ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

ಲಲಿತ್ ಮೋದಿ ಅವರು 2010ರ ಕೊಚ್ಚಿ ಟಸ್ಕರ್ಸ್ ಐಪಿಎಲ್ ವಿವಾದದ ಬಗ್ಗೆ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅಂದಿನ ಯುಪಿಎ ಸರ್ಕಾರ ಮತ್ತು ಬಿಸಿಸಿಐನಿಂದ ತೀವ್ರ ಒತ್ತಡ ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಶಶಿ ತರೂರ್, ಸೋನಿಯಾ ಗಾಂಧಿ, ಅಹ್ಮದ್ ಪಟೇಲ್, ಪ್ರಣಬ್ ಮುಖರ್ಜಿ ಮತ್ತು ಶಶಾಂಕ್ ಮನೋಹರ್ ಅವರ ಪಾತ್ರವನ್ನು ವಿವರಿಸಿದ್ದಾರೆ. ಸುನಂದಾ ಪುಷ್ಕರ್ ಅವರಿಗೆ ಉಚಿತ ಷೇರುಗಳ ಹಂಚಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ
ಲಲಿತ್ ಮೋದಿ
Edited By:

Updated on: Jun 04, 2026 | 4:07 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಲಲಿತ್ ಮೋದಿ ಅವರು 2010ರ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ವಿವಾದಕ್ಕೆ ಸಂಬಂಧಿಸಿದಂತೆ ದಶಕದ ಬಳಿಕ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅಂದಿನ ಯುಪಿಎ ಸರ್ಕಾರದ ಪ್ರಮುಖ ನಾಯಕರು ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಲಲಿತ್ ಮೋದಿ ಬಹಿರಂಗಪಡಿಸಿದ್ದಾರೆ.

ಸೋನಿಯಾ ಗಾಂಧಿ ಬೆಂಬಲ, ನಾಯಕರಿಂದ ಕರೆಗಳು

ಸಂದರ್ಶನವೊಂದರಲ್ಲಿ ಅಂದಿನ ಘಟನಾವಳಿಗಳನ್ನು ನೆನಪಿಸಿಕೊಂಡಿರುವ ಲಲಿತ್ ಮೋದಿ, ‘ಅಂದು ಶಶಿ ತರೂರ್ ಅವರಿಗೆ ಸೋನಿಯಾ ಗಾಂಧಿ ಅವರ ಸಂಪೂರ್ಣ ಬೆಂಬಲವಿತ್ತು. ಆ ದಿನಗಳಲ್ಲಿ ನನಗೆ ಅಹ್ಮದ್ ಪಟೇಲ್ ಮತ್ತು ಪ್ರಣಬ್ ಮುಖರ್ಜಿ ಅವರಿಂದ ಕರೆಗಳು ಬಂದಿದ್ದವು. ಅಹ್ಮದ್ ಪಟೇಲ್ ಬರುತ್ತಿದ್ದಾರೆ ಎಂದು ರಾಜೀವ್ ಶುಕ್ಲಾ ನನ್ನ ಬಳಿ ಬಂದು ಹೇಳುತ್ತಿದ್ದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಷೇರು ಹಂಚಿಕೆ ಬಗ್ಗೆ ಅನುಮಾನ

ಕೊಚ್ಚಿ ಫ್ರಾಂಚೈಸಿಯ ಆರ್ಥಿಕ ಒಪ್ಪಂದದ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ‘ಕೊಚ್ಚಿ ಕನ್ಸೋರ್ಟಿಯಂ ತಂಡಕ್ಕಾಗಿ 350 ಮಿಲಿಯನ್ ಡಾಲರ್ ನೀಡಲು ಷೇರುದಾರರು ಮುಂದಾಗಿದ್ದರು. ಅದು ಕೊಚ್ಚಿಯಂತಹ ತಂಡಕ್ಕೆ ಇಷ್ಟು ಹಣ ಕೊಡಲು ಯಾರಿಂದಾದರೂ ಸಾಧ್ಯವೇ? ತಂಡಕ್ಕೆ ಬರುವ ಒಟ್ಟು ಆದಾಯದ ಪ್ರತಿ ಡಾಲರ್‌ನಲ್ಲಿ ಶೇ. 15ರಷ್ಟು ಹಣ ಸುನಂದಾ ಪುಷ್ಕರ್ ಅವರಿಗೆ ಹೋಗುತ್ತಿತ್ತು. ಈ ಒಪ್ಪಂದ ಮುಂದೆ ಒಂದು ದಿನ ಕುಸಿಯುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು, ಎರಡು ವರ್ಷಗಳ ನಂತರ ಅದೇ ಆಯಿತು’ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕನ್ಸೋರ್ಟಿಯಂ ಸದಸ್ಯರ ಸಭೆಯ ವಿವರ ಹಂಚಿಕೊಂಡ ಲಲಿತ್ ಮೋದಿ, ‘ನಾನು ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪ್ರತಿಯೊಬ್ಬ ಸದಸ್ಯರನ್ನು ಭೇಟಿಯಾಗಲು ಬಯಸಿದ್ದೆ. ಬೆಂಗಳೂರಿನಲ್ಲಿ ಸಭೆ ನಡೆದಾಗ ಸುನಂದಾ ಪುಷ್ಕರ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಷೇರುದಾರರು ಉಪಸ್ಥಿತರಿದ್ದರು. ಸುನಂದಾ ಪುಷ್ಕರ್ ಅವರಿಗೆ ಶೇ. 25ರಷ್ಟು ಉಚಿತ ಷೇರುಗಳನ್ನು ನೀಡಲಾಗುತ್ತಿತ್ತು. ಅಂದರೆ ಇಲ್ಲಿ ಶೇ. 75ರಷ್ಟು ಶೇರುದಾರರು ಶೇ. 100ರಷ್ಟು ವೆಚ್ಚವನ್ನು ಭರಿಸುತ್ತಿದ್ದರು. ಸುನಂದಾ ಯಾರೆಂದು ನಾನು ಪ್ರಶ್ನಿಸಿದೆ ಮತ್ತು ಯಾರೆಂದು ತಿಳಿಯುವವರೆಗೂ ಸಹಿ ಮಾಡುವುದಿಲ್ಲ ಎಂದೆ. ತಕ್ಷಣವೇ ನನಗೆ ಅಂದಿನ ವಿದೇಶಾಂಗ ಖಾತೆಯ ಸಹಾಯಕ ಸಚಿವ ಶಶಿ ತರೂರ್ ಅವರಿಂದ ಕರೆ ಬಂತು’ ಎಂದು ಹೇಳಿದ್ದಾರೆ.

‘ಲಲಿತ್, ಸುನಂದಾ ಪುಷ್ಕರ್ ಬಗ್ಗೆ ಪ್ರಶ್ನಿಸಬೇಡ. ಹಾಗೆ ಮಾಡಿದರೆ ನಾಳೆ ಬೆಳಗ್ಗೆ ನಿನ್ನ ಮೇಲೆ ಐಟಿ ದಾಳಿ ಮಾಡಿಸುತ್ತೇನೆ ಎಂದು ಶಶಿ ತರೂರ್ ಬೆದರಿಕೆ ಹಾಕಿದರು. ನೀನು ದೇಶದ ವಿದೇಶಾಂಗ ಸಚಿವನಾಗಿರಬಹುದು, ಆದರೆ ನನಗೆ ಹೀಗೆ ಹೇಳುವ ಧೈರ್ಯ ಮಾಡಬೇಡ ಎಂದು ಹೇಳಿ ನಾನು ಫೋನ್ ಕಟ್ ಮಾಡಿದೆ’ ಎಂದು ಲಲಿತ್ ಮೋದಿ ಅಂದಿನ ಸಂಭಾಷಣೆಯನ್ನು ಬಿಚ್ಚಿಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷರಿಂದ ಒತ್ತಡ

ಮಧ್ಯರಾತ್ರಿ ನಡೆದ ಹೈಡ್ರಾಮಾ ಬಗ್ಗೆ ಮಾತನಾಡುತ್ತಾ, ‘ಅದು ಮಧ್ಯರಾತ್ರಿ 2 ಗಂಟೆಯ ಸಮಯ. ಸಾಮಾನ್ಯವಾಗಿ ಯಾವುದೇ ವಿಷಯದಲ್ಲೂ ತಲೆಹಾಕದ ಅಂದಿನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಂದ ನನಗೆ ಕರೆ ಬಂತು. ಲಲಿತ್, ನೀನು ಇಂದೇ ಈ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಅವರು ಹೇಳಿದರು. ನಾನು ಸದಾ ಅಧಿಕಾರದಲ್ಲಿದ್ದವರ ಮಾತಿಗೆ ಗೌರವ ನೀಡುತ್ತಿದ್ದೆ. ಹೀಗಾಗಿ, ನಾನು ಒತ್ತಡದ ಮಣಿದು ಈ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇನೆ ಮತ್ತು ಅಧ್ಯಕ್ಷರೇ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂಬುದನ್ನು ಉಲ್ಲೇಖಿಸಿಯೇ ಸಹಿ ಮಾಡುವುದಾಗಿ ಅವರಿಗೆ ತಿಳಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿಗೆ ಬರ್ತಾರೆ ಪಾಂಡ್ಯ? ದಿನೇಶ್ ಕಾರ್ತಿಕ್ ಜೊತೆಗಿನ ಫೋಟೋದ ಅಸಲಿ ಕಥೆಯೇ ಬೇರೆ

‘ಮರುದಿನ ಬೆಳಗ್ಗೆ ಎದ್ದು ಪತ್ರಿಕೆಗಳನ್ನು ನೋಡಿದಾಗ, ಮುಖಪುಟದಲ್ಲಿ ‘ಸುನಂದಾ ಪುಷ್ಕರ್ ಮತ್ತು ಶಶಿ ತರೂರ್ ವಿವಾಹವಾಗಲಿದ್ದಾರೆ’ ಎಂಬ ಸುದ್ದಿ ಇತ್ತು. ನಾನು ಅಂದು ರಾತ್ರಿ ಯಾಕೆ ಸಹಿ ಹಾಕಬೇಕಾಗಿ ಬಂತು ಎಂಬುದು ನನಗೆ ಆಗ ಅರ್ಥವಾಯಿತು’ ಎಂದು ಲಲಿತ್ ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Thu, 4 June 26

Loading...
Unable to load recommendations.
Follow Us