ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಅವರ ಕಂಬ್ಯಾಕ್ ಮತ್ತಷ್ಟು ವಿಳಂಬವಾಗಲಿದೆ. ಈ ಹಿಂದೆ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಶಮಿ ಪುನರಾಗಮನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೀಗ ರಣಜಿ ಟ್ರೋಫಿ ಬಳಿಕವಷ್ಟೇ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿದೆ ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾದಿಂದ ಗಾಯಗೊಂಡು ಅಥವಾ ಇನ್ನಿತರ ಕಾರಣಗಳಿಂದ ಹೊರಗುಳಿದಿರುವ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡಬೇಕಿದ್ದರೆ ದೇಶೀಯ ಪಂದ್ಯಗಳನ್ನಾಡಬೇಕು.
ಇತ್ತೀಚೆಗೆ ದುಲೀಪ್ ಟ್ರೋಫಿಗೆ ಪ್ರಕಟಿಸಲಾದ 4 ತಂಡಗಳಲ್ಲಿ ಮೊಹಮ್ಮದ್ ಶಮಿ ಅವರ ಹೆಸರು ಕಾಣಿಸಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವುದು. ಅಂದರೆ ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಶಮಿ ಎನ್ಸಿಎ ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಿಲ್ಲ.
ಹೀಗಾಗಿ ಮೊಹಮ್ಮದ್ ಶಮಿ ತಮ್ಮ ಕಂಬ್ಯಾಕ್ಗಾಗಿ ಮುಂದಿನ ರಣಜಿ ಟ್ರೋಫಿವರೆಗೂ ಕಾಯಬೇಕು. ರಣಜಿ ಟ್ರೋಫಿ ಶುರುವಾಗುವುದು ಅಕ್ಟೋಬರ್ 11 ರಿಂದ. ಈ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಬಂಗಾಳ ಪರ ಕಣಕ್ಕಿಳಿಯಲಿದ್ದಾರೆ. ಇನ್ನು ಅಕ್ಟೋಬರ್ 16 ರಿಂದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಶುರುವಾಗಲಿದೆ. ಈ ಸರಣಿಯ ಮೂಲಕ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿದೆ.
ಏಕದಿನ ವಿಶ್ವಕಪ್ 2023 ರ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಇದನ್ನೂ ಓದಿ: IPL 2025: RCB ಪರ ಆಡುವ ಇಂಗಿತ ವ್ಯಕ್ತಪಡಿಸಿದ ರಿಂಕು ಸಿಂಗ್
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ ಆಗಿದ್ದು, ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಕಂಬ್ಯಾಕ್ ಮಾಡಲು ಸಕಲ ಸಿದ್ಧತೆಯಲ್ಲಿದ್ದಾರೆ.