VIDEO: ರನೌಟ್ ಮಾಡಲು ಹೋಗಿ ನಾಟಕವಾಡಿದ ಸಿರಾಜ್..!
Mohammed Siraj: ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸಿರಾಜ್ 10 ಓವರ್ಗಳಲ್ಲಿ ಕೇವಲ 38 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
India vs South Africa: ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ಹಂಗಾಮಿ ನಾಯಕ ಕೇಶವ್ ಮಹಾರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಮೂರನೇ ಓವರ್ನಲ್ಲೇ ಮೊಹಮ್ಮದ್ ಸಿರಾಜ್ ಡಿಕಾಕ್ ವಿಕೆಟ್ ಕಬಳಿಸಿ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರೀಜಾ ಹೆನ್ರಿಕ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಷ್ಟೇ ಅಲ್ಲದೆ ಮೂರನೇ ವಿಕೆಟ್‌ಗೆ 129 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
76 ಎಸೆತಗಳನ್ನು ಎದುರಿಸಿದ ರೀಜಾ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರೆ, ಮಾರ್ಕ್ರಾಮ್ 89 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರು. ಆದರೆ ತಂಡದ ಮೊತ್ತ 250 ರ ಗಡಿದಾಟುವಷ್ಟರಲ್ಲಿ ಸೌತ್ ಆಫ್ರಿಕಾ ತಂಡವು 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್ಗಳು ರನ್ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.
ಇದರ ನಡುವೆ ಕೆಲ ನಾಟಕೀಯ ಸನ್ನಿವೇಶಗಳಿಗೂ ಈ ಪಂದ್ಯ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನ 48ನೇ ಓವರ್ ಅನ್ನು ಸಿರಾಜ್ ಬೌಲ್ ಮಾಡಿದ್ದರು. ಈ ವೇಳೆ ಎಸೆದ 2ನೇ ಎಸೆತವನ್ನು ಕೇಶವ್ ಮಹಾರಾಜ್ ಗುರುತಿಸುವಲ್ಲಿ ಎಡವಿದರು. ಚೆಂಡು ನೇರವಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈ ಸೇರಿತು.
ಆ ಬಳಿಕ ಸ್ಯಾಮ್ಸನ್ ಚೆಂಡನ್ನು ಬೌಲರ್ ಸಿರಾಜ್ಗೆ ನೀಡಿದರು. ಅತ್ತ ನಾನ್ ಸ್ಟ್ರೈಕ್ನಲ್ಲಿದ್ದ ಡೇವಿಡ್ ಮಿಲ್ಲರ್ ಕ್ರೀಸ್ ರನ್ ಓಡಲು ಬಂದು ಕೇಶವ್ ಮಹಾರಾಜ್ರತ್ತ ನೋಡುತ್ತಾ ನಿಂತಿದ್ದರು. ಇದನ್ನು ಮೊದಲೇ ಗಮನಿಸಿದ ಸಿರಾಜ್ ಕೈಗೆ ಚೆಂಡು ಸಿಗುತ್ತಿದ್ದಂತೆ ರನೌಟ್ ಮಾಡಲು ಯತ್ನಿಸಿದ್ದರು.
ಆದರೆ ಸಿರಾಜ್ ಎಸೆದ ಥ್ರೋ ಸ್ಟಂಪ್ಗೆ ತಾಗದೇ ನೇರವಾಗಿ ಬೌಂಡರಿಗೆ ಸಾಗಿತು. ಬೌಂಡರಿ ಲೈನ್ ದಾಟುತ್ತಿದ್ದಂತೆ ಅಂಪೈರ್ ಬೈಸ್ ಫೋರ್ ನೀಡಿದರು. ಅಚ್ಚರಿ ಎಂದರೆ ಈ ವೇಳೆ ಸಿರಾಜ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದಿರುವುದು ಕಂಡು ಬಂತು. ಚೆಂಡು ಡೆಡ್ ಆಗಿದೆ. ನಾನು ರನೌಟ್ ಮಾಡಲು ಮುಂದಾಗಿರಲಿಲ್ಲ ಎಂಬ ವಾದವನ್ನು ಸಿರಾಜ್ ಮುಂದಿಟ್ಟರು. ಆದರೆ ರಿಪ್ಲೇನಲ್ಲಿ ಸಿರಾಜ್ ರನೌಟ್ ಮಾಡಲೇಂದೇ ಥ್ರೋ ಎಸೆದಿರುವುದು ಕಂಡು ಬಂತು. ಇದೀಗ ಸಿರಾಜ್ ಅವರ ಈ ನಾಟಕೀಯ ಸನ್ನಿವೇಶಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Mohammad Siraj missed the stump by just 1 mile??pic.twitter.com/8mtS1gX9eo
— Cric (@CricLavdeep4518) October 9, 2022
ಇದಾಗ್ಯೂ ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸಿರಾಜ್ 10 ಓವರ್ಗಳಲ್ಲಿ ಕೇವಲ 38 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವನ್ನು 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ಗಳಿಗೆ ನಿಯಂತ್ರಿಸಿತು. 279 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 45.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು. 84 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 93 ರನ್ ಬಾರಿಸಿದ ಕಿಶನ್ 7 ರನ್ ಅಂತರದಲ್ಲಿ ಶತಕವನ್ನು ಮಿಸ್ ಮಾಡಿಕೊಂಡರು. ಇನ್ನೊಂದೆಡೆ ಅಜೇಯ ಆಟವಾಡಿದ ಶ್ರೇಯಸ್ ಅಯ್ಯರ್ (113) ಭರ್ಜರಿ ಶತಕ ದಾಖಲಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.