ರಣರೋಚಕ ಫೈನಲ್ ಪಂದ್ಯ: ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ಸ್
Maharaja Trophy 2023: ಫೈನಲ್ ಪಂದ್ಯದಲ್ಲಿ ಕೇವಲ 40 ಎಸೆತಗಳನ್ನು ಎದುರಿಸಿದ ಮೊಹಮ್ಮದ್ ತಾಹ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 72 ರನ್ ಚಚ್ಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಮನೀಶ್ ಪಾಂಡೆ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
Maharaja Trophy 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಹುಬ್ಬಳ್ಳಿ ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಬೌಲಿಂಗ್ ಆಯ್ದುಕೊಂಡರು.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಆರಂಭಿಸಿದ ಮೈಸೂರು ವಾರಿಯರ್ಸ್ ತಂಡಕ್ಕೆ ಕಾರ್ತಿಕ್ ಮೊದಲ ಓವರ್ನಲ್ಲೇ ಯಶಸ್ಸು ತಂದುಕೊಟ್ಟರು. ಲವ್ನೀತ್ ಸಿಸೋಡಿಯಾ (0) ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ಸಂಭ್ರಮ ಮುಗಿಯುತ್ತಿದ್ದಂತೆ ಅತ್ತ ಮತ್ತೋರ್ವ ಆರಂಭಿಕ ಆಟಗಾರ ಮೊಹಮ್ಮದ್ ತಾಹ ಸಿಡಿಲಬ್ಬರ ಆರಂಭಿಸಿದ್ದರು.
ಆರಂಭಿಕ ಆಘಾತವನ್ನು ಲೆಕ್ಕಿಸದೇ ಹೊಡಿಬಡಿ ಬ್ಯಾಟಿಂಗ್ ಪ್ರದರ್ಶಿಸಿದ ತಾಹ ಮೈಸೂರು ವಾರಿಯರ್ಸ್ ಬೌಲರ್ಗಳ ಬೆಂಡೆತ್ತಿದರು. ಇತ್ತ ತಾಹಗೆ ಎಡಗೈ ದಾಂಡಿಗ ಕೃಷ್ಣನ್ ಶ್ರೀಜಿತ್ ಕೂಡ ಉತ್ತಮ ಸಾಥ್ ನೀಡಿದರು. ಪರಿಣಾಮ 6 ಓವರ್ಗಳಲ್ಲೇ ತಂಡದ ಮೊತ್ತ 59 ಕ್ಕೆ ಬಂದು ನಿಂತಿತು.
2ನೇ ವಿಕೆಟ್ಗೆ 89 ರನ್ಗಳ ಜೊತೆಯಾಟವಾಡಿದ ಬಳಿಕ ಕೃಷ್ಣನ್ ಶ್ರೀಜಿತ್ (38) ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ತಾಹ ಅವರ ಬಿರುಗಾಳಿ ಬ್ಯಾಟಿಂಗ್ನ್ನು ತಡೆಯಲು ಮೈಸೂರು ವಾರಿಯರ್ಸ್ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ.
ಪರಿಣಾಮ ಕೇವಲ 40 ಎಸೆತಗಳಲ್ಲಿ ಮೊಹಮ್ಮದ್ ತಾಹ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 72 ರನ್ ಚಚ್ಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಮನೀಶ್ ಪಾಂಡೆ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
23 ಎಸೆತಗಳನ್ನು ಎದುರಿಸಿದ ಪಾಂಡೆ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಇದರೊಂದಿಗೆ ಹುಬ್ಬಳ್ಳಿ ಟೈಗರ್ಸ್ ತಂಡದ ಮೊತ್ತ 8 ವಿಕೆಟ್ ನಷ್ಟಕ್ಕೆ 203 ಕ್ಕೆ ಬಂದು ನಿಂತಿತು.
60 seconds of pure power-hitting bliss. 🔥🤩
Reliving some big hits from Hubli Tigers’ 1st innings. 📹#TheFinal #IlliGeddavareRaja #MaharajaTrophy #KSCA #Karnataka pic.twitter.com/ytyzFRUFGj
— Maharaja Trophy T20 (@maharaja_t20) August 29, 2023
204 ರನ್ಗಳ ಕಠಿಣ ಗುರಿ ಪಡೆದ ಮೈಸೂರು ವಾರಿಯರ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ರವಿಕುಮಾರ್ ಸಮರ್ಥ್ ಹಾಗೂ ಕಾರ್ತಿಕ್ ಭರ್ಜರಿ ಆರಂಭ ಒದಗಿಸಿದ್ದರು. 5.2 ಓವರ್ಗಳಲ್ಲಿ ಮೊದಲ ವಿಕೆಟ್ಗೆ 57 ರನ್ ಕಲೆಹಾಕಿ ಕಾರ್ತಿಕ್ (28) ವಿಕೆಟ್ ಒಪ್ಪಿಸಿದರು.
ಇನ್ನೊಂದೆಡೆ ಸಮರ್ಥ್ ಅವರ ಆರ್ಭಟದ ಮುಂದೆ ಹುಬ್ಬಳ್ಳಿ ಟೈಗರ್ಸ್ ಬೌಲರ್ಗಳು ಹೈರಾಣರಾದರು. ಕೇವಲ 35 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಫೋರ್ಗಳೊಂದಿಗೆ 63 ರನ್ ಸಿಡಿಸಿ ರವಿಕುಮಾರ್ ಸಮರ್ಥ್ ರನೌಟ್ ಆದರು. ಆದರೆ ಅಷ್ಟರಲ್ಲಾಗಲೇ ಮೈಸೂರು ವಾರಿಯರ್ಸ್ ತಂಡದ ಮೊತ್ತ 11.2 ಓವರ್ಗಳಲ್ಲಿ 113 ಕ್ಕೆ ಬಂದು ನಿಂತಿತ್ತು.
ಇನ್ನು ಕರುಣ್ ನಾಯರ್ 20 ಎಸೆತಗಳಲ್ಲಿ 37 ರನ್ಗಳ ಕೊಡುಗೆ ನೀಡಿದರೆ, ಲಂಕೇಶ್ ಕೇವಲ 13 ರನ್ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹುಬ್ಬಳ್ಳಿ ಟೈಗರ್ಸ್ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಪರಿಣಾಮ ಮೈಸೂರು ವಾರಿಯರ್ಸ್ ತಂಡಕ್ಕೆ ಗೆಲ್ಲಲು ಕೊನೆಯ 4 ಓವರ್ಗಳಲ್ಲಿ 47 ರನ್ಗಳು ಬೇಕಿತ್ತು. ಈ ಹಂತದಲ್ಲಿ ಕೋದಂಡ ಅಜಿತ್ ಒಂದಷ್ಟು ಉತ್ತಮ ಹೊಡೆತಗಳೊಂದಿಗೆ 18 ರನ್ಗಳಿಸಿ ಔಟಾದರು. ಕೊನೆಯ 12 ಎಸೆತಗಳಲ್ಲಿ 26 ರನ್ಗಳ ಟಾರ್ಗೆಟ್ ಪಡೆಯಿತು. ಈ ಹಂತದಲ್ಲಿ ರಕ್ಷಿತ್ ಸಿಕ್ಸರ್ ಸಿಡಿಸಿದರೆ, ಜಗದೀಶ್ ಸುಚಿತ್ ಫೋರ್ ಬಾರಿಸಿದರು.
ಇದರೊಂದಿಗೆ ಪಂದ್ಯವು ಕೊನೆಯ ಓವರ್ ರೋಚಕಯತ್ತ ಸಾಗಿತು. ಅಂತಿಮ ಓವರ್ನಲ್ಲಿ 12 ರನ್ಗಳು ಬೇಕಿತ್ತು. ಕೊನೆಯ ಓವರ್ನ ಮೊದಲ ಎಸೆತದಲ್ಲೇ ಮನ್ವಂತ್ ಕುಮಾರ್, ರಕ್ಷಿತ್ (10) ವಿಕೆಟ್ ಪಡೆದರು. 2ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ನೀಡಿದರು.
3ನೇ ಎಸೆತದಲ್ಲಿ 1 ರನ್. 4ನೇ ಎಸೆತದಲ್ಲೂ ಕೇವಲ 1 ರನ್ ನೀಡಿದರು. 5ನೇ ಎಸೆತದಲ್ಲಿ ಜಗದೀಶ್ ಸುಚಿತ್ (13) ಕ್ಯಾಚ್ ನೀಡಿದರು. ಕೊನೆಯ ಎಸೆತದಲ್ಲಿ 9 ರನ್ಗಳ ಗುರಿ ಪಡೆದ ಮೈಸೂರು ವಾರಿಯರ್ಸ್ ತಂಡವು 8 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹುಬ್ಬಳ್ಳಿ ಟೈಗರ್ಸ್- 203/8 (20)
ಮೈಸೂರು ವಾರಿಯರ್ಸ್- 195/8 (20)
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಲವ್ನಿತ್ ಸಿಸೋಡಿಯಾ , ಮೊಹಮ್ಮದ್ ತಾಹ , ಕೃಷ್ಣನ್ ಶ್ರೀಜಿತ್ , ಸಂಜಯ್ ಅಶ್ವಿನ್ ( ವಿಕೆಟ್ ಕೀಪರ್) , ಮನೀಶ್ ಪಾಂಡೆ (ನಾಯಕ) , ಪ್ರವೀಣ್ ದುಬೆ , ಮನ್ವಂತ್ ಕುಮಾರ್ ಎಲ್ , ಲವಿಶ್ ಕೌಶಲ್ , ಎಂಬಿ ದರ್ಶನ್ , ಕೆ.ಸಿ ಕಾರ್ಯಪ್ಪ, ವಿಧ್ವತ್ ಕಾವೇರಪ್ಪ.
ಇದನ್ನೂ ಓದಿ: Asia Cup 2023: ಏಷ್ಯಾಕಪ್ 6 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಕೋದಂಡ ಅಜಿತ್ ಕಾರ್ತಿಕ್ , ಕರುಣ್ ನಾಯರ್ (ನಾಯಕ) , ಮನೋಜ್ ಭಾಂಡಗೆ , ಲಂಕೇಶ್ ಕೆ ಎಸ್ , ಶಿವಕುಮಾರ್ ರಕ್ಷಿತ್ ( ವಿಕೆಟ್ ಕೀಪರ್ ) , ಜಗದೀಶ ಸುಚಿತ್ , ಮೋನಿಶ್ ರೆಡ್ಡಿ , ಶಶಿ ಕುಮಾರ್ ಕೆ , ಕುಶಾಲ್ ವಾಧ್ವನಿ , ಗೌತಮ್ ಮಿಶ್ರಾ.