ವಿಜಯ ಹಝಾರೆ ಟೂರ್ನಿಗಾಗಿ ಕರ್ನಾಟಕ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. 32 ಸದಸ್ಯರ ಈ ಬಳಗದಿಂದ ಅನುಭವಿ ಬ್ಯಾಟರ್ ಮನೀಶ್ ಪಾಂಡೆಯನ್ನು ಹೊರಗಿಡಲಾಗಿದೆ. ಇದರೊಂದಿಗೆ ಕರ್ನಾಟಕ ತಂಡದಲ್ಲಿ ಪಾಂಡ್ಯ ಯುಗಾಂತ್ಯವಾಗಿರುವುದು ಖಚಿತವಾಗಿದೆ. ಮುಂಬರುವ ವಿಜಯ ಹಝಾರೆ ಹಾಗೂ ರಣಜಿ ಟೂರ್ನಿಯಲ್ಲಿ ಮನೀಶ್ ಪಾಂಡೆ ಕರ್ನಾಟಕ ಪರ ಕಣಕ್ಕಿಳಿಯುವುದಿಲ್ಲ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿ 35 ವರ್ಷದ ಪಾಂಡೆ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಕೆಎಸ್‌ಸಿಎ ಆಯ್ಕೆ ಸಮಿತಿ ಅಧ್ಯಕ್ಷ ಜೆ.ಅಭಿರಾಮ್ ತಿಳಿಸಿದ್ದಾರೆ.
ಮನೀಶ್ ಪಾಂಡೆ ಅದ್ಭುತ ವೃತ್ತಿಜೀವನವನ್ನು ಹೊಂದಿದ್ದಾರೆ. ಅದರ ಬಗ್ಗೆ ಸಂದೇಹವಿಲ್ಲ. ಆದರೆ ಕೆಲವು ಹಂತದಲ್ಲಿ, ನೀವು ಯುವಕರಿಗೆ ದಾರಿ ಮಾಡಿಕೊಡಬೇಕಾಗುತ್ತದೆ. ನಮ್ಮಲ್ಲಿ ಕೆಲವು ಅತ್ಯಾಕರ್ಷಕ ಯುವ ಬ್ಯಾಟರ್‌ಗಳಿದ್ದಾರೆ. ಪ್ರಖರ್ ಚತುರ್ವೇದಿ, ಅನೀಶ್ವರ್ ಗೌತಮ್, ಕೆವಿ ಅನೀಶ್, ಇವರಿಗೆ ಹೆಚ್ಚು ಅವಕಾಶಗಳು ಸಿಕ್ಕಷ್ಟು ಉತ್ತಮ ಎಂದು ಅಭಿರಾಮ್ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಈ ಬಾರಿಯ ರಣಜಿ ಟೂರ್ನಿಯ ಮೊದಲ ಸುತ್ತಿನಲ್ಲಿ ಮನೀಶ್ ಪಾಂಡೆ ಕರ್ನಾಟಕ ತಂಡದ ಉಪನಾಯಕರಾಗಿದ್ದರು. ಆದರೆ ಮುಂದಿನ ತಿಂಗಳು ನಡೆಯಲಿರುವ ದ್ವಿತೀಯ ಸುತ್ತಿನಲ್ಲಿ ಪಾಂಡೆ ಕರ್ನಾಟಕ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದನ್ನು ಖುದ್ದು ಆಯ್ಕೆ ಸಮಿತಿ ಅಧ್ಯಕ್ಷರಾದ ಅಭಿರಾಮ್ ಅವರು ಖಚಿತಪಡಿಸಿದ್ದಾರೆ.
ಇದರೊಂದಿಗೆ ಕರ್ನಾಟಕ ತಂಡದಲ್ಲಿ ಮನೀಶ್ ಪಾಂಡೆ ವೃತ್ತಿಜೀವನ ಕೊನೆಗೊಂಡಿರುವುದು ಖಚಿತವಾಗಿದೆ. ಇದಾಗ್ಯೂ ಪಾಂಡೆ ಮುಂದಿನ ದಿನಗಳಲ್ಲಿ ಬೇರೊಂದು ರಾಜ್ಯವನ್ನು ಪ್ರತಿನಿಧಿಸಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: RCB ಟಾರ್ಗೆಟ್ ಲಿಸ್ಟ್ ಔಟ್: ಕನ್ನಡಿಗನನ್ನು ಕಡೆಗಣಿಸಿರುವುದು ಬಹಿರಂಗ..!
ಕರ್ನಾಟಕ ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಎಲ್ ಆರ್ ಚೇತನ್, ಮ್ಯಾಕ್ನೀಲ್ ನೊರೊನ್ಹ, ಶ್ರೇಯಸ್ ಗೋಪಾಲ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ವಿ. ಕೌಶಿಕ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಅಭಿಲಾಷ್ ಶೆಟ್ಟಿ, ಆರ್. ಸ್ಮರನ್, ಲವ್ನೀತ್ ಸಿಸೋಡಿಯಾ, ವಿ.ವೈಶಾಕ್, ಮನ್ವಂತ್ ಕುಮಾರ್, ಯಶೋವರ್ಧನ್ ಪರಂತಪ್, ಪ್ರವೀಣ್ ದುಬೆ, ಎಂ.ವೆಂಕಟೇಶ್, ನಿಕಿನ್ ಜೋಸ್, ಕೆ.ವಿ ಅನೀಶ್, ಕೆ.ಶಶಿಕುಮಾರ್, ಪಾರಸ್ ಗುರ್ಬಕ್ಸ್ ಆರ್ಯ, ಶಿಖರ್ ಶೆಟ್ಟಿ, ಕಿಶನ್ ಬೇದರೆ, ಹರ್ಷಿಲ್ ಧರ್ಮಾನಿ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ.