ಸೌರವ್ ಗಂಗೂಲಿ (Sourav Ganguly) ಭಾರತ ತಂಡದ ನಾಯಕತ್ವ ತೊರೆದು, ಕ್ರಿಕೆಟ್‌ನಿಂದ ನಿವೃತ್ತಿಯಾಗಿ ವರ್ಷಗಳೆ ಕಳೆದಿದೆ. ಆದರೆ, ಸ್ವಾತಂತ್ರ್ಯದ 75ನೇ ವರ್ಷಾಚರಣೆಯಂದು ನಡೆಯುವ ಮಹತ್ವದ ಪಂದ್ಯದಲ್ಲಿ ಅವರು ಮತ್ತೊಮ್ಮೆ ಭಾರತ ತಂಡದ ನಾಯಕತ್ವ ವಹಿಸಿ ಬ್ಯಾಟ್ ಬೀಸುವುದನ್ನು ಅಭಿಮಾನಿಗಳು ಕಾಣಬಹುದಾಗಿದೆ. ವಾಸ್ತವವಾಗಿ, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (Legends League cricket) ಎರಡನೇ ಸೀಸನ್‌ನಲ್ಲಿ, ಭಾರತದ ಇಂಡಿಯಾ ಮಹಾರಾಜಸ್ (India Maharaja) ತಂಡ ರೆಸ್ಟ್ ಆಫ್ ದಿ ವರ್ಲ್ಡ್ ತಂಡವನ್ನು (Rest of the World team) ಎದುರಿಸಲಿದೆ ಎಂದು ವರದಿಯಾಗಿದೆ. ಈ ಪಂದ್ಯ ಸೆಪ್ಟೆಂಬರ್ 16 ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ತಂಡವನ್ನು ಸಹ ಪ್ರಕಟಿಸಲಾಗಿದೆ.
ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದಂದು, ಭಾರತ ಮತ್ತು ರೆಸ್ಟ್ ಆಫ್ ದಿ ವರ್ಲ್ಡ್ ತಂಡದ ನಡುವಿನ ಪಂದ್ಯವನ್ನು ಭಾರತ ಸರ್ಕಾರ ಆಯೋಜಿಸಲಿದೆ.
10 ದೇಶಗಳ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ
ಈ ಪಂದ್ಯ ಇಂಡಿಯಾ ಮಹಾರಾಜಸ್ ತಂಡ ಮತ್ತು ರೆಸ್ಟ್ ಆಫ್ ದಿ ವರ್ಲ್ಡ್ ತಂಡದ ನಡುವೆ ನಡೆಯಲಿದ್ದು, ಈ ಪಂದ್ಯದಲ್ಲಿ 10 ದೇಶಗಳ ಆಟಗಾರರು ಭಾಗವಹಿಸಲಿದ್ದಾರೆ. ಈ ಮಹತ್ವದ ಪಂದ್ಯದ ಬಳಿಕ ಮರುದಿನದಿಂದ ಲೆಜೆಂಡ್ಸ್ ಲೀಗ್ ಆರಂಭವಾಗಲಿದ್ದು, ಇದರಲ್ಲಿ 4 ತಂಡಗಳು ಆಡಲಿವೆ. ಇದು ಲೀಗ್‌ನ ಎರಡನೇ ಸೀಸನ್ ಆಗಿದ್ದು, ಇದರಲ್ಲಿ 15 ಪಂದ್ಯಗಳು ನಡೆಯಲಿವೆ.
ಪಂದ್ಯಕ್ಕೆ ಸೌರವ್ ಗಂಗೂಲಿ ತಂಡ ಹೀಗಿದೆ
ಇಂಡಿಯಾ ಮಹಾರಾಜಸ್ ತಂಡದಲ್ಲಿ ಈ ಹಿಂದೆ ಟೀಂ ಇಂಡಿಯಾವನ್ನು ಆಳಿದ್ದ ಭಾರತದ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತಂಡದ ನಾಯಕತ್ವವನ್ನು ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ವಹಿಸಿಕೊಳ್ಳಲಿದ್ದಾರೆ.
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಎ. ಬದ್ರಿನಾಥ್, ಪ್ರಗ್ಯಾನ್ ಓಜಾ, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಆರ್‌ಪಿ ಸಿಂಗ್, ಅಜಯ್ ಜಡೇಜಾ, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಮತ್ತು ಇರ್ಫಾನ್ ಪಠಾಣ್
ರೆಸ್ಟ್ ಆಫ್ ದಿ ವರ್ಲ್ಡ್ ತಂಡ ಹೀಗಿರಲಿದೆ
ರೆಸ್ಟ್ ಆಫ್ ದಿ ವರ್ಲ್ಡ್ ತಂಡದ ನಾಯಕತ್ವ ಇಂಗ್ಲೆಂಡ್ನ ಮಾಜಿ ನಾಯಕ ಇಯಾನ್ ಮಾರ್ಗನ್ ಕೈಯಲ್ಲಿರಲಿದ್ದು, ಉಳಿದಂತೆ ತಂಡದಲ್ಲಿರುವ ಆಟಗಾರರ ವಿವರ ಈ ಕೆಳಗಿನಂತಿದೆ.
ಇಯಾನ್ ಮಾರ್ಗನ್ (ನಾಯಕ), ಹರ್ಷಲ್ ಗಿಬ್ಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ಲೆಂಡ್ಲ್ ಸಿಮನ್ಸ್, ಜಾಕ್ವೆಸ್ ಕಾಲಿಸ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮಶ್ರಫೆ ಮೊರ್ತಜಾ, ಅಸ್ಗರ್ ಅಫ್ಘಾನ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಒ ಬ್ರೆಟ್ಟಾಬ್ಜಾ, ದಿನೇಶ್ ರಾಮ್ದಿನ್, ಮಿಚೆಲ್ ಜಾನ್ಸನ್.
ಈ ವರ್ಷ ನಾವು ಲೀಗ್ ಅನ್ನು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ ಸಮರ್ಪಿಸುತ್ತಿದ್ದೇವೆ ಎಂದು ತಿಳಿಸಲು ಹೆಮ್ಮೆಪಡುತ್ತೇನೆ ಎಂದು ಲೀಗ್‌ನ ಕಮಿಷನರ್ ರವಿಶಾಸ್ತ್ರಿ ಹೇಳಿದ್ದಾರೆ.
Published On - 2:33 pm, Fri, 12 August 22