ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು: ವಿಶ್ವಕಪ್ ಗೆದ್ದ ಬೆನ್ನಲ್ಲೇ ಧೋನಿಯ ಅಚ್ಚರಿಯ ಪೋಸ್ಟ್
T20 World Cup 2024: 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇದೀಗ 17 ವರ್ಷಗಳ ಬಳಿಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ಧೋನಿ ಬಳಿಕ ಟಿ20 ವಿಶ್ವಕಪ್ ಗೆದ್ದ ಎರಡನೇ ನಾಯಕನೆಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
T20 World Cup 2024: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ಟೀಮ್ ಇಂಡಿಯಾ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಆ ಬಳಿಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಈ ಅಭಿನಂದನೆಯೊಂದಿಗೆ ಧನ್ಯವಾದ ತಿಳಿಸಿರುವುದು ವಿಶೇಷ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಧೋನಿ, ನನ್ನ ಎದೆ ಬಡಿತ ಹೆಚ್ಚಾಗಿತ್ತು. ಆದರೆ ದೃಢ ನಂಬಿಕೆಯೊಂದಿಗೆ ನೀವೆಲ್ಲರೂ ಉತ್ತಮವಾಗಿ ಆಡಿದ್ದೀರಿ. ತವರಿನ ಮತ್ತು ಪ್ರಪಂಚದ ಎಲ್ಲೆಡೆ ಇರುವ ಎಲ್ಲಾ ಭಾರತೀಯರಿಂದ, ವಿಶ್ವಕಪ್ ಅನ್ನು ಮರಳಿ ಮನೆಗೆ ತಂದಿದ್ದಕ್ಕಾಗಿ ದೊಡ್ಡ ಧನ್ಯವಾದಗಳು. ಅಭಿನಂದನೆಗಳು. ಅಮೂಲ್ಯ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು ಎಂದು ಧೋನಿ ಬರೆದುಕೊಂಡಿದ್ದಾರೆ.
View this post on Instagram
ಇಲ್ಲಿ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು ತಿಳಿಸಮುಖ್ಯ ಕಾರಣ, ಜುಲೈ 7 ರಂದು 43ನೇ ವರ್ಷಕ್ಕೆ ಕಾಲಿಡುತ್ತಿರುವುದು. ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಅಥವಾ ಇತರೆ ಆಟಗಾರರು ಧೋನಿಗೆ ಹುಟ್ಟುಹಬ್ಬದ ಉಡುಗೊರೆ ನೀಡುವುದಾಗಿ ತಿಳಿಸಿರುವ ಸಾಧ್ಯತೆಯಿದೆ. ಹೀಗಾಗಿ ಭಾರತ ತಂಡ ವಿಶ್ವಕಪ್ ಗೆಲ್ಲುತ್ತಿದ್ದಂತೆ ಧೋನಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Virat Kohli – Rohit Sharma: T20I ಕ್ರಿಕೆಟ್ಗೆ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ವಿದಾಯ
ಧೋನಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ:
ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕನೆಂಬ ದಾಖಲೆ ಹೊಂದಿದ್ದ ಮಹೇಂದ್ರ ಸಿಂಗ್ ಧೋನಿಯ ಸಾಧನೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ. 2007 ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇದೀಗ ಹದಿನೇಳು ವರ್ಷಗಳ ಬಳಿಕ ರೋಹಿತ್ ಶರ್ಮಾ ಸಾರಥ್ಯದಲ್ಲಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ಟಿ20 ವಿಶ್ವಕಪ್ ಗೆದ್ದ ಭಾರತದ 2ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
Published On - 8:20 am, Sun, 30 June 24