ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ (Moeen Ali) ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶೇಷ ಎಂದರೆ 2021 ರಲ್ಲೇ ಇಂಗ್ಲೆಂಡ್ ಆಟಗಾರ ಟೆಸ್ಟ್ ಕೆರಿಯರ್ಗೆ ವಿದಾಯ ಹೇಳಿದ್ದರು. ಇದಾಗ್ಯೂ ಇತ್ತೀಚೆಗೆ ಮತ್ತೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳು ಹರಿದಾಡಿದ್ದವು. ಇಂಗ್ಲೆಂಡ್ ಟೆಸ್ಟ್ ತಂಡದ ಹೊಸ ಕೋಚ್ ಬ್ರೆಂಡನ್ ಮೆಕಲಂ ಆಗಮನದೊಂದಿಗೆ ಮೊಯೀನ್ ಅಲಿ ಮತ್ತೆ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿತ್ತು. ಇದನ್ನು ಪುಷ್ಠೀಕರಿಸುವಂತೆ ಮೆಕಲಂ ಹಾಗೂ ಮೊಯೀನ್ ಅಲಿ ಮಾತುಕತೆಯನ್ನು ನಡೆಸಿದ್ದರು. ಅಷ್ಟೇ ಅಲ್ಲದೆ ಮೊಯೀನ್ನಂತಹ ಆಟಗಾರರು ತಂಡದಲ್ಲಿ ಇರಬೇಕೆಂದು ಮೆಕಲಂ ಬಯಸಿದ್ದರು. ಇತ್ತ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿ ಸೋಲಿನ ಬಳಿಕ ಇಂಗ್ಲೆಂಡ್ ತಂಡಕ್ಕೆ ಎಡಗೈ ಆಲ್ರೌಂಡರ್ ಮರಳುವುದು ಬಹುತೇಕ ಖಚಿತ ಎನ್ನಲಾಗಿತ್ತು.
ಆದರೀಗ ಈ ವರ್ಷದ ಕೊನೆಯಲ್ಲಿ ಟೆಸ್ಟ್ ತಂಡಕ್ಕೆ ಮರಳುವ ಸಾಧ್ಯತೆಯನ್ನು ಮೊಯೀನ್ ಅಲಿ ತಳ್ಳಿಹಾಕಿದ್ದಾರೆ. ನನ್ನ ವೃತ್ತಿಜೀವನದ ಅಂತ್ಯದಲ್ಲಿದ್ದೇನೆ. ಹೀಗಾಗಿ ದೀರ್ಘಾವಧಿಯ ಕ್ರಿಕೆಟ್ಗೆ ಮರಳುವುದಿಲ್ಲ ಎಂದು ಮೊಯೀನ್ ಅಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವುದನ್ನು ಪುಷ್ಠೀಕರಿಸಿದ್ದಾರೆ.
ನಾನು ಮೆಕಲಂ ಅವರೊಂದಿಗೆ ಮಾತನಾಡಿದ್ದೇನೆ. ಈಗಿನ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಕ್ಷಮೆಯಾಚಿಸಿ ನನ್ನ ನಿವೃತ್ತಿಯನ್ನು ತಿಳಿಸಿದ್ದೇನೆ ಎಂದು ಮೊಯೀನ್ ಅಲಿ ಹೇಳಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮೊಯೀನ್ ಅಲಿ ಅವರ ಕೆರಿಯರ್ ಕೊನೆಗೊಂಡಂತಾಗಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಯಿಂದ ನಾಯಕ ಜೋಸ್ ಬಟ್ಲರ್ ಹೊರುಗಳಿದಿದ್ದರು. ಹೀಗಾಗಿ ತಂಡವನ್ನು ಮುನ್ನಡೆಸಿದ್ದ ಮೊಯೀನ್ ಅಲಿ ನಾಯಕನಾಗಿಯೂ ಯಶಸ್ವಿಯಾಗಿದ್ದರು. ಪಾಕಿಸ್ತಾನ್ ತಂಡವನ್ನು ಅವರ ತವರಿನಲ್ಲೇ 4-3 ಅಂತರದಿಂದ ಸೋಲಿಸಿ ಇಂಗ್ಲೆಂಡ್ ತಂಡವು ಸರಣಿ ಜಯಿಸಿತ್ತು. ಇದರ ಬೆನ್ನಲ್ಲೇ ಮೊಯೀನ್ ಅಲಿ ಅವರ ಟೆಸ್ಟ್ ಕಂಬ್ಯಾಕ್ ಸುದ್ದಿಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ ಸರಣಿ ಗೆಲುವಿನ ಬೆನ್ನಲ್ಲೇ ತಮ್ಮ ನಿರ್ಧಾರವನ್ನು ಇಂಗ್ಲೆಂಡ್ ಆಲ್ರೌಂಡರ್ ಬಹಿರಂಗಪಡಿಸಿದ್ದಾರೆ.
ರೆಡ್ ಬಾಲ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ 64 ಟೆಸ್ಟ್ ಪಂದ್ಯಗಳನ್ನಾಡಿರುವ ಮೊಯೀನ್ ಅಲಿ 5 ಶತಕ ಹಾಗೂ 14 ಅರ್ಧಶತಕದೊಂದಿಗೆ 2914 ರನ್ ಕಲೆಹಾಕಿದ್ದಾರೆ. ಅಲ್ಲದೆ 195 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿಯೇ ಇಂಗ್ಲೆಂಡ್ ತಂಡಕ್ಕೆ ಮೊಯೀನ್ ಅಲಿ ಅವರಂತಹ ಆಲ್ರೌಂಡರ್ನನ್ನು ಮತ್ತೆ ಕರೆತರುವ ಪ್ರಯತ್ನ ಮಾಡಿದ್ದರು ಹೊಸ ಕೋಚ್ ಬ್ರೆಂಡನ್ ಮೆಕಲಂ. ಇದೀಗ ಮತ್ತೊಮ್ಮೆ ತಾನು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವುದಾಗಿ ತಿಳಿಸಿರುವ ಮೊಯೀನ್ ಅಲಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.