T20 World Cup 2022: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕೂ ಮುನ್ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನನ್ನ ತವರು ಮೈದಾನ…ಹೀಗೊಂದು ಹೇಳಿಕೆಯ ಮೂಲಕ ಪಾಕಿಸ್ತಾನ್ ತಂಡದ ವೇಗಿ ಹ್ಯಾರಿಸ್ ರೌಫ್ (Haris Rauf) ಟೀಮ್ ಇಂಡಿಯಾಗೆ (Team India) ಖಡಕ್ ಎಚ್ಚರಿಕೆ ರವಾನಿಸಿದ್ದರು. ಅಷ್ಟಕ್ಕೂ ಹ್ಯಾರಿಸ್ ರೌಫ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನನ್ನ ತವರು ಮೈದಾನ ಎನ್ನಲು ಮುಖ್ಯ ಕಾರಣ, ಬಿಗ್ ಬ್ಯಾಷ್ ಲೀಗ್ನಲ್ಲಿ ಆಡುತ್ತಿರುವುದು. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಮೂಲಕವೇ ರೌಫ್ ಪಾಕಿಸ್ತಾನ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರು ಎಂದರೆ ತಪ್ಪಾಗಲಾರದು.
ಇಲ್ಲಿ ವಿಶೇಷತೆ ಏನೆಂದರೆ ಹ್ಯಾರಿಸ್ ರೌಫ್ ಬಿಬಿಎಲ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಮೆಲ್ಬೋರ್ನ್ ಮೈದಾನವು ನನ್ನ ತವರು ಸ್ಟೇಡಿಯಂ ಎಂದು ಪಾಕ್ ಆಟಗಾರ ಟೀಮ್ ಇಂಡಿಯಾಗೆ ಎಚ್ಚರಿ ರವಾನಿಸಿದ್ದರು.
ಭಾರತ-ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ.
ಏಕೆಂದರೆ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಆಟಗಾರನಾಗಿರುವ ನನಗೆ ಎಂಸಿಜಿ ತವರು ಮೈದಾನವಾಗಿದೆ. ಈ ಮೈದಾನದಲ್ಲಿನ ಪಿಚ್ನ ಸ್ಥಿತಿಗತಿಗಳು ಹಾಗೂ ಪರಿಸ್ಥಿತಿಗಳು ಹೇಗೆ ಇರುತ್ತದೆ ಎಂಬುದರ ಕುರಿತು ನನಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಭಾರತದ ವಿರುದ್ಧದ ಪಂದ್ಯದಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದರ ಬಗ್ಗೆ ಈಗಲೇ ಪ್ಲ್ಯಾನ್ ರೂಪಿಸಿದ್ದೇನೆ ಎಂದು ಹ್ಯಾರಿಸ್ ರೌಫ್ ತಿಳಿಸಿದ್ದರು.
ಆದರೆ…ಹ್ಯಾರಿಸ್ ರೌಫ್ ಅವರ ಈ ಎಲ್ಲಾ ತಂತ್ರಗಳನ್ನು ವಿರಾಟ್ ಕೊಹ್ಲಿ 19ನೇ ಓವರ್ನಲ್ಲಿ ಉಡೀಸ್ ಮಾಡಿದ್ದರು ಎಂದರೆ ತಪ್ಪಾಗಲಾರದು. ಟೀಮ್ ಇಂಡಿಯಾಗೆ ಗೆಲ್ಲಲು 12 ಎಸೆತಗಳಲ್ಲಿ 31 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ 19ನೇ ಓವರ್ನಲ್ಲಿ ದಾಳಿಗಿಳಿದ ಹ್ಯಾರಿಸ್ ರೌಫ್ ಅವರ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸಿಂಗಲ್ ತೆಗೆದರು. ಇದರ ಬೆನ್ನಲ್ಲೇ 2ನೇ ಎಸೆತದಲ್ಲಿ ಕೊಹ್ಲಿ ಕೂಡ 1 ರನ್ ಕಲೆಹಾಕಿದರು. ಮೂರನೇ ಎಸೆತದಲ್ಲಿ ಪಾಂಡ್ಯ ಯಾವುದೇ ರನ್ ಬಾರಿಸಿಲ್ಲ. ನಾಲ್ಕನೇ ಎಸೆತದಲ್ಲಿ 1 ರನ್ ಓಡಿದರು.
ಅದರಂತೆ ಅಂತಿಮ ಎರಡು ಎಸೆತಗಳು ಬಾಕಿಯಿತ್ತು. ಈ ಎರಡೂ ಬಾಲ್ಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಕೊನೆಯ 8 ಎಸೆತಗಳಲ್ಲಿ 28 ರನ್ಗಳು ಬೇಕಿತ್ತು. ಈ ವೇಳೆ ಹ್ಯಾರಿಸ್ ರೌಫ್ ಎಸೆದ ಚೆಂಡನ್ನು ವಿರಾಟ್ ಕೊಹ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದರು.
ಇನ್ನು ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಅತ್ಯಾಕರ್ಷಕವಾಗಿ ಫ್ಲಿಕ್ ಮಾಡುವ ಮೂಲಕ ಮತ್ತೊಂದು ಭರ್ಜರಿ ಸಿಕ್ಸ್ ಬಾರಿಸಿದರು. ಅಲ್ಲಿಗೆ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ 19ನೇ ಓವರ್ನಲ್ಲಿ 15 ರನ್ಗಳನ್ನು ಮೂಡಿಬಂತು. ಇತ್ತ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ ವಾರ್ನಿಂಗ್ ನೀಡಿದ್ದ ಹ್ಯಾರಿಸ್ ರೌಫ್ ಅವರಿಗೆ ಎರಡು ಭರ್ಜರಿ ಸಿಕ್ಸರ್ಗಳ ಮೂಲಕ ತಿರುಗೇಟು ನೀಡಿ ವಿರಾಟ್ ಕೊಹ್ಲಿ ಸಂಭ್ರಮಿಸಿದರು. ಇದನ್ನು ನೋಡಿ ಪೆಚ್ಚುಮೊರೆಯೊಂದಿಗೆ ಪಾಕ್ ವೇಗಿ ಪಿಚ್ ತೊರೆದರು.
ಅಂತಿಮ ಓವರ್ನಲ್ಲಿ 16 ರನ್ಗಳನ್ನು ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ 2021 ಟಿ20 ವಿಶ್ವಕಪ್ನಲ್ಲಿನ ಹೀನಾಯ ಸೋಲಿನ ಸೇಡನ್ನು ತೀರಿಸಿ ಸಂಭ್ರಮಿಸಿತು.
Published On - 9:54 pm, Mon, 24 October 22