
ಕ್ರಿಕೆಟ್ ಜಗತ್ತಿನಲ್ಲಿ ಕ್ರೀಡಾ ಸ್ಫೂರ್ತಿಗೆ ನ್ಯೂಝಿಲೆಂಡ್ ಆಟಗಾರರು ಯಾವಾಗಲೂ ಹೆಸರುವಾಸಿ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ, ನ್ಯೂಝಿಲೆಂಡ್‌ನ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ತಮ್ಮ ಅತಿಯಾದ ಪ್ರಾಮಾಣಿಕತೆಯಿಂದಾಗಿ ತಾವೇ ರನ್ ಔಟ್ ಆಗಿ ಹೊರನಡೆದ ಅಪರೂಪದ ಘಟನೆ ನಡೆದಿದೆ. ‘ದಿ ಹಂಡ್ರೆಡ್ 2026′ ಟೂರ್ನಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ಜಾಗತಿಕವಾಗಿ ಭಾರಿ ವೈರಲ್ ಆಗಿದೆ.
ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡಗಳ ನಡುವೆ ಎಡ್ಜ್‌ಬಾಸ್ಟನ್‌ನಲ್ಲಿ ಪಂದ್ಯ ನಡೆಯುತ್ತಿತ್ತು. ಟ್ರೆಂಟ್ ರಾಕೆಟ್ಸ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಮಿಚೆಲ್ ಸ್ಯಾಂಟ್ನರ್, ಎರಡನೇ ರನ್ ಪೂರ್ಣಗೊಳಿಸಲು ಡೈವ್ ಮಾಡಿದರು.
ಇತ್ತ ಫೀಲ್ಡಿಂಗ್ ತಂಡವು ರನೌಟ್ಗೆ ಮನವಿ ಮಾಡಿರಲಿಲ್ಲ. ಹೀಗಾಗಿ ಆನ್‌ಫೀಲ್ಡ್ ಅಂಪೈರ್‌ಗಳು ಮೂರನೇ ಅಂಪೈರ್ ಪರಿಶೀಲನೆಗೆ ಮನವಿ ಮಾಡದೆ ಸುಮ್ಮನಿದ್ದರು.
ಈ ವೇಳೆ ಅಂಪೈರ್ ಬಳಿ ಹೋದ ಸ್ಯಾಂಟ್ನರ್, “ಒಮ್ಮೆ ಟಿವಿ ರಿಪ್ಲೇ ಪರಿಶೀಲಿಸಿ” ಎಂದು ಸ್ವತಃ ಕೇಳಿಕೊಂಡರು. ಅವರ ಮನವಿಯಂತೆ ಅಂಪೈರ್ ತೃತೀಯ ಅಂಪೈರ್ ಸಹಾಯ ಪಡೆದಾಗ, ಸ್ಯಾಂಟ್ನರ್ ಬ್ಯಾಟ್ ಕ್ರೀಸ್ ತಲುಪದೇ ಇರುವುದು ಸ್ಪಷ್ಟವಾಗಿ ಕಂಡುಬಂದಿತು. ಇದರ ಪರಿಣಾಮವಾಗಿ ಅವರು ಕೇವಲ 7 ರನ್‌ಗಳಿಗೆ ಔಟ್ ಎಂದು ಘೋಷಿಸಲ್ಪಟ್ಟರು.
Mitchell Santner… what are you doing? @thehundred pic.twitter.com/FdB91P73pb
— Cricket Everywhere✍🏻 (@Subhamk79241601) July 25, 2026
ಸ್ಯಾಂಟ್ನರ್ ಅವರ ಈ ವಿಲಕ್ಷಣ ಮತ್ತು ಪ್ರಾಮಾಣಿಕ ನಡವಳಿಕೆಯನ್ನು ಕಂಡು ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮಾಜಿ ಆಟಗಾರರು ಆಶ್ಚರ್ಯಚಕಿತರಾದರು.
ಈ ಪಂದ್ಯದಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ನೀಡಿದ್ದ 214 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸ್ಯಾಂಟ್ನರ್ ಅವರ ‘ಟ್ರೆಂಡ್ ರಾಕೆಟ್ಸ್’ ತಂಡ, ಅಂತಿಮವಾಗಿ 10 ರನ್‌ಗಳ ರೋಚಕ ಸೋಲು ಅನುಭವಿಸಿತು.
ಇದನ್ನೂ ಓದಿ: ಸ್ಕ್ವಾಷ್ ಚಾಂಪಿಯನ್ಶಿಪ್ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್
ಸ್ಯಾಂಟ್ನರ್ ಅವರ ಈ ಪ್ರಾಮಾಣಿಕ ನಡೆಗೆ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಇವರ ಕ್ರೀಡಾ ಮನೋಭಾವವನ್ನು ಕೊಂಡಾಡುತ್ತಿದ್ದಾರೆ.