Mohammed Siraj: ಮೂರೂ ಫಾರ್ಮೆಟ್ನಲ್ಲಿ ಮಿಂಚುತ್ತಿರುವ ಮೊಹಮ್ಮದ್ ಸಿರಾಜ್ಗೆ ಬಿಸಿಸಿಐಯಿಂದ ಅನ್ಯಾಯ: ವರ್ಷಕ್ಕೆ ಎಷ್ಟು ಸಂಬಳ ಗೊತ್ತೇ?
BCCI: ವಿಶ್ರಾಂತಿ ಕೂಡ ಇಲ್ಲದೆ ಪ್ರತಿ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಸಿರಾಜ್ಗೆ ಬಿ ಗ್ರೇಡ್ ನೀಡಿರುವುದು ನಿಜಕ್ಕೂ ಅನ್ಯಾಯ. ಇವರಿಗೆ ಎ+ ಗ್ರೇಡ್ ನೀಡಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ (Indian Cricket) ಸದ್ಯ ಮಿಂಚು ಹರಿಸುತ್ತರುವ ಬೌಲರ್ ಎಂದರೆ ಅದು ಮೊಹಮ್ಮದ್ ಸಿರಾಜ್ (Mohammed Siraj). ಎರಡು ವರ್ಷಗಳ ಹಿಂದೆ ಸಾಕಷ್ಟು ರನ್ ನೀಡುತ್ತಿದ್ದ, ಕಳಪೆ ಬೌಲರ್ ಎಂದು ಟೀಕೆಗೊಳಗಾಗಿದ್ದ ಸಿರಾಜ್ ಈಗ ಎದುರಾಳಿಗರ ಹುಟ್ಟಡಗಿಸುತ್ತಿದ್ದಾರೆ. ವೆಸ್ಟ್ ಇಂಡೀಸ್ (India vs West Indies) ವಿರುದ್ಧ ನಡೆದ ಎರಡನೇ ಟೆಸ್ಟ್ನಲ್ಲಿ ಐದು ವಿಕೆಟ್ ಕಿತ್ತ ಇವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ಕೇವಲ ಟೆಸ್ಟ್ನಲ್ಲಿ ಮಾತ್ರವಲ್ಲದೆ ಏಕದಿನ, ಟಿ20 ಮಾದರಿಯಲ್ಲೂ ಸಿರಾಜ್ ಬೌಲಿಂಗ್ ಮಾರಕವಾಗಿದೆ.
ಕಳೆದ 2 ವರ್ಷಗಳಲ್ಲಿ, ಸಿರಾಜ್ 23 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 4.57 ರ ಅತ್ಯುತ್ತಮ ಸರಾಸರಿಯೊಂದಿಗೆ 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ 41 ರಲ್ಲಿ, 31 ವಿಕೆಟ್‌ಗಳನ್ನು ಪಡೆದಿರುವುದು ಈ ವರ್ಷ ಎಂಬುದು ವಿಶೇಷ. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಅವರ ಅಲಭ್ಯತೆಯಲ್ಲಿ ತಂಡದ ವೇಗದ ಬೌಲಿಂಗ್ ಜವಾಬ್ದಾರಿ ಹೊತ್ತ ಸಿರಾಜ್ ಇಂದು ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದಾರೆ. ಆದರೆ, ಸಿರಾಜ್ಗೆ ಬಿಸಿಸಿಐಯಿಂದ ಸಿಗ ಬೇಕಾದ ಗೌರವ ಸಿಕ್ಕಿಲ್ಲ ಎಂಬುದು ನಿಜ ಸಂಗತಿ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒಪ್ಪಂದದ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಆಟಗಾರರನ್ನು ಎ+, ಎ, ಬಿ ಮತ್ತು ಸಿ ಎಂದು 4 ಗ್ರೇಡ್‌ಗಳಾಗಿ ವಿಂಗಡಿಸಲಾಗಿದೆ. ಆಟಗಾರರು ಪ್ರತಿ ಗ್ರೇಡ್‌ಗೆ ವಾರ್ಷಿಕವಾಗಿ ವಿಭಿನ್ನ ಮೊತ್ತವನ್ನು ಪಡೆಯುತ್ತಾರೆ, ಇದು ಕೋಟಿಗಳಲ್ಲಿ ಇರುತ್ತೆ. ಮೊಹಮ್ಮದ್ ಸಿರಾಜ್ ಬಿಸಿಸಿಐ ಜತೆ ಒಪ್ಪಂದ ಮಾಡಿಕೊಂಡಿದ್ದು, ಸದ್ಯ ಬಿ ಗ್ರೇಡ್‌ನಲ್ಲಿದ್ದಾರೆ. ಬಿ ದರ್ಜೆಯಲ್ಲಿರುವುದರಿಂದ ಇವರಿಗೆ ವರ್ಷಕ್ಕೆ ಸಿಗುವ ಸಂಬಳ 3 ಕೋಟಿ ರೂ.
ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪರ ಅತೀ ವೇಗದ ಅರ್ಧಶತಕ ಸಿಡಿಸಿದ್ದು ಯಾರು ಗೊತ್ತಾ?
ವಿಶ್ರಾಂತಿ ಕೂಡ ಇಲ್ಲದೆ ಪ್ರತಿ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಸಿರಾಜ್ಗೆ ಬಿ ಗ್ರೇಡ್ ನೀಡಿರುವುದು ನಿಜಕ್ಕೂ ಅನ್ಯಾಯ. ಇವರಿಗೆ ಎ+ ಗ್ರೇಡ್ ನೀಡಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಂದಹಾಗೆ ಎ+ ಗ್ರೇಡ್ನವರಿಗೆ ಸಿಗುತ್ತಿರುವ ಸಂಬಳ 7 ಕೋಟಿ ಆಗಿದೆ. ಪ್ರಸ್ತುತ 4 ಆಟಗಾರರು ಬಿಸಿಸಿಐನ ಎ+ ಗ್ರೇಡ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ 7 ಕೋಟಿ ಸಂಬಳ ಪಡೆಯುತ್ತಿದ್ದಾರೆ.
ಸಿರಾಜ್ ಕೂಡ ಎ+ ಗ್ರೇಡ್‌ಗೆ ಕಾಲಿಡುವಷ್ಟು ಸಾಧನೆ ಮಾಡಿದ್ದಾರೆ ಮತ್ತು ಅರ್ಹ ಕೂಡ. ಸಿರಾಜ್ಗೆ ಎ+ ಗ್ರೇಡ್ ಸಿಗಬೇಕು ಎಂದರೆ ಇದರಿಂದ ಬುಮ್ರಾ ಅವರನ್ನು ಕೆಳಗಿಳಸಬೇಕಾಗುತ್ತದೆ. ಬುಮ್ರಾ ಗಾಯದ ಸಮಸ್ಯೆಯಿಂದ ಅನೇಕ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಹೀಗಿದ್ದರೂ ಇವರನ್ನು ಎ+ ಗ್ರೇಡ್ನಲ್ಲೇ ಇರಿಸಲಾಗಿದೆ. ಬುಮ್ರಾ ಸದ್ಯ ಫಿಟ್ ಆಗಿದ್ದು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ ನಿಜ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲಿ ನಿರಂತರವಾಗಿ ಬೌಲಿಂಗ್ ಮಾಡಿದರೆ ಪುನಃ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ವಿಶ್ರಾಂತಿ ಇಲ್ಲದೆ ಅದ್ಭುತ ಪ್ರದರ್ಶನ ತೋರುತ್ತಿರುವ ಸಿರಾಜ್ಗೆ ಎ+ ಗ್ರೇಡ್ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Tue, 25 July 23