- Kannada News Photo gallery Cricket photos 23 Wickets for Mohammed Siraj in the england vs india test series
IND vs ENG: 1113 ಎಸೆತಗಳು, 23 ವಿಕೆಟ್..! ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ ಅಬ್ಬರ ಹೀಗಿತ್ತು
Mohammed Siraj's Heroics: ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವಿಗೆ ಮುಖ್ಯ ಕಾರಣ ಮೊಹಮ್ಮದ್ ಸಿರಾಜ್ ಅವರ ಅದ್ಭುತ ಬೌಲಿಂಗ್. ಐದನೇ ದಿನ ಉಳಿದ 4 ವಿಕೆಟ್‌ಗಳ ಪೈಕಿ 3 ವಿಕೆಟ್‌ಗಳನ್ನು ಪಡೆದ ಸಿರಾಜ್, ಇಂಗ್ಲೆಂಡ್‌ನ ಗೆಲುವಿನ ಆಸೆಗೆ ತಣ್ಣೀರೆರೆಚಿದರು. ಒಟ್ಟಾರೆ ಈ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಪಡೆದ ಸಿರಾಜ್, ಭಾರತೀಯ ವೇಗಿಗಳ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಟೀಂ ಇಂಡಿಯಾ ಸರಣಿ ಸೋಲಿನಿಂದ ಪಾರಾಗಿದೆ.
Updated on: Aug 04, 2025 | 7:52 PM

ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಗೆಲುವಿನ ಕಥೆ ಬರೆದಿದ್ದು ವೇಗಿ ಮೊಹಮ್ಮದ್ ಸಿರಾಜ್ ಎಂದರೆ ತಪ್ಪಾಗಲಾರದು. ಐದನೇ ದಿನದಂದು ಉಳಿದ ನಾಲ್ಕು ವಿಕೆಟ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್, ಇಂಗ್ಲೆಂಡ್ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಅಂತಿಮವಾಗಿ ಆತಿಥೇಯ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಡ್ರಾದಲ್ಲಿ ಅಂತ್ಯಗೊಳಿಸಿದ ನಿರಾಶೆಯಲ್ಲಿದ್ದರೆ, ಇತ್ತ ಟೀಂ ಇಂಡಿಯಾ ಸರಣಿ ಸೋಲಿನಿಂದ ಪಾರಾಯಿತು.

ಮೇಲೆ ಹೇಳಿದಂತೆ ಓವಲ್ ಟೆಸ್ಟ್ ಗೆಲುವಿನ ಶ್ರೇಯ ಸಿರಾಜ್ಗೆ ಸಲ್ಲಬೇಕು. ಐದನೇ ಟೆಸ್ಟ್‌ನಲ್ಲಿ ಸಿರಾಜ್ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ ಸಿರಾಜ್, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಗೊಂಚಲು ಪಡೆದರು. ನಾಲ್ಕನೇ ದಿನದಾಟದಂತು ಕೇವಲ 2 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದ ಸಿರಾಜ್, ಐದನೇ ದಿನದಂದು 3 ವಿಕೆಟ್ ಉರುಳಿಸಿ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು.

ಒಟ್ಟಾರೆ ಈ ಟೆಸ್ಟ್ ಸರಣಿಯಲ್ಲಿ ಎಲ್ಲಾ ಐದು ಪಂದ್ಯಗಳನ್ನಾಡಿದ ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಅಂದರೆ 23 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಮೊದಲ ಬಾರಿಗೆ ಭಾರತೀಯ ವೇಗಿಯೊಬ್ಬರು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಸಾಧನೆಯನ್ನು ಸಿರಾಜ್ ಮಾಡಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಲಷ್ಟೇ ಶಕ್ತರಾಗಿದ್ದ ಸಿರಾಜ್, ಇದಾದ ನಂತರ ಎರಡನೇ ಟೆಸ್ಟ್‌ನಲ್ಲಿ ಮಾರಕ ಬೌಲಿಂಗ್ ಮಾಡಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದರು. ಹಾಗೆಯೇ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಅಂತಿಮವಾಗಿ ಐದನೇ ಟೆಸ್ಟ್‌ನಲ್ಲಿ 9ವಿಕೆಟ್ ಪಡೆಯುವ ಮೂಲಕ ಸಿರಾಜ್ 20 ವಿಕೆಟ್‌ಗಳ ಗಡಿ ದಾಟಿದರು.

ಇದಕ್ಕೂ ಮೊದಲು, 2024-25ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಸಿರಾಜ್ 5 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಪಡೆದಿದ್ದರು. ಇದೀಗ ಸಿರಾಜ್ ಇಂಗ್ಲೆಂಡ್ ಪ್ರವಾಸದಲ್ಲಿ 23 ವಿಕೆಟ್‌ಗಳನ್ನು ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಒಟ್ಟಾರೆ ಈ ಪ್ರವಾಸದಲ್ಲಿ 185.3 ಓವರ್ಗಳನ್ನು ಅಂದರೆ 1113 ಎಸೆತಗಳನ್ನು ಬೌಲ್ ಮಾಡಿದ ಸಿರಾಜ್ 23 ವಿಕೆಟ್ ಪಡೆದರು.
