ಫೈನಲ್​ನಲ್ಲಿ ಸಿಕ್ಸ್ ಸಿಡಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ದೀಪ್ತಿ ಶರ್ಮಾ

ಫೈನಲ್​ನಲ್ಲಿ ಸಿಕ್ಸ್ ಸಿಡಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ದೀಪ್ತಿ ಶರ್ಮಾ

ಝಾಹಿರ್ ಯೂಸುಫ್
|

Updated on:Aug 19, 2024 | 9:00 AM

Deepthi Sharma: ಭಾರತದ ಪರ ದೀಪ್ತಿ ಶರ್ಮಾ 5 ಟೆಸ್ಟ್, 89 ಏಕದಿನ ಮತ್ತು 117 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕ್ರಮವಾಗಿ 20, 106 ಮತ್ತು 131 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್​ನಲ್ಲೂ ಕೊಡುಗೆ ನೀಡುವ ಮೂಲಕ ಭಾರತ ತಂಡದ ಆಲ್​ರೌಂಡರ್ ಆಗಿ ಮಿಂಚಿದ್ದಾರೆ. ಇದೀಗ ದಿ ಹಂಡ್ರೆಡ್ ಲೀಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ದೀಪ್ತಿ ಎಲ್ಲರ ಗಮನ ಸೆಳೆದಿದ್ದಾರೆ.

ದಿ ಹಂಡ್ರೆಡ್ ಲೀಗ್ ಮಹಿಳಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡ ರೋಚಕ ಜಯ ಸಾಧಿಸಿದೆ. ಅದು ಸಹ ಕೊನೆಯ ಓವರ್​ನಲ್ಲಿ ದೀಪ್ತಿ ಶರ್ಮಾ ಬಾರಿಸಿದ ಸಿಕ್ಸ್​ನಿಂದ ಎಂಬುದು ವಿಶೇಷ. ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಷ್ ಫೈರ್ ವುಮೆನ್ ತಂಡವು 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತು.

116 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಲಂಡನ್ ಸ್ಪಿರಿಟ್ ತಂಡವು 88 ರನ್​ಗಳಿಸುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದಾಗ್ಯೂ ಇನಿಂಗ್ಸ್ ಕಟ್ಟುವ ಜವಾಬ್ದಾರಿ ವಹಿಸಿಕೊಂಡ ದೀಪ್ತಿ ಶರ್ಮಾ ಜಾರ್ಜಿಯಾ ಜೊತೆಗೂಡಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.

ಇದಾಗ್ಯೂ ಕೊನೆಯ 5 ಎಸೆತಗಳಲ್ಲಿ ಲಂಡನ್ ಸ್ಪಿರಿಟ್ ತಂಡಕ್ಕೆ 6 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಅನುಭವಿ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಮೊದಲ ಎರಡು ಎಸೆತಗಳಲ್ಲಿ ಕೇವಲ 2 ರನ್ ಮಾತ್ರ ನೀಡಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ 4 ರನ್​ಗಳು ಬೇಕಿತ್ತು. ಈ ವೇಳೆ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ದೀಪ್ತಿ ಶರ್ಮಾ ಲಂಡನ್ ಸ್ಪಿರಿಟ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇದೀಗ ಟೀಮ್ ಇಂಡಿಯಾ ಆಟಗಾರ್ತಿಯ ಕೆಚ್ಚೆದೆಯ ಬ್ಯಾಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

 

Published on: Aug 19, 2024 08:59 AM