- Kannada News Photo gallery Cricket photos IPL 2025: I Would love to be back playing for RCB- Manish Pandey
IPL 2025: RCB ಪರ ಮತ್ತೆ ಆಡಬೇಕೆಂಬ ಆಸೆಯಿದೆ: ಮನೀಶ್ ಪಾಂಡೆ
Manish Pandey: ಮನೀಶ್ ಪಾಂಡೆ ಐಪಿಎಲ್ನಲ್ಲಿ ಈವರೆಗೆ 7 ತಂಡಗಳ ಪರ ಆಡಿದ್ದಾರೆ. 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಪಾಂಡೆ ಆ ಬಳಿಕ ಆರ್‌ಸಿಬಿ, ಪುಣೆ ವಾರಿಯರ್ಸ್, ಸನ್ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಪರ ಬ್ಯಾಟ್ ಬೀಸಿದ್ದರು.
Updated on: Aug 20, 2024 | 8:31 AM

ಐಪಿಎಲ್ ಸೀಸನ್-18 ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮತ್ತೆ ಆಡಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಕರ್ನಾಟಕದ ಕ್ರಿಕೆಟಿಗ ಮನೀಶ್ ಪಾಂಡೆ. 2009 ಮತ್ತು 2010 ರಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿದ್ದ ಪಾಂಡೆ ಆ ಬಳಿಕ ತಂಡದಿಂದ ಹೊರಬಿದ್ದಿದ್ದರು.

ಇದಾದ ಬಳಿಕ ಹಲವು ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೂ ಮನೀಶ್ ಪಾಂಡೆಯನ್ನು ಖರೀದಿಸಲು ಆರ್‌ಸಿಬಿ ಪ್ರಾಂಚೈಸಿ ಆಸಕ್ತಿ ತೋರಿಸಿರಲಿಲ್ಲ. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿರುವ ಪಾಂಡೆ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಹೀಗಾಗಿಯೇ ಆರ್‌ಸಿಬಿ ಪರ ಮತ್ತೆ ಆಡಬೇಕೆಂಬ ಆಸೆಯಿದೆ ಎಂದು ಮನೀಶ್ ಪಾಂಡೆ ತಿಳಿಸಿದ್ದಾರೆ.

ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮನೀಶ್ ಪಾಂಡೆ, ಕರ್ನಾಟಕ ನನ್ನ ತವರೂರು ಆಗಿರುವುದರಿಂದ ನಾನು ಆರ್‌ಸಿಬಿ ಪರ ಆಡಲು ಇಷ್ಟಪಡುತ್ತೇನೆ. ನಾನು ಮಾತ್ರವಲ್ಲದೆ ಕರ್ನಾಟಕದ ಪ್ರತಿಯೊಬ್ಬ ಯುವ ಆಟಗಾರರು ಕೂಡ ಒಂದಲ್ಲ ಒಂದು ದಿನ ಆರ್‌ಸಿಬಿ ಪರ ಆಡುವ ಬಯಕೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿಂತಿರುಗುವ ಬಯಕೆಯನ್ನು ಮನೀಶ್ ಪಾಂಡೆ ವ್ಯಕ್ತಪಡಿಸಿದ್ದಾರೆ. ಅದರಂತೆ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಪಾಂಡೆಯನ್ನು ಆರ್‌ಸಿಬಿ ಫ್ರಾಂಚೈಸಿ ಮತ್ತೆ ಖರೀದಿಸಲಿದೆಯಾ ಕಾದು ನೋಡಬೇಕಿದೆ.

ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಪರ ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಮನೀಶ್ ಪಾಂಡೆ ಹೆಸರಿನಲ್ಲಿದೆ. 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 73 ಎಸೆತಗಳಲ್ಲಿ 114 ರನ್ ಬಾರಿಸುವ ಮೂಲಕ ಪಾಂಡೆ ಈ ದಾಖಲೆ ಬರೆದಿದ್ದರು. ವಿಶೇಷ ಎಂದರೆ ಇದು ಐಪಿಎಲ್ನಲ್ಲಿ ಭಾರತೀಯ ಬ್ಯಾಟರ್ನಿಂದ ಮೂಡಿಬಂದ ಮೊದಲ ಶತಕವಾಗಿತ್ತು.

RCB ಪರ ಮನೀಶ್ ಪಾಂಡೆ ಎರಡು ಸೀಸನ್ಗಳಲ್ಲಿ ಒಟ್ಟು 18 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಭರ್ಜರಿ ಶತಕದೊಂದಿಗೆ 417 ರನ್ ಕಲೆಹಾಕಿದ್ದಾರೆ. ಇದಾದ ಬಳಿಕ ಆರ್‌ಸಿಬಿ ತಂಡದಿಂದ ಹೊರಬಿದ್ದಿದ್ದ ಪಾಂಡೆ, ಪುಣೆ ವಾರಿಯರ್ಸ್, ಎಸ್ಆರ್ಹೆಚ್, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದರು.
