರನ್‌ಗಳ ಅವಶ್ಯಕತೆಯಿತ್ತು. ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಕೊನೆಯ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿದ್ದ ಪೊವೆಲ್ ಟೀಮ್ ಇಂಡಿಯಾ ಪಾಳಯದಲ್ಲಿ ಭಯ ಹುಟ್ಟಿಸಿದರು. ಆದರೆ ನಂತರದ ಎರಡು ಎಸೆತಗಳು ಸಿಂಗಲ್ಸ್‌ ತೆಗೆದುಕೊಂಡ ಪರಿಣಾಮ ಭಾರತ 8 ರನ್‌ಗಳಿಂದ ಪಂದ್ಯ ಗೆದ್ದು ಬೀಗಿತು. ಅಲ್ಲದೆ ಮೂರು ಪಂದ್ಯಗಳ ಸರಣಿಯನ್ನ 2-0ಯಿಂದ ಜಯಿಸಿತು.

IND vs WI: ರೋಹಿತ್ ಪಾಠ ಕೆಲಸ ಮಾಡಲಿಲ್ಲ! ಆರಂಭಿಕರಾಗಿ ಮತ್ತೊಮ್ಮೆ ವಿಫಲರಾದ ಇಶಾನ್ ಕಿಶನ್