ಐಪಿಎಲ್ 2025ರ ಮೆಗಾ ಹರಾಜಿಗಾಗಿ ರೂಪುರೇಷೆಗಳು ಸಿದ್ಧವಾಗುತ್ತಿದೆ. ಈ ರೂಪುರೇಷೆಗಳ ಸಿದ್ಧತೆಯ ಬಳಿಕ ಎಲ್ಲಾ ಫ್ರಾಂಚೈಸಿಗಳಿಗೆ ಇಂತಿಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಿದೆ. ಪ್ರಸ್ತುತ ಮಾಹಿತಿ ಪ್ರಕಾರ ಈ ಬಾರಿಯ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ 4+2 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಅಂದರೆ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ನಾಲ್ವರನ್ನು ನೇರವಾಗಿ ರಿಟೈನ್ ಮಾಡಿಕೊಳ್ಳಬಹುದು. ಇನ್ನುಳಿದ ಇಬ್ಬರು ಆಟಗಾರರನ್ನು ಆರ್ಟಿಎಂ ಕಾರ್ಡ್ ಬಳಸಿ ಹರಾಜಿಗೆ ಬಿಡುಗಡೆ ಮಾಡಲು ಅವಕಾಶ ನೀಡಲಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಮೆಗಾ ಹರಾಜಿಗೂ ಮುನ್ನ ಪ್ರತಿ ತಂಡಗಳಿಂದ 19 ಆಟಗಾರರು ಹೊರಬೀಳುವುದು ಖಚಿತ.
ಹೀಗಾಗಿಯೇ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ನಿಮ್ಮನ್ನು ರಿಟೈನ್ ಮಾಡಿಕೊಳ್ಳದಿದ್ದರೆ ಯಾವ ತಂಡದ ಪರ ಕಣಕ್ಕಿಳಿಯುತ್ತೀರಿ ಎಂಬ ಪ್ರಶ್ನೆಯನ್ನು ರಿಂಕು ಸಿಂಗ್ ಅವರಲ್ಲಿ ಕೇಳಲಾಗಿದೆ. ಈ ಕುತೂಹಲಕಾರಿ ಪ್ರಶ್ನೆಗೆ ಕೆಕೆಆರ್ ದಾಂಡಿಗ ನೀಡಿದ ನೇರ ಉತ್ತರ- RCB.
ಹೌದು, ಕೆಕೆಆರ್ ತಂಡವು ನನ್ನನ್ನು ರಿಟೈನ್ ಮಾಡದಿದ್ದರೆ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದನ್ನು ಎದುರು ನೋಡುತ್ತಿದ್ದೇನೆ. ನನಗೆ ಆರ್ಸಿಬಿ ಪರ ಆಡಬೇಕೆಂಬ ಆಸೆಯಿದೆ ಎಂದು ರಿಂಕು ಸಿಂಗ್ ಸ್ಪೋರ್ಟ್ಸ್ ತಕ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ರಿಂಕು ಸಿಂಗ್ ಅವರನ್ನು ಕೆಕೆಆರ್ ರಿಲೀಸ್ ಮಾಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ 2018 ರಿಂದ ರಿಂಕು ಸಿಂಗ್ ಕೆಕೆಆರ್ ಪರ ಆಡುತ್ತಿದ್ದಾರೆ. ಅಲ್ಲದೆ ಕಳೆದ ಮೂರು ಹರಾಜಿನ ವೇಳೆಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅವರನ್ನು ರಿಟೈನ್ ಮಾಡಿಕೊಂಡಿತ್ತು. ಹೀಗಾಗಿ ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಇದಾಗ್ಯೂ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಬಂದರೆ ಅವರ ಖರೀದಿಗೆ ಇತರೆ ಫ್ರಾಂಚೈಸಿಗಳು ಮುಗಿಬೀಳುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕೆಂಬ ಆಸೆಯನ್ನು ರಿಂಕು ಸಿಂಗ್ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ರಿಂಕು ಕಾಣಿಸಿಕೊಂಡರೆ ಆರ್ಸಿಬಿ ಫ್ರಾಂಚೈಸಿ ಅವರ ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸುವುದಂತು ದಿಟ.
Published On - 8:28 am, Mon, 19 August 24