LPL 2024: ಜಾಫ್ನಾ ಕಿಂಗ್ಸ್​ ಚಾಂಪಿಯನ್ಸ್​

Jaffna Kings: ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಜಾಫ್ನಾ ಕಿಂಗ್ಸ್ ತಂಡವು ನಾಲ್ಕನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2020, 2021 ಮತ್ತು 2022 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಜಾಫ್ನಾ ತಂಡವು ಈ ಬಾರಿ ಗಾಲೆ ಮಾರ್ವೆಲ್ಸ್ ತಂಡವನ್ನು ಬಗ್ಗು ಬಡಿದು ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಏಕೈಕ ತಂಡ ಎನಿಸಿಕೊಂಡಿದೆ.

LPL 2024: ಜಾಫ್ನಾ ಕಿಂಗ್ಸ್​ ಚಾಂಪಿಯನ್ಸ್​
Jaffna Kings

Updated on: Jul 22, 2024 | 7:20 AM

ಶ್ರೀಲಂಕಾದಲ್ಲಿ ನಡೆದ ಲಂಕಾ ಪ್ರೀಮಿಯರ್‌ ಲೀಗ್‌‌ನ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಜಾಫ್ನಾ ಕಿಂಗ್ಸ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ಹಾಗೂ ಗಾಲೆ ಮಾರ್ವೆಲ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಾಫ್ನಾ ಕಿಂಗ್ಸ್ ತಂಡದ ನಾಯಕ ಚರಿತ್ ಅಸಲಂಕಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗಾಲೆ ಮಾರ್ವೆಲ್ಸ್ ತಂಡಕ್ಕೆ ಜಾಫ್ನಾ ವೇಗಿಗಳು ಆರಂಭಿಕ ಆಘಾತ ನೀಡಿದರು. ಆರಂಭಿಕಾದ ಅಲೆಕ್ಸ್ ಹೇಲ್ (6) ಹಾಗೂ ಡಿಕ್ವೆಲ್ಲಾ (5) ಅವರನ್ನು ಪವರ್ ಪ್ಲೇನಲ್ಲೇ ಔಟ್ ಮಾಡುವಲ್ಲಿ ಜೇಸನ್ ಬೆಹ್ರೆಂಡೋರ್ಫ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಜನಿತ್ (7) ವಿಕೆಟ್ ಕಬಳಿಸಿ ಅಸಿತ ಫರ್ನಾಂಡೊ ಮೂರನೇ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ ಟಿಮ್ ಸೀಫರ್ಟ್ ಹಾಗೂ ಭಾನುಕಾ ರಾಜಪಕ್ಸೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿದರು. ಒಂದೆಡೆ ಸೀರ್ಫರ್ಟ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ಭಾನುಕಾ ಅಬ್ಬರಿಸಿದರು. ಪರಿಣಾಮ 7 ಓವರ್‌ಗಳಲ್ಲಿ 24 ರನ್ ಮಾತ್ರ ಕಲೆಹಾಕಿದ್ದ ಗಾಲೆ ಮಾರ್ವೆಲ್ಸ್ ತಂಡವು 12 ಓವರ್ ಮುಕ್ತಾಯದ ವೇಳೆಗೆ 86 ರನ್ ಪೇರಿಸಿತು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಟಿಮ್ ಸೀಫರ್ಟ್ (47) ಔಟಾದರು.

ಇದಾಗ್ಯೂ ಸಿಡಿಲಬ್ಬರ ಮುಂದುವರೆಸಿದ ಭಾನುಕಾ ರಾಜಪಕ್ಸೆ ಸಿಕ್ಸ್ – ಫೋರ್ ಗಳ ಸುರಿಮಳೆಗೈದರು. ಅಲ್ಲದೆ ಕೇವಲ 34 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ ಗಳೊಂದಿಗೆ 82 ರನ್ ಚಚ್ಚಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಗಾಲೆ ಮಾರ್ವೆಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು.

185 ರನ್ ಗಳ ಟಾರ್ಗೆಟ್- ರೊಸ್ಸೊ ಶೋ:

185 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಜಾಫ್ನಾ ಕಿಂಗ್ಸ್ ತಂಡವು ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಂಕಾ (0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಜೊತೆಗೂಡಿದ ಕುಸಾಲ್ ಮೆಂಡಿಸ್ ಮತ್ತು ರೈಲಿ ರೊಸ್ಸೊ ಅದ್ಭುತವಾಗಿ ಇನಿಂಗ್ಸ್ ಕಟ್ಟಿದ್ದರು. ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಿದ್ದ ಈ ಜೋಡಿ ಗಾಲೆ ಮಾರ್ವೆಲ್ಸ್ ಬೌಲರ್‌ಗಳ ಬೆಂಡೆತ್ತಿದರು. ಪರಿಣಾಮ 10 ಓವರ್ ಮುಗಿಯುವಷ್ಟರಲ್ಲಿ ತಂಡದ ಮೊತ್ತ 110 ಕ್ಕೆ ಬಂದು ನಿಂತಿತು.

ಇತ್ತ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ ರೈಲಿ ರೊಸ್ಸೊ ಮೈದಾನದ ಮೂಲೆ ಮೂಲೆಗೆ ಸಿಕ್ಸ್ – ಫೋರ್ ಗಳನ್ನಟ್ಟಿದರು. ಈ ಮೂಲಕ ಕೇವಲ 50 ಎಸೆತಗಳಲ್ಲಿ ಸಿಡಿಲಬ್ಬರದ ಸೆಂಚುರಿ ಪೂರೈಸಿದರು.

ಅಂತಿಮವಾಗಿ ಕುಸಾಲ್ ಮೆಂಡಿಸ್ 40 ಎಸೆತಗಳಲ್ಲಿ 2 ಸಿಕ್ಸ್ ಮತ್ತು 8 ಫೋರ್ ಗಳೊಂದಿಗೆ ಅಜೇಯ 72 ರನ್ ಬಾರಿಸಿದರೆ, ರೈಲಿ ರೊಸ್ಸೊ 53 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಮತ್ತು 9 ಫೋರ್ ಗಳೊಂದಿಗೆ ಅಜೇಯ 106 ರನ್ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಜಾಫ್ನಾ ಕಿಂಗ್ಸ್ ತಂಡವು 15.4 ಓವರ್‌ಗಳಲ್ಲಿ 185 ರನ್​ಗಳ ಗುರಿ ಮುಟ್ಟುವ ಮೂಲಕ 9 ವಿಕೆಟ್ ಗಳ ಅಮೋಘ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಜಾಫ್ನಾ ಕಿಂಗ್ಸ್ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದಕ್ಕೂ ಮುನ್ನ 2020 (ಜಾಫ್ನಾ ಸ್ಟಾಲಿನ್ಸ್), 2021 ಮತ್ತು 2022 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ 4ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಜಾಫ್ನಾ ತಂಡ ಯಶಸ್ವಿಯಾಗಿದೆ.

ಗಾಲೆ ಮಾರ್ವೆಲ್ಸ್ ಪ್ಲೇಯಿಂಗ್ 11: ಅಲೆಕ್ಸ್ ಹೇಲ್ಸ್ , ನಿರೋಶನ್ ಡಿಕ್ವೆಲ್ಲಾ (ನಾಯಕ) , ಟಿಮ್ ಸೀಫರ್ಟ್ , ಜನಿತ್ ಲಿಯಾನಾಗೆ , ಭಾನುಕಾ ರಾಜಪಕ್ಸೆ , ಸಹನ್ ಅರಾಚ್ಚಿಗೆ , ಇಸುರು ಉಡಾನಾ , ಡ್ವೈನ್ ಪ್ರಿಟೋರಿಯಸ್ , ಪ್ರಭಾತ್ ಜಯಸೂರ್ಯ , ಕವಿಂದು ನದೀಶನ್ , ಮಹೀಶ್ ತೀಕ್ಷಣ.

ಇದನ್ನೂ ಓದಿ: IPL 2025: RCB ತಂಡಕ್ಕೆ ಕೆಎಲ್ ರಾಹುಲ್ ರಿಎಂಟ್ರಿ?

ಜಾಫ್ನಾ ಕಿಂಗ್ಸ್ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ , ರೈಲಿ ರೊಸ್ಸೊ, ಅವಿಷ್ಕ ಫೆರ್ನಾಂಡೋ , ಚರಿತ್ ಅಸಲಂಕಾ ( ನಾಯಕ) , ಧನಂಜಯ ಡಿ ಸಿಲ್ವಾ , ಅಜ್ಮತುಲ್ಲಾ ಒಮರ್ಜಾಯ್ , ಫ್ಯಾಬಿಯನ್ ಅಲೆನ್ , ವಿಜಯಕಾಂತ್ ವಿಯಾಸ್ಕಾಂತ್ , ಜೇಸನ್ ಬೆಹ್ರೆಂಡೋರ್ಫ್.