MS Dhoni: ವರ್ಕ್ ಆಗದ ಮೆಂಟರ್ ಧೋನಿ ಪ್ಲಾನ್: ಹಲವು ಬದಲಾವಣೆ ಮಾಡಿ ಎರಡನೇ ಸೋಲುಂಡಿತು ಭಾರತ

Virat Kohli, India vs New Zealand: ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಆರಂಭಕ್ಕು ಮುನ್ನ ಮೆಂಟರ್ ಧೋನಿ, ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಕೆಲವು ಬದಲಾವಣೆ ಜೊತೆಗೆ ಪ್ರಯೋಗವನ್ನು ಮಾಡಿ ಕಣಕ್ಕಿಳಿಯಲು ನಿರ್ಧರಿಸಿದರು. ಆದರೆ, ಈ ಪ್ಲಾನ್ ಸಂಪೂರ್ಣ ಕೈಕೊಟ್ಟಿತು.

MS Dhoni: ವರ್ಕ್ ಆಗದ ಮೆಂಟರ್ ಧೋನಿ ಪ್ಲಾನ್: ಹಲವು ಬದಲಾವಣೆ ಮಾಡಿ ಎರಡನೇ ಸೋಲುಂಡಿತು ಭಾರತ
India vs New Zealand Match
Follow us
TV9 Web
| Updated By: Vinay Bhat

Updated on: Nov 01, 2021 | 7:22 AM

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್​ನ (T20 World Cup) ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಭಾರತ (India vs New Zealand) ಹೀನಾಯ ಸೋಲುಕಂಡಿದೆ. ಬ್ಯಾಟಿಂಗ್​ನಲ್ಲಿ ಮತ್ತೆ ಸಂಪೂರ್ಣ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ (Team India) ಈ ಸೋಲಿನ ಮೂಲಕ ತನ್ನ ವಿಶ್ವಕಪ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ‘ಕ್ವಾರ್ಟರ್ ಫೈನಲ್’ ಮಾದರಿಯಂತಿದ್ದ ಪಂದ್ಯದಲ್ಲಿ ಭಾರತ (India) ತಂಡ 8 ವಿಕೆಟ್‌ಗಳಿಂದ ಶರಣಾಯಿತು. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ (Virat Kohli) ಪಡೆಯ ಸೆಮೀಸ್ ಕನಸು ಬಹುತೇಕ ಭಗ್ನಗೊಂಡಿದ್ದು, ಏನಿದ್ದರೂ ಇತರ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ತಂಡದ ಭವಿಷ್ಯ ಅಡಗಿದೆ. ಉಳಿದಿರುವ ಎಲ್ಲ ಪಂದ್ಯವನ್ನು ಕೊಹ್ಲಿ ಪಡೆ ಕೇವಲ ಗೆದ್ದರಷ್ಟೆ ಸಾಲದು. ದೊಡ್ಡ ಮೊತ್ತದ ಗೆಲುವು ಸಾಧಿಸಿ ರನ್​ರೇಟ್ ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಿ ಸೆಮಿ ಫೈನಲ್ ತಲುಪಲು ಭಾರತಕ್ಕೆ ತುಂಬಾನೇ ಕಷ್ಟವಿದೆ.

ಪಂದ್ಯ ಆರಂಭಕ್ಕು ಮುನ್ನ ಮೆಂಟರ್ ಧೋನಿ, ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಕೆಲವು ಬದಲಾವಣೆ ಜೊತೆಗೆ ಪ್ರಯೋಗವನ್ನು ಮಾಡಿ ಕಣಕ್ಕಿಳಿಯಲು ನಿರ್ಧರಿಸಿದರು. ಆದರೆ, ಈ ಪ್ಲಾನ್ ಸಂಪೂರ್ಣ ಕೈಕೊಟ್ಟಿತು. ಭಾರತ ಈ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿತು. ಸೂರ್ಯಕುಮಾರ್ ಅವರಿಗೆ ಗಾಯದ ಸಮಸ್ಯೆಯಾದ್ದರಿಂದ ಇಶಾನ್ ಕಿಶನ್ ಅವರನ್ನ ಆಡಿಸಲಾಯಿತು. ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್​ಗೆ ಅವಕಾಶ ಕೊಡಲಾಯಿತು.

ಆದರೆ, ಈ ಎರಡೂ ಬದಲಾವಣೆಗಳಿಂದ ಭಾರತಕ್ಕೆ ತೃಣಮಾತ್ರವೂ ವರ್ಕೌಟ್ ಆಗಲಿಲ್ಲ. ಇಶಾನ್ ಕಿಶನ್ ಕೇವಲ 4 ರನ್​ಗೆ ಔಟ್ ಆದರು. ಶಾರ್ದೂಲ್ ಠಾಕೂರ್ ಹಾಕಿದ 9 ಎಸೆತದಲ್ಲಿ 17 ರನ್ನಿತ್ತು ದುಬಾರಿ ಎನಿಸಿದರು. ಬ್ಯಾಟಿಂಗ್​ನಲ್ಲೂ ಅವರಿಂದ ಬಂದದ್ದು ಸೊನ್ನೆ ರನ್.

ಇನ್ನಿಂಗ್ಸ್ ಓಪನ್​ಗೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಕಳುಹಿಸಿವ ಪ್ರಯೋಗ ವಿಫಲವಾಯಿತು. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಒಂದಷ್ಟು ರನ್ ಗಳಿಸಿದ ಕಾರಣ ಭಾರತದ ಸ್ಕೋರ್ ನೂರರ ಗಡಿ ದಾಟಲು ಸಾಧ್ಯವಾಯಿತು. 6ನೇ ವಿಕೆಟ್​ಗೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಗಳಿಸಿದ 24 ರನ್​ಗಳು ಇನ್ನಿಂಗ್ಸ್​ನ ಗರಿಷ್ಠ ಜೊತೆಯಾಟ ಎನಿಸಿತು.

ಈ ಸೋಲಿನೊಂದಿಗೆ ಭಾರತಕ್ಕೆ ಸೆಮಿಫೈನಲ್ ಸಾಧ್ಯತೆ ಕ್ಷೀಣಿಸಿದೆ. ಸತತ ಎರಡು ಪಂದ್ಯ ಸೋತಿರುವ ಭಾರತ ಈಗ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನ ಗೆಲ್ಲುವುದು ಅನಿವಾರ್ಯವಾಗಿದೆ. ಒಂದು ವೇಳೆ ಗೆದ್ದರೂ ಸೆಮಿಫೈನಲ್ ಪ್ರವೇಶ ಖಚಿತ ಎಂದು ಹೇಳಲು ಅಸಾಧ್ಯ. ಬೇರೆ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಹಣೆಬರಹ ನಿರ್ಧಾರವಾಗುತ್ತದೆ.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಸೋತ ವಿರಾಟ್ ಕೊಹ್ಲಿ ಬಳಗ ಬ್ಯಾಟಿಂಗ್‌ಗಿಳಿಯಿತು. ವೇಗಿ ಟ್ರೆಂಟ್ ಬೌಲ್ಟ್ (20ಕ್ಕೆ 3) ಹಾಗೂ ಸ್ಪಿನ್ನರ್ ಇಶ್ ಸೋಧಿ (17ಕ್ಕೆ 2) ಮಾರಕ ದಾಳಿಗೆ ನಲುಗಿದ ಭಾರತ ತಂಡ 7 ವಿಕೆಟ್‌ಗೆ 110 ರನ್‌ಗಳಿಸಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, 14.3 ಓವರ್‌ಗಳಲ್ಲಿ 2 ವಿಕೆಟ್‌ಗೆ 111 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಮಾರ್ಟಿಕ್ ಗುಪ್ಟಿಲ್ (20) ಹಾಗೂ ಡೆರಿಲ್ ಮಿಚೆಲ್ (49ರನ್, 35ಎಸೆತ, 4 ಬೌಂಡರಿ, 3 ಸಿಕ್ಸರ್) ಜೋಡಿ ಉತ್ತಮ ಬಿರುಸಿನ ಆರಂಭ ನೀಡಿದರು.

KL Rahul: ಸತತ ವೈಫಲ್ಯ…ಈ ವರ್ಷ ಕೆಎಲ್ ರಾಹುಲ್ ಕಲೆಹಾಕಿದ್ದು ಎಷ್ಟು ರನ್ ಗೊತ್ತಾ?

(MS Dhoni and Virat Kohli Plan Not Working on India vs New Zealand Match in T20 World Cup)