ಮೊಹಮ್ಮದ್ ಶಮಿಗಾಗಿ ರಾಜಸ್ಥಾನ್ ಮಾಸ್ಟರ್ ಪ್ಲ್ಯಾನ್; ಸ್ಯಾಮ್ ಕರನ್ ಲಕ್ನೋಗೆ?
ಐಪಿಎಲ್ 2027ರ ಸೀಸನ್‌ಗೂ ಮುನ್ನ ಪ್ರಮುಖ ಆಟಗಾರರ ವರ್ಗಾವಣೆ ಸುದ್ದಿಗಳು ಜೋರಾಗಿವೆ. ವೇಗಿ ಮೊಹಮ್ಮದ್ ಶಮಿ ಲಕ್ನೋ ಸೂಪರ್ ಜೈಂಟ್ಸ್ ತೊರೆದು ರಾಜಸ್ಥಾನ್ ರಾಯಲ್ಸ್ ಸೇರಲಿದ್ದಾರೆ ಎನ್ನಲಾಗಿದೆ. ಈ ಟ್ರೇಡ್ ಒಪ್ಪಂದದ ಭಾಗವಾಗಿ ಸ್ಯಾಮ್ ಕರನ್ ಲಕ್ನೋ ತಂಡಕ್ಕೆ ಬರಲಿದ್ದಾರೆ. ಕರನ್‌ಗೆ ಲಕ್ನೋ ನಾಯಕತ್ವ ಸಿಗುವ ಸಾಧ್ಯತೆಯೂ ಇದೆ. ಈ ವರ್ಗಾವಣೆಗಳು ತಂಡಗಳ ಬಲವನ್ನು ಗಣನೀಯವಾಗಿ ಹೆಚ್ಚಿಸಲಿವೆ.

ಐಪಿಎಲ್ 2027ರ ಸೀಸನ್ ಆರಂಭಕ್ಕೂ ಮುನ್ನ ಫ್ರಾಂಚೈಸಿಗಳ ನಡುವೆ ಆಟಗಾರರ ವರ್ಗಾವಣೆ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದು ರಾಜಸ್ಥಾನ್ ರಾಯಲ್ಸ್ ತಂಡ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕ್ರಿಕ್‌ಇನ್ಫೋ ವರದಿ ಪ್ರಕಾರ, ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಒಳಗೊಂಡ ಟ್ರೇಡ್ ಒಪ್ಪಂದದ ಮೂಲಕ ಈ ವರ್ಗಾವಣೆ ನಡೆಯುವ ಸಾಧ್ಯತೆಯಿದೆ.
ಶಮಿ ಅನುಭವಕ್ಕೆ ಮಣೆ
36 ವರ್ಷದ ಮೊಹಮ್ಮದ್ ಶಮಿ 2026ರ ಐಪಿಎಲ್‌ನಲ್ಲಿ 13 ಪಂದ್ಯಗಳನ್ನಾಡಿ 12 ವಿಕೆಟ್ ಪಡೆದಿದ್ದರು. ಪ್ರತಿ ಓವರ್‌ಗೆ ಸರಾಸರಿ 9 ರನ್ ಬಿಟ್ಟುಕೊಟ್ಟಿದ್ದರೂ, ಲಖನೌ ತಂಡದ ಬೌಲಿಂಗ್ ವಿಭಾಗಕ್ಕೆ ತಮ್ಮ ಅನುಭವದ ಮೂಲಕ ಬಲ ತುಂಬಿದ್ದರು. ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದಿದ್ದ ಶಮಿ, ತಮ್ಮ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಇತ್ತೀಚೆಗಷ್ಟೇ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಕೂಡ ಗಮನಾರ್ಹ.
2024ರಿಂದ ಈಚೆಗೆ ಶಮಿ ಐಪಿಎಲ್‌ನಲ್ಲಿ ಪವರ್‌ಪ್ಲೇ ಅವಧಿಯಲ್ಲಿ 14 ವಿಕೆಟ್ ಪಡೆದಿದ್ದು, ಪ್ರತಿ ಓವರ್‌ಗೆ 8.76 ರನ್ ನೀಡಿದ್ದಾರೆ. ಒಂದು ವೇಳೆ ಟ್ರೇಡ್ ಒಪ್ಪಂದ ಅಂತಿಮಗೊಂಡರೆ, ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ಪರ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿದ್ದ ಜೋಫ್ರಾ ಆರ್ಚರ್ ಜೊತೆ ಶಮಿ ಬೌಲಿಂಗ್ ಮಾಡುವ ಅವಕಾಶ ಸಿಗಲಿದೆ.
ಲಕ್ನೋ ತಂಡಕ್ಕೆ ಸ್ಯಾಮ್ ಕರನ್
ಇತ್ತ ಸ್ಯಾಮ್ ಕರನ್ ಕೂಡ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ತಲಾ ಎರಡು ಬಾರಿ ಪ್ರತಿನಿಧಿಸಿರುವ ಕರನ್, ಈ ಟ್ರೇಡ್ ಪೂರ್ಣಗೊಂಡರೆ ಐಪಿಎಲ್‌ನಲ್ಲಿ ಮೂರನೇ ಫ್ರಾಂಚೈಸಿ ಪರ ಆಡಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು 2026ರ ಐಪಿಎಲ್ ಆವೃತ್ತಿಯಲ್ಲಿ ಆಡಿರಲಿಲ್ಲ. ಇದೀಗ ಲಕ್ನೋ ತಂಡಕ್ಕೆ ಸೇರ್ಪಡೆಯಾದರೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಅದರಲ್ಲೂ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸುವ ಜೊತೆಗೆ ಪಂದ್ಯಗಳ ವಿವಿಧ ಹಂತಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಕರನ್ ಅವರಲ್ಲಿದೆ.
ಐಪಿಎಲ್‌ನಲ್ಲಿ 150 ಕೋಟಿ ರೂ. ಪರ್ಸ್ ಇಲ್ಲ, 12 ತಂಡಗಳೂ ಇಲ್ಲ; ಬಿಸಿಸಿಐ ಸ್ಪಷ್ಟನೆ
ಕರನ್‌ಗೆ ಲಕ್ನೋ ನಾಯಕತ್ವ?
ಸ್ಯಾಮ್ ಕರನ್ ಅವರಿಗೆ ಲಕ್ನೋ ತಂಡದ ನಾಯಕತ್ವ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರನ್, ಟೂರ್ನಿ ಶ್ರೇಷ್ಠ ಆಟಗಾರ ಹಾಗೂ ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನೂ ಗೆದ್ದಿದ್ದರು. ರಿಷಭ್ ಪಂತ್ ನಾಯಕತ್ವದಿಂದ ಕೆಳಗಿಳಿದ ಬಳಿಕ, 2026ರ ಆವೃತ್ತಿಯ ನಂತರ ಟ್ರೇಡ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡದ ನಾಯಕನ ಸ್ಥಾನ ಖಾಲಿಯಾಗಿದೆ. ಕರನ್ ಹೊರತಾಗಿ ವಿದೇಶಿ ಆಟಗಾರರಾದ ಏಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಸ್ ಕೂಡ ನಾಯಕತ್ವದ ರೇಸ್‌ನಲ್ಲಿರುವ ಸಾಧ್ಯತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 pm, Mon, 16 November 26
