IND vs ENG: ಡಿಎಸ್‌ಪಿ ಸಿರಾಜ್​ಗೆ ತೆಲಂಗಾಣ ಸರ್ಕಾರ ಬಡ್ತಿ ನೀಡಬೇಕೆಂದ ಮಾಜಿ ಕೋಚ್

Mohammed Siraj: ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ಗೆಲುವಿನಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅದ್ಭುತ ಬೌಲಿಂಗ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಜಿ ಕೋಚ್ ರವಿಶಾಸ್ತ್ರಿ ಅವರು ಸಿರಾಜ್‌ಗೆ ಡಿಎಸ್‌ಪಿ ಹುದ್ದೆಯಲ್ಲಿ ಬಡ್ತಿ ನೀಡುವಂತೆ ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಿರಾಜ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

IND vs ENG: ಡಿಎಸ್‌ಪಿ ಸಿರಾಜ್​ಗೆ ತೆಲಂಗಾಣ ಸರ್ಕಾರ ಬಡ್ತಿ ನೀಡಬೇಕೆಂದ ಮಾಜಿ ಕೋಚ್
Ravi Shastri

Updated on: Aug 04, 2025 | 10:04 PM

ಇಂಗ್ಲೆಂಡ್‌ ಪ್ರವಾಸವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿರುವ ಟೀಂ ಇಂಡಿಯಾ (Team India), ಸರಣಿಯನ್ನು ಸಮಬಲಗೊಳಿಸಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಪ್ರಸ್ತುತ ಇಡೀ ಭಾರತದಲ್ಲಿ ಮನೆ ಮಾತಾಗಿದ್ದಾರೆ. 2021 ರಲ್ಲಿ ಮೊದಲ ಬಾರಿಗೆ ಇದೇ ಮೈದಾನದಲ್ಲಿ ಸಿರಾಜ್ 50 ವರ್ಷಗಳ ನಂತರ ಟೀಂ ಇಂಡಿಯಾದ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅದೇ ಓವಲ್ ಮೈದಾನದಲ್ಲಿ ತಮ್ಮ ಮ್ಯಾಜಿಕಲ್ ಸ್ಪೆಲ್ ಮೂಲಕ ಟೀಂ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದಾರೆ. ಸಿರಾಜ್ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತಿದ್ದು, ಇತ್ತ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ಸಿರಾಜ್​ಗೆ ಮುಂಬಡ್ತಿ ನೀಡಬೇಕೆಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಾಸ್ತವವಾಗಿ ಹೈದರಾಬಾದ್ ಮೂಲದ ಮೊಹಮ್ಮದ್ ಸಿರಾಜ್ ಅವರಿಗೆ 2024 ರಲ್ಲಿ ತೆಲಂಗಾಣ ಸರ್ಕಾರವು ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯನ್ನು ನೀಡಿ ಗೌರವಿಸಿತು. 2024 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಸಿರಾಜ್ ಅವರಿಗೆ ಈ ಗೌರವವನ್ನು ನೀಡಲಾಯಿತು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಗೌರವವನ್ನು ಸಿರಾಜ್‌ಗೆ ನೀಡಿದ್ದರು. ಅಂದಿನಿಂದ, ಸಿರಾಜ್ ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ಅಭಿಮಾನಿಗಳಲ್ಲಿಯೂ ‘ಡಿಎಸ್‌ಪಿ ಸಿರಾಜ್’ ಎಂದು ಪ್ರಸಿದ್ಧರಾಗಿದ್ದಾರೆ.

ಸಿರಾಜ್‌ಗೆ ಬಡ್ತಿ ಸಿಗುತ್ತದೆಯೇ?

ಓವಲ್ ಟೆಸ್ಟ್ ಪಂದ್ಯದ ಸಮಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅವರು ‘ಸಿರಾಜ್ ಅವರನ್ನು ಹೈದರಾಬಾದ್ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿ ನೇಮಿಸಲಾಗಿದೆ. ಆದರೆ ಈ ಪ್ರವಾಸವನ್ನು ಮುಗಿಸಿ ಸಿರಾಜ್​ ಹೈದರಾಬಾದ್‌ಗೆ ಹಿಂತಿರುಗಿದ ಕೂಡಲೇ ಅವರಿಗೆ ಬಡ್ತಿ ಸಿಗುತ್ತದೆ’ ಎಂದು ಹೇಳಿದರು. ರವಿಶಾಸ್ತ್ರಿ ಹೇಳಿದ ಪ್ರಕಾರ ಸಿರಾಜ್​ಗೆ ಮುಂಬಡ್ತಿ ಸಿಗುತ್ತದೋ ಇಲ್ಲವೋ ಎಂಬುದು ಅವರು ಹೈದರಾಬಾದ್‌ಗೆ ಹಿಂತಿರುಗಿದ ಬಳಿಕವಷ್ಟೇ ಗೊತ್ತಾಗಲಿದೆ. ಅಲ್ಲದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ನಿರ್ಧಾರದ ಮೇಲೆ ಇದು ಅವಲಂಬಿತವಾಗಿದೆ. ಆದಾಗ್ಯೂ ಪಂದ್ಯ ಮುಗಿದ ಬಳಿ ಸಿರಾಜ್ ಅವರನ್ನು ಈ ಬಗ್ಗೆ ಕೇಳಿಲಾಯಿತು. ಇದಕ್ಕೆ ಸಿರಾಜ್, ನಗುವ ಮೂಲಕ ಪ್ರಶ್ನೆಯನ್ನು ತಪ್ಪಿಸಲು ಪ್ರಯತ್ನಿಸಿದರು. ಆ ಬಳಿಕ ‘ನನಗೆ ಗೊತ್ತಿಲ್ಲ’ ಎಂದಷ್ಟೇ ಉತ್ತರಿಸಿದರು.

IND vs ENG: ‘ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ’; ಸಿರಾಜ್​ರನ್ನು ಹಾಡಿಹೊಗಳಿದ ಕಿಂಗ್ ಕೊಹ್ಲಿ

ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು

ಮೇಲೆ ಹೇಳಿದಂತೆ ಸಿರಾಜ್‌ಗೆ ಬಡ್ತಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ತೆಲಂಗಾಣ ಮುಖ್ಯಮಂತ್ರಿ ರೆಡ್ಡಿ ನಿರ್ಧರಿಸುತ್ತಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಅತಿ ಹೆಚ್ಚು 23 ವಿಕೆಟ್‌ಗಳನ್ನು ಪಡೆಯುವ ಮೂಲಕ, ಸಿರಾಜ್ ಖಂಡಿತವಾಗಿಯೂ ಟೀಂ ಇಂಡಿಯಾ ಮತ್ತು ಅಭಿಮಾನಿಗಳಲ್ಲಿ ಹೃದಯಲ್ಲಿ ಪ್ರೀತಿಯ ಬಡ್ತಿ ಪಡೆದಿದ್ದಾರೆ. ಸಿರಾಜ್ ಈ ಸರಣಿಯ ಎಲ್ಲಾ 5 ಟೆಸ್ಟ್‌ಗಳನ್ನು ಆಡಿ 23 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Mon, 4 August 25