‘ಪಿಎಸ್ಎಲ್ಗಿಂತ ನನಗೆ ಐಪಿಎಲ್ ಮುಖ್ಯ’; ದೇಶಾಭಿಮಾನವಿಲ್ಲದ ಪಾಕಿಸ್ತಾನಿ ಕ್ರಿಕೆಟಿಗನ ಹೇಳಿಕೆ
Mohammad Amir's IPL Dream: ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮೀರ್ ಮುಂಬರುವ 2026ರ ಐಪಿಎಲ್‌ನಲ್ಲಿ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇದು ಆಶ್ಚರ್ಯಕರ ಸುದ್ದಿಯಾಗಿದೆ. ಬ್ರಿಟಿಷ್ ಪೌರತ್ವ ಹೊಂದಿರುವ ಆಮೀರ್, ಐಪಿಎಲ್ ಅಥವಾ ಪಿಎಸ್‌ಎಲ್ ಎರಡರಲ್ಲಿ ಐಪಿಎಲ್ ಅನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಆದರೆ ರಾಜಕೀಯ ಪರಿಸ್ಥಿತಿಯಿಂದಾಗಿ ಅವರ ಕನಸು ನನಸಾಗುವುದು ಅನುಮಾನ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ (Pahalgam Terrorist Attack) ದಾಳಿಯಲ್ಲಿ 26 ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ (IND vs PAK) ನಡುವೆ ಎಲ್ಲಾ ರೀತಿಯ ಸಂಬಂಧ ಮುರಿದುಬಿದ್ದಿದೆ. ಇದರೊಂದಿಗೆ ಉಭಯ ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯ ಕನಸು ಭಗ್ನವಾಗಿದೆ. ಆದರೆ ಇದೆಲ್ಲದರ ನಡುವೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮಿರ್ (Mohammad Amir) ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ (IPL) ಆಡುವುದಾಗಿ ಹೇಳಿದ್ದಾರೆ. ನಾನು ಬ್ರಿಟಿಷ್ ಪೌರತ್ವವನ್ನು ಹೊಂದಿರುವುದರಿಂದ ಮುಂದಿನ ವರ್ಷ ಐಪಿಎಲ್ ಆಡಬಹುದು ಎಂದು ಅಮಿರ್ ಹೇಳಿದ್ದಾರೆ. ಅಲ್ಲದೆ ಪಿಎಸ್ಎಲ್ ಅಥವಾ ಐಪಿಎಲ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕರೆ, ನಾನು ನಿಸ್ಸಂಶಯವಾಗಿ ಐಪಿಎಲ್ ಅನ್ನು ಆಯ್ಕೆ ಮಾಡುತ್ತೇನೆ ಎಂದು ಆಮಿರ್ ಹೇಳಿಕೊಂಡಿದ್ದಾರೆ.
ನಾನು ಐಪಿಎಲ್‌ನಲ್ಲಿ ಆಡುತ್ತೇನೆ: ಆಮಿರ್
ಪ್ರಸ್ತುತ PSL 2025 ರಲ್ಲಿ ಆಡುತ್ತಿರುವ ಮೊಹಮ್ಮದ್ ಅಮೀರ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿದ್ದಾರೆ. ಈ ನಡುವೆ ಜಿಯೋ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ, ಆಮಿರ್ ಅವರನ್ನು ಪಿಎಸ್ಎಲ್ ಅಥವಾ ಐಪಿಎಲ್‌ನಲ್ಲಿ ಆಡಲು ಬಯಸುತ್ತೀರಾ ಎಂದು ಕೇಳಲಾಯಿತು. ಈ ಎರಡೂ ಪಂದ್ಯಾವಳಿಗಳು ಒಂದೇ ಸಮಯದಲ್ಲಿ ನಡೆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ? ಎಂಬ ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಉತ್ತರಿಸಿದ ಆಮಿರ್, ಐಪಿಎಲ್‌ನಲ್ಲಿ ಮಾತ್ರ ಆಡುವುದಾಗಿ ಹೇಳಿದರು. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಐಪಿಎಲ್‌ನಲ್ಲಿ ಅವಕಾಶ ಸಿಕ್ಕರೆ, ನಾನು ಅಲ್ಲಿ ಆಡುತ್ತೇನೆ’ ಎಂದು ಆಮಿರ್ ಹೇಳಿದರು. ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ ಆದರೆ ಅವಕಾಶ ಸಿಗದಿದ್ದರೆ ಪಿಎಸ್‌ಎಲ್‌ನಲ್ಲಿ ಆಡುತ್ತೇನೆ. ಮುಂದಿನ ವರ್ಷದ ವೇಳೆಗೆ ನಾನು ಐಪಿಎಲ್‌ನಲ್ಲಿ ಆಡಲು ಅರ್ಹನಾಗಿರುತ್ತೇನೆ, ಹಾಗಾದರೆ ನಾನು ಈ ಲೀಗ್‌ನಲ್ಲಿ ಏಕೆ ಆಡಬಾರದು?
‘ಮುಂದಿನ ವರ್ಷ ಪಿಎಸ್‌ಎಲ್ ಮತ್ತು ಐಪಿಎಲ್ ವೇಳಾಪಟ್ಟಿಯಲ್ಲಿ ಘರ್ಷಣೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಮತ್ತು ಇತರ ವಿಷಯಗಳು ಇದ್ದವು. ಆದರೆ ನಾನು ಪಿಎಸ್‌ಎಲ್‌ನಲ್ಲಿ ಮೊದಲು ಆಯ್ಕೆಯಾದರೆ ನನ್ನ ಹೆಸರನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಐಪಿಎಲ್, ಪಿಎಸ್ಎಲ್ಗಿಂತ ಬೇಗ ನಡೆದರೆ ನಾನು ಆ ಪಂದ್ಯಾವಳಿಯಲ್ಲಿ ಆಡುತ್ತೇನೆ. ಒಟ್ಟಾರೆಯಾಗಿ, ನನಗೆ ಎಲ್ಲಿ ಅವಕಾಶ ಸಿಕ್ಕಿತೋ ಅಲ್ಲಿ ಮೊದಲು ಆಡುತ್ತೇನೆ ಎಂದಿದ್ದಾರೆ.
IND vs PAK: ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಸಾಧ್ಯವೇ ಇಲ್ಲ ಎಂದ ಬಿಸಿಸಿಐ
ಆಮಿರ್ ಐಪಿಎಲ್ ಆಡುವುದು ಅಸಾಧ್ಯ
ಈಗ, ಮೊಹಮ್ಮದ್ ಆಮಿರ್ ಪರ ಐಪಿಎಲ್ ಆಡುವುದು ಕಷ್ಟ ಮಾತ್ರವಲ್ಲ, ಅಸಾಧ್ಯವೂ ಹೌದು. ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾರಣ ಹೋಮ ನಡೆಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಕೂಡ ಭಾಗಿಯಾಗಿದ್ದಾರೆ. ಪಾಕಿಸ್ತಾನ ಮತ್ತೊಮ್ಮೆ ತನ್ನ ನೆಲವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಆಮಿರ್ಗೆ ಮುಂದಿನ ವರ್ಷ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ