AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವರಾಜ್ ಸಿಂಗ್ ದಾಖಲೆ ಉಡೀಸ್: ಒಂದೇ ಓವರ್​ನಲ್ಲಿ 39 ರನ್ ಚಚ್ಚಿದ ಡೇರಿಯಸ್

Darius Visser: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಅದು ಸಹ ಒಂದೇ ಓವರ್​ನಲ್ಲಿ 39 ರನ್ ಬಾರಿಸುವ ಮೂಲಕ ಎಂಬುದು ವಿಶೇಷ. ಇಂತಹದೊಂದು ವಿಶೇಷ ದಾಖಲೆ ಬರೆದಿರುವುದು ಸಮೋಅ ತಂಡದ ಸ್ಪೋಟಕ ದಾಂಡಿಗ ಡೇರಿಯಸ್ ವಿಸ್ಸರ್. ಈ ದಾಖಲೆಯೊಂದಿಗೆ ಡೇರಿಯಸ್ ಯುವರಾಜ್ ಸಿಂಗ್ ಅವರ ರೆಕಾರ್ಡ್ ಮುರಿದಿದ್ದಾರೆ.

ಯುವರಾಜ್ ಸಿಂಗ್ ದಾಖಲೆ ಉಡೀಸ್: ಒಂದೇ ಓವರ್​ನಲ್ಲಿ 39 ರನ್ ಚಚ್ಚಿದ ಡೇರಿಯಸ್
ಸಾಂದರ್ಭಿಕ ಚಿತ್ರ
ಝಾಹಿರ್ ಯೂಸುಫ್
|

Updated on:Aug 20, 2024 | 10:45 AM

Share

ಐಸಿಸಿ ಟಿ20 ವಿಶ್ವಕಪ್ ಈಸ್ಟ್ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 39 ರನ್ ಚಚ್ಚುವ ಮೂಲಕ ಸಮೋಅ ತಂಡದ ಆಟಗಾರ ಡೇರಿಯಸ್ ವಿಸ್ಸರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ದಾಖಲೆಗಳ ಸರದಾರ ಯುವರಾಜ್ ಸಿಂಗ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಪಿಯಾದ ಗಾರ್ಡನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಮೋಅ ಹಾಗೂ ವನವಾಟು ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಮೋಅ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸಮೋಅ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 10 ರನ್​ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಡೇರಿಯಸ್ ವಿಸ್ಸರ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡೇರಿಯಸ್, ವನವಾಟು ಬೌಲರ್​ಗಳ ಬೆಂಡೆತ್ತಿದರು. ಅದರಲ್ಲೂ ನಲಿನ್ ನಿಪಿಕೊ ಎಸೆದ 15ನೇ ಓವರ್​ನಲ್ಲಿ 39 ರನ್​ ಚಚ್ಚುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಈ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಡೇರಿಯಸ್ ವಿಸ್ಸರ್ ಸಿಕ್ಸರ್ ಸಿಡಿಸಿದರು. 4ನೇ ಎಸೆತ ನೋಬಾಲ್​, ಭರ್ಜರಿ ಸಿಕ್ಸ್. ಮರು ಎಸೆತದಲ್ಲಿ ಮತ್ತೊಂದು ಸಿಕ್ಸ್. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 6ನೇ ಎಸೆತ ನೋ ಬಾಲ್, ಮತ್ತೊಂದು ಸಿಕ್ಸ್. ಮರು ಎಸೆತ ನೋ ಬಾಲ್. ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್. ಈ ಮೂಲಕ ಡೇರಿಯಸ್ ವಿಸ್ಸರ್ ಒಟ್ಟು 39 ರನ್​ ಕಲೆಹಾಕಿದ್ದಾರೆ.

ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಡೇರಿಯಸ್ ವಿಸ್ಸರ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. 2007ರ ಟಿ20 ವಿಶ್ವಕಪ್​ನಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ 6 ಸಿಕ್ಸ್ ಬಾರಿಸಿ 36 ರನ್ ಗಳಿಸಿದ್ದರು. ಇದೀಗ 39 ರನ್​ಗಳೊಂದಿಗೆ ಡೇರಿಯಸ್ ವಿಸ್ಸರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

View this post on Instagram

A post shared by ICC (@icc)

ಇನ್ನು ಈ ಪಂದ್ಯದಲ್ಲಿ 62 ಎಸೆತಗಳನ್ನು ಎದುರಿಸಿದ ಡೇರಿಯಸ್ ವಿಸ್ಸರ್ 14 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 132 ರನ್ ಚಚ್ಚಿದರು. ಈ ಮೂಲಕ ಸಮೋಅ ತಂಡವು 20 ಓವರ್​ಗಳಲ್ಲಿ 174 ರನ್ ಕಲೆಹಾಕಿತು.

ಇದನ್ನೂ ಓದಿ: 9 ಭರ್ಜರಿ ಸಿಕ್ಸ್, 13 ಫೋರ್: ದಾಖಲೆಯ ಸೆಂಚುರಿ ಸಿಡಿಸಿದ ಕರುಣ್ ನಾಯರ್

ಈ ಗುರಿಯನ್ನು ಬೆನ್ನತ್ತಿದ ವನವಾಟು ತಂಡದ ಪರ ಆರಂಭಿಕ ಆಟಗಾರ ನಳಿನ್ ನಿಪಿಕೋ 73 ರನ್ ಬಾರಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಶುವಾ ರಾಸು 23 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ 20 ಓವರ್​ಗಳಲ್ಲಿ 164 ರನ್​ ಬಾರಿಸಿ 10 ರನ್​ಗಳಿಂದ ಸೋಲೊಪ್ಪಿಕೊಂಡಿತು.

Published On - 10:42 am, Tue, 20 August 24