ಒಂದೇ ಓವರ್ನಲ್ಲಿ 36 ರನ್ ಬಾರಿಸಿದ ಬ್ಯಾಟರ್ಗಳ ಬಗ್ಗೆ ಕೇಳಿರುತ್ತೀರಿ… ಆದರೆ ಇಲ್ಲೊಬ್ಬರು ಬೌಲರ್ ಎರಡು ಓವರ್ಗಳಲ್ಲಿ 60 ರನ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅದು ಕೂಡ ಅಂತಾರಾಷ್ಟ್ರೀಯ ಕ್ರಿಕೆಟರ್ ಎಂಬುದು ವಿಶೇಷ. ವೆಸ್ಟ್ ಇಂಡೀಸ್ನ ಕೇಮನ್ ಐಲ್ಯಾಂಡ್ನಲ್ಲಿ ನಡೆಯುತ್ತಿರುವ ಮ್ಯಾಕ್ಸ್60 ಟಿ10 ಲೀಗ್ನಲ್ಲಿ ನೆದರ್ಲೆಂಡ್ಸ್ ಬೌಲರ್ ಲೋಗನ್ ವ್ಯಾನ್ ಬೀಕ್ ಬರೋಬ್ಬರಿ 60 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದು ಸಹ 12 ಎಸೆತಗಳಲ್ಲಿ ಎಂಬುದೇ ಅಚ್ಚರಿ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆರಿಬಿಯನ್ ಟೈಗರ್ಸ್ ತಂಡದ ಪರ ಜೋಶ್ ಬ್ರೌನ್ 23 ಎಸೆತಗಳಲ್ಲಿ 5 ಸಿಕ್ಸ್ಗಳೊಂದಿಗೆ 56 ರನ್ ಚಚ್ಚಿದ್ದರು. ಇನ್ನು ನಿಕ್ ಹಾಬ್ಸನ್ 12 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 40 ರನ್ ಸಿಡಿಸಿದರು. ಈ ಇಬ್ಬರ ಸಿಡಿಲಬ್ಬರಕ್ಕೆ ಸಿಲುಕಿದ ಲೋಗನ್ ವ್ಯಾನ್ ಬೀಕ್ ಮೊದಲ ಓವರ್ನಲ್ಲಿ 24 ರನ್ ನೀಡಿದ್ದರು.
ಇದಾದ ಬಳಿಕ ಮತ್ತೆ ದಾಳಿಗಿಳಿದ ಲೋಗನ್ ವ್ಯಾನ್ ಬೀಕ್ ಮೂರು ಸಿಕ್ಸ್, ಮೂರು ಫೋರ್, ಎರಡು ನೋ ಬಾಲ್, ಒಂದು ವೈಡ್, ನಾಲ್ಕು ರನ್ ಸಹಿತ ಒಟ್ಟು 36 ರನ್ಗಳನ್ನು ನೀಡಿದರು. ಈ ಮೂಲಕ ಕೇವಲ 2 ಓವರ್ಗಳಲ್ಲಿ 60 ರನ್ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಕೆರಿಬಿಯನ್ ಟೈಗರ್ಸ್ ತಂಡವು 10 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಗ್ರಾಂಡ್ ಕೇಮನ್ ಜಾಗ್ವಾರ್ಸ್ ತಂಡವು 10 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 88 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೆರಿಬಿಯನ್ ಟೈಗರ್ಸ್ ತಂಡವು 65 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇದಕ್ಕೂ ಮುನ್ನ ಲೋಗನ್ ವ್ಯಾನ್ ಬೀಕ್ ನ್ಯೂಝಿಲೆಂಡ್ನಲ್ಲಿ ನಡೆದ ಸೂಪರ್ ಸ್ಮ್ಯಾಶ್ ಟಿ20 ಲೀಗ್ನಲ್ಲಿ 5 ಎಸೆತಗಳಲ್ಲಿ 33 ರನ್ ನೀಡಿ ಸುದ್ದಿಯಾಗಿದ್ದರು. ಈ ಪಂದ್ಯದ ಕೊನೆಯ 4 ಓವರ್ಗಳಲ್ಲಿ 33 ರನ್ಗಳು ಬೇಕಿತ್ತು. ಈ ವೇಳೆ ದಾಳಿಗಿಳಿದ ವ್ಯಾನ್ ಬೀಕ್ 33 ರನ್ಗಳನ್ನು ನೀಡುವ ಮೂಲಕ ವೆಲ್ಲಿಂಗ್ಟನ್ ತಂಡದ ಸೋಲಿಗೆ ಕಾರಣರಾಗಿದ್ದರು. ಇದೀಗ ಮತ್ತೆ 60 ರನ್ಗಳೊಂದಿಗೆ ವ್ಯಾನ್ ಬೀಕ್ ಹೆಸರು ಮುನ್ನಲೆಗೆ ಬಂದಿದೆ.
ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?
ಅಂದಹಾಗೆ ಲೋಗನ್ ವ್ಯಾನ್ ಬೀಕ್ ನೆದರ್ಲೆಂಡ್ಸ್ ತಂಡದ ಖಾಯಂ ಸದಸ್ಯ. ಈಗಾಗಲೇ 33 ಏಕದಿನ ಪಂದ್ಯಗಳನ್ನಾಡಿರುವ ಅವರು 46 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 30 ಟಿ20 ಪಂದ್ಯಗಳಿಂದ 36 ವಿಕೆಟ್ ಉರುಳಿಸಿದ್ದಾರೆ. ಇನ್ನು ನೆದರ್ಲೆಂಡ್ಸ್ ಪರ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಆಡಿದ ಆಟಗಾರರಲ್ಲಿ ಲೋಗನ್ ವ್ಯಾನ್ ಬೀಕ್ ಕೂಡ ಒಬ್ಬರು. ಆದರೀಗ ಕೇವಲ 12 ಎಸೆತಗಳಲ್ಲಿ 60 ರನ್ ನೀಡುವ ಮೂಲಕ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.