ಶಸ್ತ್ರಚಿಕಿತ್ಸೆಗೆ ಒಳಗಾದ ಟೀಮ್ ಇಂಡಿಯಾ ಆಟಗಾರ
23 ವರ್ಷದ ಸಾಯಿ ಸುದರ್ಶನ್ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರ. ಭಾರತದ ಪರ 3 ಏಕದಿನ ಪಂದ್ಯಗಳನ್ನಾಡಿರುವ ಸಾಯಿ 2 ಅರ್ಧಶತಕಗಳೊಂದಿಗೆ 127 ರನ್ ಕಲೆಹಾಕಿದ್ದಾರೆ. ಹಾಗೆಯೇ ಒಂದು ಟಿ20 ಪಂದ್ಯದಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಸರ್ಜರಿಗೆ ಒಳಗಾಗಿರುವ ಯುವ ದಾಂಡಿಗ ಐಪಿಎಲ್ನಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.
Updated on: Dec 11, 2024 | 2:04 PM

ಭಾರತ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಸಾಯಿ ಇದೀಗ ವಿದೇಶದಲ್ಲಿ ಸರ್ಜರಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ಸಾಯಿ ಸುದರ್ಶನ್ ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಸರಣಿಯಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಕಾಣಿಸಿಕೊಂಡಿದ್ದರು.

ಇದಾಗ್ಯೂ ಉತ್ತಮ ಫಾರ್ಮ್ನಲ್ಲಿದ್ದ ಸಾಯಿ ಸುದರ್ಶನ್ ಅವರನ್ನು ಪರ್ತ್ ಟೆಸ್ಟ್ನಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆ ಎಂದು ತಿಳಿದು ಬಂದಿದೆ.

ಹೀಗಾಗಿಯೇ ಆಸ್ಟ್ರೇಲಿಯಾದಿಂದ ಹಿಂತಿರುಗಿದ ಬಳಿಕ ಸಾಯಿ ಸುದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಸಾಯಿ, ಶೀಘ್ರದಲ್ಲೇ ಕಂಬ್ಯಾಕ್ ಮಾಡುತ್ತೇನೆ. ಎಲ್ಲಾ ರೀತಿಯ ಬೆಂಬಲಕ್ಕೆ ವೈದ್ಯಕೀಯ ತಂಡ ಹಾಗೂ ಬಿಸಿಸಿಐಗೆ ದೊಡ್ಡ ಧನ್ಯವಾದಗಳು. ಹಾಗೆಯೇ ಗುಜರಾತ್ ಟೈಟಾನ್ಸ್ ಫ್ಯಾಮಿಲಿಯ ಪ್ರೀತಿಗೆ ಮತ್ತು ಬೆಂಬಲಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಬಾರಿಯ ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಗುಜರಾತ್ ಫ್ರಾಂಚೈಸಿ ಯುವ ಎಡಗೈ ದಾಂಡಿಗನನ್ನು 8.5 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ. ಅದರಂತೆ ಮುಂಬರುವ ಐಪಿಎಲ್ ಸೀಸನ್ನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಬ್ಯಾಟ್ ಬೀಸಲಿದ್ದಾರೆ.



















