ದಿನೇಶ್ ಕಾರ್ತಿಕ್ (Dinesh Karthik) ಅಲಿಯಾಸ್ ಡಿಕೆ…ತಮ್ಮ 37ನೇ ವಯಸ್ಸಿನಲ್ಲಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಆಟಗಾರ. ಅದರಲ್ಲೂ ಯುವ ಆಟಗಾರರೇ ನಾಚುವಂತೆ ಟೀಮ್ ಇಂಡಿಯಾ ಪರ DK ಹೊಸ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ಅಂತಿಮ ಓವರ್ಗಳ ವೇಳೆ ಕಣಕ್ಕಿಳಿಯುತ್ತಿರುವ ಕಾರ್ತಿಕ್ ಸಿಕ್ಸ್-ಫೋರ್ಗಳ ಮೂಲಕ ಬೌಲರ್ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಅದರಲ್ಲೂ ಸೌತ್ ಆಫ್ರಿಕಾ ವಿರುದ್ದ ನಡೆದ 4ನೇ ಟಿ20 ಪಂದ್ಯದಲ್ಲಿ ಕೊನೆಯ ಓವರ್ಗಳಲ್ಲಿ ಬ್ಯಾಟ್ ಬೀಸಿದ ಡಿಕೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. 120-130 ರನ್ಗಳಿಗೆ ಅಂತ್ಯವಾಗಬೇಕಿದ್ದ ಟೀಮ್ ಇಂಡಿಯಾ ಸ್ಕೋರ್ ಅನ್ನು ಸಿಡಿಲಬ್ಬರದ ಮೂಲಕ ದಿನೇಶ್ ಕಾರ್ತಿಕ್ 169 ಕ್ಕೆ ತಂದು ನಿಲ್ಲಿಸಿದ್ದರು. ಕೇವಲ 27 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳನ್ನು ಸಿಡಿಸಿ ಡಿಕೆ 55 ರನ್ ಚಚ್ಚಿದ್ದರು. ಇಂತಹದೊಂದು ಸ್ಪೋಟಕ ಇನಿಂಗ್ಸ್ ಫಲವಾಗಿ ದಿನೇಶ್ ಕಾರ್ತಿಕ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಒಲಿಯಿತು.
ವಿಶೇಷ ಎಂದರೆ ಕಳೆದ 16 ವರ್ಷಗಳಿಂದ ಟೀಮ್ ಇಂಡಿಯಾ ಪರ ಆಡುತ್ತಿರುವ ದಿನೇಶ್ ಕಾರ್ತಿಕ್ಗೆ ಸಿಗುತ್ತಿರುವ ಮೂರನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿದೆ. ಅಂದರೆ ಒಂದು ದಶಕಕ್ಕೂ ಹೆಚ್ಚಿನ ಕಾಲ ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಿರುವ ಕಾರ್ತಿಕ್ ಕೇವಲ 3 ಬಾರಿ ಮಾತ್ರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಆದರೆ ಈ ಮೂರು ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ ಸಿಕ್ಕಿದ್ದು ಅಂತಿಂಥ ಆಟಕ್ಕಲ್ಲ ಎಂಬುದು ವಿಶೇಷ. ಅಂದರೆ ಡಿಕೆ ಎಲ್ಲರೂ ನಿಬ್ಬೆರಗಾಗುವಂತಹ ಇನಿಂಗ್ಸ್ ಆಡುವ ಮೂಲಕವೇ ಮೂರು ಬಾರಿ ಕೂಡ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಹೀಗೆ ಮೊದಲ ಮ್ಯಾನ್ ಆಫ್ ದಿ ಮ್ಯಾಚ್ ಸಿಕ್ಕಿದ್ದು 2006 ರಲ್ಲಿ.
2006: ಅದು ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯ. ಅದರಲ್ಲೂ ಭಾರತ ತಂಡದ ಮೊದಲ ಟಿ20 ಪಂದ್ಯ. ಹೀಗಾಗಿಯೇ ಗೆಲುವಿನೊಂದಿಗೆ ಹೊಸ ಕ್ರಿಕೆಟ್ ಆರಂಭಿಸುವ ಇರಾದೆಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು. 127 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವೀರೇಂದ್ರ ಸೆಹ್ವಾಗ್ 34 ರನ್ಗಳ ಉತ್ತಮ ಇನಿಂಗ್ಸ್ ಆಡಿದ್ದರು. ಆದರೆ ಸಚಿನ್ ತೆಂಡೂಲ್ಕರ್ 10 ರನ್ಗಳಿಸಿ ಔಟಾದರೆ, ದಿನೇಶ್ ಮೊಂಗಿಯಾ 45 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಇನ್ನು ಧೋನಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಒಂದೆಡೆ ದಿನೇಶ್ ಕಾರ್ತಿಕ್ ಕ್ರೀಸ್ ಕಚ್ಚಿ ನಿಂತಿದ್ದರು. ಅಂತಿಮ 15 ಎಸೆತಗಳಲ್ಲಿ 19 ರನ್ಗಳ ಅವಶ್ಯಕತೆಯಿತ್ತು. ಆದರೆ ಮೊದಲ ಟಿ20 ಪಂದ್ಯವಾಡುತ್ತಿದ್ದ ಕಾರಣ ಟೀಮ್ ಇಂಡಿಯಾ ಆ ಪಂದ್ಯದಲ್ಲಿ ಸೋಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ದಿನೇಶ್ ಕಾರ್ತಿಕ್ ಅಂತಿಮ ಓವರ್ಗಳ ವೇಳೆ ಸಿಡಿಯಲಾರಂಭಿಸಿದರು. ಪರಿಣಾಮ 3 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 31 ರನ್ ಬಾರಿಸಿ 19.5 ಎಸೆತಗಳಲ್ಲಿ ತಂಡವನ್ನು ಗುರಿಮುಟ್ಟಿಸಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟ ಡಿಕೆ ಮೊದಲ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ವಿಶೇಷ ಎಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಮೊದಲ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದ ದಾಖಲೆ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ.
2018: ಭಾರತ-ಬಾಂಗ್ಲಾದೇಶ-ಶ್ರೀಲಂಕಾ ನಡುವಣ ನಿಧಾಸ್ ಟ್ರೋಫಿ ತ್ರಿಕೋನಾ ಸರಣಿ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ-ಬಾಂಗ್ಲಾದೇಶ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು 18 ಓವರ್ಗಳಲ್ಲಿ 133 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಮುಂದೆ ದೊಡ್ಡ ಸವಾಲಿತ್ತು. ಅಂದರೆ ಕೊನೆಯ 2 ಓವರ್ಗಳಲ್ಲಿ 33 ರನ್ಗಳಿಸಬೇಕಿತ್ತು. 19ನೇ ಓವರ್ನಲ್ಲಿ ಡಿಕೆ ಸಿಡಿಲಬ್ಬರ ತೋರಿಸಿದರು. ರುಬೆಲ್ ಹುಸೇನ್ ಓವರ್ನಲ್ಲಿ ಬರೋಬ್ಬರಿ 22 ರನ್ ಚಚ್ಚಿದರು. ಪರಿಣಾಮ ಕೊನೆಯ ಓವರ್ನಲ್ಲಿ 13 ರನ್ಗಳು ಬೇಕಿತ್ತು. ಸೌಮ್ಯ ಸರ್ಕಾರ್ ಎಸೆದ ಆ ಓವರ್ನ ಕೊನೆಯ ಎಸೆತದಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಸ್ಟ್ರೈಕ್ನಲ್ಲಿದದ್ದು ದಿನೇಶ್ ಕಾರ್ತಿಕ್. ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟರು. ಅಂದು ಕೇವಲ 8 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಡಿಕೆ 29 ರನ್ ಚಚ್ಚಿದ್ದರು. ಆ ಅಸಾಧಾರಣ ಇನಿಂಗ್ಸ್ ಇಂದಿಗೂ ಟೀಮ್ ಇಂಡಿಯಾ ಬೆಸ್ಟ್ ಫಿನಿಶ್ಗಳಲ್ಲಿ ಒಂದಾಗಿದೆ. ಅಲ್ಲದೆ ಈ ಭರ್ಜರಿ ಇನಿಂಗ್ಸ್ಗೆ ದಿನೇಶ್ ಕಾರ್ತಿಕ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
2022: ಸೌತ್ ಆಫ್ರಿಕಾ ವಿರುದ್ದದ 5 ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯವು ರಾಜ್ಕೋಟ್ನಲ್ಲಿ ನಡೆಯಿತು. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಸೌತ್ ಆಫ್ರಿಕಾ ವೇಗಿಗಳ ದಾಳಿ ಮುಂದೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಮಂಡಿಯೂರಿದ್ದರು. ಇದಾಗ್ಯೂ ಫಿನಿಶರ್ಗಳಾಗಿ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಇಡೀ ಪಂದ್ಯದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಪಾಂಡ್ಯ 31 ಎಸೆತಗಳಲ್ಲಿ 46 ರನ್ ಬಾರಿಸಿ ಔಟಾದರು. ಆದರೆ ಮತ್ತೊಂದೆಡೆಯಿದ್ದ ಡಿಕೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 13 ಓವರ್ನಲ್ಲಿ 81 ರನ್ಗಳಿಸಿದ್ದ ಟೀಮ್ ಇಂಡಿಯಾವನ್ನು ದಿನೇಶ್ ಕಾರ್ತಿಕ್ ಔಟಾಗುವ ಮುನ್ನ 159 ಕ್ಕೆ ತಂದು ನಿಲ್ಲಿಸಿದರು. ಕೇವಲ 27 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 55 ರನ್ ಬಾರಿಸುವ ಮೂಲಕ ದಿನೇಶ್ ಕಾರ್ತಿಕ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಈ ಸ್ಪೋಟಕ ಇನಿಂಗ್ಸ್ ಪರಿಣಾಮ ಟೀಮ್ ಇಂಡಿಯಾ ಸೌತ್ ಆಫ್ರಿಕಾಗೆ 170 ರನ್ಗಳ ಟಾರ್ಗೆಟ್ ನೀಡಿತು. ಅಲ್ಲದೆ ಈ ಪಂದ್ಯವನ್ನು ಭಾರತ ತಂಡವು 82 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಅದ್ಭುತ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ ದಿನೇಶ್ ಕಾರ್ತಿಕ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಅಂದರೆ ದಿನೇಶ್ ಕಾರ್ತಿಕ್ ತಮ್ಮ ಕೆರಿಯರ್ನಲ್ಲಿ ಮೂರೇ ಮೂರು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ವಿಶೇಷ ಎಂದರೆ ಆ ಮೂರು ಪಂದ್ಯಗಳೂ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಮೊದಲ ಪಂದ್ಯವು ಟೀಮ್ ಇಂಡಿಯಾದ ಮೊದಲ ಟಿ20 ಪಂದ್ಯವಾಗಿದ್ದರೆ, 2ನೇ ಪಂದ್ಯವು ಫೈನಲ್ ಪಂದ್ಯವಾಗಿತ್ತು. ಇದೀಗ ಸೌತ್ ಆಫ್ರಿಕಾ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿದೆ. ಅಂದರೆ ಟೀಮ್ ಇಂಡಿಯಾ ಪಾಲಿನ ಮಹತ್ವದ ಪಂದ್ಯಗಳಲ್ಲಿ ಮಿಂಚುವ ಮೂಲಕ ದಿನೇಶ್ ಕಾರ್ತಿಕ್ ಮೂರು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿರುವುದು ವಿಶೇಷ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.