AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಯಾಪ್ಟನ್ ಕೂಲ್’ ಪಟ್ಟಕ್ಕಾಗಿ ಮಹೇಂದ್ರ ಸಿಂಗ್ ಧೋನಿ ಅರ್ಜಿ

MS Dhoni: ಇತ್ತೀಚೆಗೆ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿರುವ ಮಹೇಂದ್ರ ಸಿಂಗ್ ಧೋನಿ, ಈಗ "ಕ್ಯಾಪ್ಟನ್ ಕೂಲ್" ಟ್ರೇಡ್‌ ಮಾರ್ಕ್‌ನೊಂದಿಗೆ ತಮ್ಮ ಪರಂಪರೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಜ್ಜಾಗಿದ್ದಾರೆ. ಅದರಂತೆ ಇದೀಗ ಧೋನಿ ಸಲ್ಲಿಸಿದ ಅರ್ಜಿಯನ್ನು ಟ್ರೇಡ್ ಮಾರ್ಕ್​ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

'ಕ್ಯಾಪ್ಟನ್ ಕೂಲ್' ಪಟ್ಟಕ್ಕಾಗಿ ಮಹೇಂದ್ರ ಸಿಂಗ್ ಧೋನಿ ಅರ್ಜಿ
Ms Dhoni
ಝಾಹಿರ್ ಯೂಸುಫ್
|

Updated on: Jul 01, 2025 | 12:18 PM

Share

ಮೈದಾನದಲ್ಲಿ ಕ್ಯಾಪ್ಟನ್ ಕೂಲ್ ಆಗಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ತಮ್ಮ ಬಿರುದನ್ನೇ ಟ್ರೇಡ್ ಮಾರ್ಕ್​ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಅಭಿಮಾನಿಗಳು ಪ್ರೀತಿಯಿಂದ ಕರೆಯುವ “ಕ್ಯಾಪ್ಟನ್ ಕೂಲ್” ಎಂಬ ಪದ ಟ್ರೇಡ್​ ಮಾರ್ಕ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಟ್ರೇಡ್‌ಮಾರ್ಕ್‌ಗಳ ನೋಂದಣಿ ಪೋರ್ಟಲ್ ಅನುಮೋದಿಸಿದೆ.

ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿ ಪೋರ್ಟಲ್ ಪ್ರಕಾರ, ಧೋನಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಈ ಬಗ್ಗೆ ಜಾಹೀರಾತು ನೀಡಲಾಗಿದೆ. ಅಲ್ಲದೆ “ಕ್ಯಾಪ್ಟನ್ ಕೂಲ್” ಹೆಸರನ್ನು ಜೂನ್ 16, 2025 ರಂದು ಅಧಿಕೃತವಾಗಿ ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಈ ಮೊದಲು ಧೋನಿ “ಕ್ಯಾಪ್ಟನ್ ಕೂಲ್” ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದಾಗ, ರಿಜಿಸ್ಟ್ರಿ ಟ್ರೇಡ್ ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11(1) ರ ಅಡಿಯಲ್ಲಿ ಆಕ್ಷೇಪಣೆಯನ್ನು ಎತ್ತಲಾಗಿತ್ತು. ಈ ದಾಖಲೆಯಲ್ಲಿ ಈಗಾಗಲೇ ಇದೇ ರೀತಿಯ ಹೆಸರಿನ ಗುರುತು ಇರುವುದರಿಂದ ಈ ಹೆಸರು ಜನರನ್ನು ಗೊಂದಲಗೊಳಿಸಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಲಾಗಿತ್ತು.

ಆದರೆ ಧೋನಿ ಪರ ವಕೀಲರು ‘ಕ್ಯಾಪ್ಟನ್ ಕೂಲ್’ ಎಂಬ ಅಡ್ಡಹೆಸರು ಅವರ ಜೊತೆಗೆ ಸ್ಪಷ್ಟ, ವಿಶಿಷ್ಟ ಸಂಬಂಧವನ್ನು ಹೊಂದಿದೆ ಎಂದು ವಾದಿಸಿದ್ದರು. ಅಭಿಮಾನಿಗಳು ಮತ್ತು ಮಾಧ್ಯಮಗಳು ಈ ಅಡ್ಡಹೆಸರನ್ನು ಧೋನಿ ವಿಷಯದಲ್ಲಿ ವರ್ಷಗಳಿಂದ ಬಳಸುತ್ತಿದ್ದಾರೆ. ಅಲ್ಲದೆ ಇದು ಮಹೇಂದ್ರ ಸಿಂಗ್ ಧೋನಿ ಅವರ ಸಾರ್ವಜನಿಕ ಗುರುತಿನ ಭಾಗವಾಗಿದೆ ಎಂಬ ವಾದವನ್ನು ಮುಂದಿಟ್ಟಿದ್ದರು.

ಈ ವಾದವನ್ನು ಪರಿಗಣಿಸಿರುವ ಟ್ರೇಡ್ ಮಾರ್ಕ್​​ ರಿಜಿಸ್ಟ್ರಿ ಧೋನಿಗೆ ‘ಕ್ಯಾಪ್ಟನ್ ಕೂಲ್’ ಪಟ್ಟ ನೀಡಲು ಹಸಿರು ನಿಶಾನೆ ತೋರಿದೆ. ಅದರಂತೆ ಮುಂಬರುವ ದಿನಗಳಲ್ಲಿ ‘ಕ್ಯಾಪ್ಟನ್ ಕೂಲ್’ ಎಂಬುದು ಮಹೇಂದ್ರ ಸಿಂಗ್ ಧೋನಿಗೆ ಮಾತ್ರ ಸೀಮಿತವಾಗಲಿದೆ. ಈ ಟ್ಯಾಗ್​ಲೈನ್ ಅನ್ನು ಮತ್ತೊಬ್ಬರು ಬಳಸುವಂತಿಲ್ಲ.

 ‘ಕ್ಯಾಪ್ಟನ್ ಕೂಲ್’ ಬ್ರ್ಯಾಂಡಿಂಗ್:

ಮಹೇಂದ್ರ ಸಿಂಗ್ ಧೋನಿ ‘ಕ್ಯಾಪ್ಟನ್ ಕೂಲ್’ ಟ್ಯಾಗ್​ಲೈನ್​ನೊಂದಿಗೆ ಹೊಸ ಬ್ರ್ಯಾಡಿಂಗ್ ಮಾಡುವ ನಿರೀಕ್ಷೆಯಿದೆ. ಅದರಂತೆ ಧೋನಿ ಮುಂಬರುವ ದಿನಗಳಲ್ಲಿ ತಮ್ಮ ಕ್ರೀಡಾ ಸಂಸ್ಥೆಗಳು, ತರಬೇತಿ ಕೇಂದ್ರಗಳು ಮತ್ತು ಬ್ರಾಂಡ್ ಉತ್ಪನ್ನಗಳಂತಹ ವಿವಿಧ ವ್ಯವಹಾರ ಚಟುವಟಿಕೆಗಳಿಗೆ ಕ್ಯಾಪ್ಟನ್ ಕೂಲ್ ಪದವನ್ನು  ಪ್ರತ್ಯೇಕವಾಗಿ ಬಳಸಬಹುದು. ಇದು ಧೋನಿಯ ಬ್ರ್ಯಾಂಡ್‌ನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2026: ಚೆನ್ನೈ ಸೂಪರ್ ಕಿಂಗ್ಸ್​ಗೆ ಸಂಜು ಸ್ಯಾಮ್ಸನ್?

ಕ್ಯಾಪ್ಟನ್ ಕೂಲ್ ಹೆಸರು ಏಕೆ ಬಂತು?

ಮೈದಾನದಲ್ಲಿ ಒತ್ತಡದ ಸಂದರ್ಭಗಳಲ್ಲಿಯೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಶಾಂತ ಸ್ವಭಾವದಿಂದಾಗಿ ಧೋನಿಗೆ “ಕ್ಯಾಪ್ಟನ್ ಕೂಲ್” ಎಂಬ ಹೆಸರು ಬಂತು. ಅವರ ನಾಯಕತ್ವದಲ್ಲಿ, ಭಾರತ ತಂಡವು 2007 ರ ಟಿ20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯಂತಹ ಪ್ರತಿಷ್ಠಿತ ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಹೀಗೆ ಶಾಂತಚಿತ್ತದಿಂದ ರಣತಂತ್ರ ರೂಪಿಸುವಲ್ಲಿ ನಿಸ್ಸೀಮರಾಗಿರುವ ಧೋನಿಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರು ನೀಡಲಾಯಿತು. ಇದೀಗ ಈ ಹೆಸರನ್ನೇ ಮಹೇಂದ್ರ ಸಿಂಗ್ ಧೋನಿ ತಮ್ಮ ಟ್ರೇಡ್ ಮಾರ್ಕ್​ ಆಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.