
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ (Virat Kohli) ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಆಂಗ್ಲರ ವಿರುದ್ಧದ ಸರಣಿಗಾಗಿ ಸಜ್ಜಾಗುತ್ತಿರುವುದಾಗಿ ತಿಳಿಸಿದ್ದ ಕೊಹ್ಲಿ ಏಕಾಏಕಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದು ಯಾಕೆ? ಎಂಬುದೇ ಯಕ್ಷ ಪ್ರಶ್ನೆ. ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್.
ಮಾಂಟಿ ಪನೇಸರ್ ಪ್ರಕಾರ, ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಿಸಲು ಆಫ್ ಸೈಡ್ ದೌರ್ಬಲ್ಯವೇ ಕಾರಣ. ಅಂದರೆ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ಆಫ್ ಸೈಡ್ನತ್ತ ಬರುವ ಚೆಂಡುಗಳನ್ನು ಎದುರಿಸಲು ತಡಕಾಡುತ್ತಿದ್ದಾರೆ. ಈ ಹಿಂದೆ ಇದು ಜಗಜ್ಜಾಹೀರಾಗಿತ್ತು. ಈ ಬಲ ಭಾಗದ ಸಮಸ್ಯೆಯ ಕಾರಣದಿಂದಲೇ ಕೊಹ್ಲಿ ಇಂಗ್ಲೆಂಡ್ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ ಎಂದು ಪನೇಸರ್ ಹೇಳಿದ್ದಾರೆ.
2014 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಸರಣಿ ವೇಳೆ ವಿರಾಟ್ ಕೊಹ್ಲಿ ಜೇಮ್ಸ್ ಅ್ಯಂಡರ್ಸನ್ ಅವರ ಆಫ್ ಸ್ಟಂಪ್ ಎಸೆತಗಳನ್ನು ಎದುರಿಸುವಲ್ಲಿ ವಿಫಲರಾಗಿದ್ದರು. ಅಲ್ಲದೆ ಆ ಸರಣಿಯಲ್ಲಿ ಕೊಹ್ಲಿಯ ದೌರ್ಬಲ್ಯ ಬಹಿರಂಗವಾಗಿತ್ತು. ಇದಾಗ್ಯೂ ಅವರು 2018 ರಲ್ಲಿ ಆಫ್-ಸೈಡ್ ದೌರ್ಬಲ್ಯವನ್ನು ನಿವಾರಿಸಿಕೊಂಡರು. ಅಲ್ಲದೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು.
ಆದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಆಫ್ ಸೈಡ್ ಎಸೆತಗಳನ್ನು ಎದುರಿಸಲು ತಡಕಾಡಿದರು. ಅಲ್ಲದೆ ಆಫ್ ಸ್ಟಂಪ್ ಎಸೆತಗಳಲ್ಲೇ ವಿಕೆಟ್ ಒಪ್ಪಿಸಿದ್ದರು. ಅದರಲ್ಲೂ ವಿಶೇಷವಾಗಿ ನಾಲ್ಕನೇ ಮತ್ತು ಐದನೇ ಸ್ಟಂಪ್ ಲೈನ್ ಎಸೆತಗಳಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ನೀಡಿ ಔಟಾಗಿದ್ದರು.
ಆಫ್ ಸ್ಟಂಪ್ ಹೊರಗೆ, ವಿಶೇಷವಾಗಿ ಆಸ್ಟ್ರೇಲಿಯಾದ ಹೈ-ಬೌನ್ಸ್ ಪಿಚ್‌ಗಳಲ್ಲಿ ಕೊಹ್ಲಿ ಬ್ಯಾಟ್ ಮಾಡಲು ಕಷ್ಟಪಡುತ್ತಿದ್ದರು. ಇತ್ತ ಇಂಗ್ಲೆಂಡ್ ಪಿಚ್ ಕೂಡ ಸ್ವಿಂಗ್ ಹಾಗೂ ಬೌನ್ಸ್ಗೆ ಸಹಕಾರಿ. ಬಹುಶಃ ಇಂಗ್ಲೆಂಡ್‌ನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುತ್ತದೆ ಎಂದು ಭಾವಿಸಿದ್ದಾರೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ ಎಂದು ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2026: RCB ತಂಡದಿಂದ 6 ಆಟಗಾರರಿಗೆ ಗೇಟ್ ಪಾಸ್ ಖಚಿತ
ಒಟ್ಟಿನಲ್ಲಿ 14 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ರಾಜನಾಗಿ ಮರೆದ ವಿರಾಟ್ ಕೊಹ್ಲಿಯ ಯುಗಾಂತ್ಯವಾಗಿದೆ. ಇನ್ನು ಕಿಂಗ್ ಕೊಹ್ಲಿಯ ಬ್ಯಾಟಿಂಗ್ ನೋಡಲು ಏಕದಿನ ಸರಣಿ ಹಾಗೂ ಐಪಿಎಲ್ವರೆಗೆ ಕಾಯಲೇಬೇಕು. ಇತ್ತ ವಿರಾಟ್ ಕೊಹ್ಲಿ ಇಲ್ಲದೆ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಸಜ್ಜಾಗುತ್ತಿದೆ. ಈ ಸರಣಿಯು ಜೂನ್ 20 ರಿಂದ ಶುರುವಾಗಲಿದ್ದು, ಒಟ್ಟು 5 ಪಂದ್ಯಗಳು ನಡೆಯಲಿದೆ.