ನಾನು ಸ್ಪೇನ್​ಗೆ ಹೋಗಲು ಪ್ಲ್ಯಾನ್ ಮಾಡಿದ್ದೆ, ರಂಝಾನ್ ಬೇರೆ ಇತ್ತು!

India vs United States of America: ಟಿ20 ವಿಶ್ವಕಪ್​ನ ಮೂರನೇ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 161 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು 20 ಓವರ್​ಗಳಲ್ಲಿ 132 ರನ್​ಗಳಿಸಿ 29 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ನಾನು ಸ್ಪೇನ್​ಗೆ ಹೋಗಲು ಪ್ಲ್ಯಾನ್ ಮಾಡಿದ್ದೆ, ರಂಝಾನ್ ಬೇರೆ ಇತ್ತು!
Mohammed Siraj

Updated on: Feb 08, 2026 | 8:55 AM

ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಯುಎಸ್​ಎ ವಿರುದ್ಧದ ಮ್ಯಾಚ್​ನಲ್ಲಿ ಭಾರತ ತಂಡವು 29 ರನ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಅದರಲ್ಲೂ ನಿನ್ನೆಯಷ್ಟೇ ಭಾರತ ತಂಡವನ್ನು ಕೂಡಿಕೊಂಡಿದ್ದ ಸಿರಾಜ್​ಗೆ ಈ ಪಂದ್ಯದಲ್ಲಿ ಆಡುವ ಬಗ್ಗೆ ಯಾವುದೇ ಖಚಿತತೆ ಇರಲಿಲ್ಲ. ಆದರೆ ಜಸ್​ಪ್ರೀತ್ ಬುಮ್ರಾ ಜ್ವರಕ್ಕೆ ತುತ್ತಾಗಿದ್ದರಿಂದ ದಿಢೀರ್ ಕಣಕ್ಕಿಳಿಯಬೇಕಾಯಿತು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸಿರಾಜ್ 3 ವಿಕೆಟ್ ಕಬಳಿಸಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಶೇಷ ಎಂದರೆ ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿಯೇ ಇರಲಿಲ್ಲ. ಅಂದರೆ ಭಾರತ ತಂಡದ ಘೋಷಣೆಯಾದಾಗ ಪ್ರಮುಖ ವೇಗಿಗಳಾಗಿ ಆಯ್ಕೆಯಾಗಿದ್ದು ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ. ಆದರೆ ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಗಾಯಗೊಂಡಿದ್ದರು. ಈ ಗಾಯವು ಗಂಭೀರವಾಗಿದ್ದ ಕಾರಣ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡಲಾಯಿತು.

ಇತ್ತ ಹರ್ಷಿತ್ ರಾಣಾ ಟಿ20 ವಿಶ್ವಕಪ್​ನಿಂದ ಹೊರಬೀಳುವುದು ಖಚಿತವಾಗುತ್ತಿದ್ದಂತೆ, ಶುಕ್ರವಾರ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊಹಮ್ಮದ್ ಸಿರಾಜ್​ಗೆ ಕರೆ ಮಾಡಿದ್ದರು.  ಹೀಗೆ ಕರೆ ಮಾಡಿದ ಸೂರ್ಯ ಹೇಳಿದ್ದು ಒಂದೇ ಮಾತು, ಮಿಯಾ ಬ್ಯಾಗ್ ಪ್ಯಾಕ್ ಮಾಡಿ ಬಂದು ಬಿಡು.

ಸೂರ್ಯಕುಮಾರ್ ಯಾದವ್ ಬ್ಯಾಗ್ ಪ್ಯಾಕ್ ಮಾಡಿ ಬಂದು ಬಿಡು ಅಂದಾಗ, ನಾನು ತಮಾಷೆ ಅಂದ್ಕೊಂಡೆ. ಹೀಗಾಗಿ ಸೂರ್ಯನ ಜೊತೆ ಪ್ರಾಂಕ್ ಮಾಡಬೇಡ ಅಂದೆ. ಆ ಬಳಿಕ ಅವರು ಸಿರಿಯಸ್ಸ್ ಆಗಿ ಮಾತನಾಡಿದರು. ಹೀಗಾಗಿ ನಾನು ಮುಂಬೈಗೆ ಹೊರಟೆ. ವಿಮಾನದಲ್ಲಿದ್ದಾಗಲೂ ನನಗೆ ಇದೊಂದು ಕನಸು ಅನಿಸುತ್ತಿತ್ತು.

ಏಕೆಂದರೆ ತವರಿನಲ್ಲಿ ವಿಶ್ವಕಪ್ ಆಡುವುದು ನನ್ನ ಕನಸಾಗಿತ್ತು. ಇದಾಗ್ಯೂ ನಾನು ಆಯ್ಕೆಯಾಗಿರಲಿಲ್ಲ. ಇದೀಗ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿದೆ. ಎಲ್ಲವೂ ಅದೃಷ್ಟ ಎಂದು ಭಾವಿಸಿದ್ದೀನಿ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ಸ್ಪೇನ್​ಗೆ ತೆರಳಲು ಪ್ಲ್ಯಾನ್ ರೂಪಿಸಿದ್ದ ಸಿರಾಜ್:

ನನ್ನ ದೇಶೀಯ ಟೂರ್ನಿಯ ಸೀಸನ್​ ಮುಗಿದಿದೆ. ಟಿ20 ವಿಶ್ವಕಪ್ ತಂಡದಲ್ಲೂ ನಾನಿಲ್ಲ. ಹೀಗಾಗಿ ಫುಟ್​ಬಾಲ್ ಮ್ಯಾಚ್ ನೋಡಲು ಪ್ಲ್ಯಾನ್ ರೂಪಿಸಿದ್ದೆ. ಫೆಬ್ರವರಿ 15 ರಂದು ರಿಯಲ್ ಮ್ಯಾಡ್ರಿಡ್ ಮ್ಯಾಚ್ ಇದೆ. ಈ ಪಂದ್ಯವನ್ನು ನೋಡಲು ಸ್ಪೇನ್​​ಗೆ ತೆರಳಲು ಯೋಜನೆ ಹಾಕಿಕೊಂಡಿದ್ದೆ.

ಅಷ್ಟೇ ಅಲ್ಲದೆ ರಂಝಾನ್ ಬೇರೆ ಬರುತ್ತಿದೆ. ಹೀಗಾಗಿ ಸಂಪೂರ್ಣ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿದ್ದೆ. ಆದರೆ ಎಲ್ಲವೂ ದೇವರ ಇಚ್ಛೆ. ಏನಾಗುತ್ತದೋ, ಅದು ಆಗುತ್ತದೆ.

ಇದಾಗ್ಯೂ ನನಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗುತ್ತದೆ ಅಂದುಕೊಂಡಿರಲಿಲ್ಲ. ಏಕೆಂದರೆ ಈಗಷ್ಟೇ ನಾನು ತಂಡವನ್ನು ಕೂಡಿಕೊಂಡಿದ್ದೆ. ಮೊದಲ ಪಂದ್ಯಕ್ಕಾಗಿ ಸಿದ್ಧತೆಗಳನ್ನು ಸಹ ಶುರು ಮಾಡಿರಲಿಲ್ಲ.

ಆದರೆ ಜಸ್​ಪ್ರೀತ್ ಬುಮ್ರಾಗೆ ಹುಷಾರಿಲ್ಲದ ಕಾರಣ ನೀನು ಆಡಬೇಕೆಂದು ತಿಳಿಸಿದ್ದರು. ಬೆಳಿಗ್ಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ ಭಾಗವಾಗಬೇಕೆಂದು ತಿಳಿಸಿದಾಗ ನಿಜಕ್ಕೂ ಖುಷಿಯಾಯಿತು. ಈ ಖುಷಿಯೊಂದಿಗೆ ನಾನು ಕೆಲ ವಿಡಿಯೋಗಳನ್ನು ವೀಕ್ಷಿಸಿ ಪಂದ್ಯಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ.

ಇನ್ನು ಬ್ಯಾಟಿಂಗ್ ಮುಗಿಸಿದ ಬಂದ ಇಶಾನ್ ಕಿಶನ್ ಕೂಡ ಪಿಚ್​ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡರು. ಹೀಗಾಗಿ ಹೇಗೆ ಬೌಲಿಂಗ್ ಮಾಡಬೇಕೆಂದು ನಾನು ಯೋಜನೆ ರೂಪಿಸಿದ್ದೆ. ಅದರಂತೆ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರುವುದಕ್ಕೆ ಖುಷಿಯಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಕೊಹ್ಲಿಯ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್

ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಮೊಹಮ್ಮದ್ ಸಿರಾಜ್ 29 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಅದು ಕೂಡ 2024 ರ ಬಳಿಕ. ಅಂದರೆ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಕೊನೆಯ ಟಿ20 ಪಂದ್ಯವಾಡಿದ್ದು 2024 ರಲ್ಲಿ. ಇದಾದ ಬಳಿಕ ಅವರು ಭಾರತ ಟಿ20 ತಂಡದ ಭಾಗವಾಗಿರಲಿಲ್ಲ. ಇದೀಗ ದಿಢೀರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಮಿಯಾ ಭಾಯ್ ಯಶಸ್ವಿಯಾಗಿದ್ದಾರೆ.