6,6,6,6,6: ತಾಹ ತೂಫಾನ್​ಗೆ ಶಿವಮೊಗ್ಗ ಲಯನ್ಸ್ ತತ್ತರ

|

Updated on: Aug 21, 2024 | 7:59 AM

Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮಂಗಳೂರು ಡ್ರಾಗನ್ಸ್ ವಿರುದ್ಧ 15 ರನ್​ಗಳ ಜಯ ಸಾಧಿಸಿದ್ದ ಹುಬ್ಬಳ್ಳಿ ಟೈಗರ್ಸ್ ಆ ಬಳಿಕ ಮೈಸೂರು ವಾರಿಯರ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿತ್ತು. ಇನ್ನು ಬೆಂಗಳೂರು ಬ್ಲಾಸ್ಟರ್ ವಿರುದ್ಧ 5 ವಿಕೆಟ್​ಗಳ ಜಯ ಸಾಧಿಸಿದರೆ, ಶಿವಮೊಗ್ಗ ಲಯನ್ಸ್ ತಂಡವನ್ನು 8 ವಿಕೆಟ್​ಗಳಿಂದ ಬಗ್ಗು ಬಡಿದಿದೆ.

6,6,6,6,6: ತಾಹ ತೂಫಾನ್​ಗೆ ಶಿವಮೊಗ್ಗ ಲಯನ್ಸ್ ತತ್ತರ
Mohammed Taha
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 11ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಮಳೆಬಾಧಿತ ಈ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಟಾಸ್ ಗೆದ್ದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಶಿವಮೊಗ್ಗ ಲಯನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ರಾಜ್ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 35 ರನ್ ಬಾರಿಸಿದರು. ಇನ್ನು ಶಿವರಾಜ್ 24 ರನ್​ಗಳ ಕೊಡುಗೆ ನೀಡಿದರೆ, ಅಭಿನಯ್ ಮನೋಹರ್ 17 ರನ್ ಸಿಡಿಸಿದರು. ಈ ಮೂಲಕ ಶಿವಮೊಗ್ಗ ಲಯನ್ಸ್ ತಂಡವು 17 ಓವರ್​ಗಳಲ್ಲಿ 137 ರನ್ ಕಲೆಹಾಕಿತು.

ತಾಹ ತೂಫಾನ್:

ದ್ವಿತೀಯ ಇನಿಂಗ್ಸ್ ವೇಳೆ ಮಳೆ ಬಂದಿದ್ದರಿಂದ ವಿಜೆಡಿ ನಿಯಮದ ಪ್ರಕಾರ, ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 5 ಓವರ್​ಗಳಲ್ಲಿ 51 ರನ್​ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಲು ಬಂದ ತಿಪ್ಪಾ ರೆಡ್ಡಿ 1 ರನ್​ಗಳಿಸಿ ಔಟಾದರು. ಮೊದಲ ವಿಕೆಟ್ ಸಿಗುತ್ತಿದ್ದಂತೆ ಶಿವಮೊಗ್ಗ ಲಯನ್ಸ್ ತಂಡ ಗೆಲುವಿನ ಭರವಸೆ ಹೆಚ್ಚಾಯಿತು.

ಆದರೆ ಮತ್ತೋರ್ವ ಆರಂಭಿಕ ಆಟಗಾರ ಮೊಹಮ್ಮದ್ ತಾಹ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಶಿವಮೊಗ್ಗ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ತಾಹ ಮೈದಾನದ ಮೂಲೆ ಮೂಲೆಗೂ ಸಿಕ್ಸ್​ಗಳನ್ನು ಸಿಡಿಸಿದರು. ಅಲ್ಲದೆ ಕೇವಲ 12 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 35 ರನ್​ ಚಚ್ಚಿದರು.

ಈ ಸ್ಪೋಟಕ ಬ್ಯಾಟಿಂಗ್ ಪರಿಣಾಮ ಹುಬ್ಬಳ್ಳಿ ಟೈಗರ್ಸ್ ತಂಡವು 3.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 51 ರನ್​ಗಳ ಗುರಿ ಮುಟ್ಟಿದೆ. ಈ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಶಿವಮೊಗ್ಗ ಲಯನ್ಸ್ ಪ್ಲೇಯಿಂಗ್ 11: ರೋಹಿತ್ ಕೆ , ನಿಹಾಲ್ ಉಳ್ಳಾಲ್ (ನಾಯಕ) , ಧ್ರುವ ಪ್ರಭಾಕರ್ , ಆದಿತ್ಯ ವಿಶ್ವ ಕರ್ಮ , ಅಭಿನವ್ ಮನೋಹರ್ , ಎಸ್ ಶಿವರಾಜ್ , ಹಾರ್ದಿಕ್ ರಾಜ್ , ಭರತ್ ಧುರಿ , ಆದಿತ್ಯ ಮಣಿ , ವಾಸುಕಿ ಕೌಶಿಕ್ , ಪ್ರದೀಪ್ ಟಿ.

ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?

ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಮೊಹಮ್ಮದ್ ತಾಹ, ತಿಪ್ಪಾ ರೆಡ್ಡಿ, ಕೃಷ್ಣನ್ ಶ್ರೀಜಿತ್ , ಮನೀಶ್ ಪಾಂಡೆ (ನಾಯಕ) , ಅನೀಶ್ವರ್ ಗೌತಮ್ , ಕಾರ್ತಿಕೇಯ ಕೆ ಪಿ , ಎಲ್ ಆರ್ ಕುಮಾರ್ , ನಿಶ್ಚಿತ್ ಪೈ , ಕೆ ಸಿ ಕಾರ್ಯಪ್ಪ , ವಿಧ್ವತ್ ಕಾವೇರಪ್ಪ , ಶ್ರೀಶ ಆಚಾರ್.