IPL 2022: ಧೋನಿ 7ನೇ ನಂಬರ್ ಜರ್ಸಿಯನ್ನೇ ತೊಡುವುದ್ಯಾಕೆ? ಇದರ ಸೀಕ್ರೆಟ್ ಏನು ಗೊತ್ತೆ? ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Mar 17, 2022 | 3:09 PM

MS Dhoni: ಮೊದಲಿಗೆ ಹಲವರು 7 ನನ್ನ ಅದೃಷ್ಟದ ನಂಬರ್ ಎಂದು ಭಾವಿಸಿದ್ದರು. ನಾನು ಏಳನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಒಂದು ಸರಳ ಕಾರಣವಿದೆ.

IPL 2022: ಧೋನಿ 7ನೇ ನಂಬರ್ ಜರ್ಸಿಯನ್ನೇ ತೊಡುವುದ್ಯಾಕೆ? ಇದರ ಸೀಕ್ರೆಟ್ ಏನು ಗೊತ್ತೆ? ವಿಡಿಯೋ ನೋಡಿ
ಧೋನಿ
Follow us on

ಪ್ರತಿಯೊಬ್ಬ ಯಶಸ್ವಿ ಕ್ರೀಡಾಪಟು ತನ್ನದೇ ಆದ ವಿಭಿನ್ನ ಗುರುತನ್ನು ಹೊಂದಿರುತ್ತಾನೆ. ಆ ಗುರುತಿನಿಂದಲೇ ಸಾವಿರಾರು ಅಭಿಮಾನಿಗಳು ಅವನನ್ನು ಗುರುತಿಸುವುದು ಹೆಚ್ಚು. ಉದಾಹರಣೆಗೆ ಅಥ್ಲೀಟ್‌ನ ಜರ್ಸಿ ಸಂಖ್ಯೆ (jersey number) ಅಥವಾ ಮೈದಾನದಲ್ಲಿ ಅವರ ದಾಖಲೆಯಿಂದ ಅಭಿಮಾನಿಗಳು ಪ್ರಭಾವಿತರಾಗುವುದು ಹೆಚ್ಚು. ವಿಶೇಷವಾಗಿ ಕ್ರೀಡಾ ವಿಭಾಗದಲ್ಲಿ ಅನೇಕ ಆಟಗಾರರ ಜರ್ಸಿ ಸಂಖ್ಯೆಯೇ ಅಭಿಮಾನಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ( Lionel Messi) ಅವರ ಜೆರ್ಸಿ ಸಂಖ್ಯೆ 10, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಜೆರ್ಸಿ ಸಂಖ್ಯೆ 7, ವಿರಾಟ್ ಕೊಹ್ಲಿ ಅವರ ಸಂಖ್ಯೆ 18, ರೋಹಿತ್ ಶರ್ಮಾ ಅವರ ಸಂಖ್ಯೆ 45 ಹೀಗೆ ಬೆಳೆಯುತ್ತಲೇ ಇರುತ್ತದೆ. ಯಾವುದೇ ಕ್ರೀಡೆಯಲ್ಲಿ ಆಟಗಾರ ಮತ್ತು ಅವರ ಜರ್ಸಿ ಸಂಖ್ಯೆ ವಿಶೇಷವಾಗಿರುತ್ತದೆ. ಈ ಜೆರ್ಸಿ ನಂಬರ್ ಹಿಂದಿನ ಕಥೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವೂ ಇರುತ್ತದೆ. ಅದಕ್ಕೂ ಮಿಗಿಲಾಗಿ ಒಬ್ಬ ಆಟಗಾರ ಒಂದೇ ಸಂಖ್ಯೆಯ ಜರ್ಸಿಯನ್ನು ತೊಡುವುದು ಏಕೆ? ಅದರಲ್ಲಿ ವಿಶೇಷ ಏನಿದೆ? ಎಂಬುದನ್ನು ತಿಳಿಯಲು ಅಭಿಮಾನಿಗಳು ಸಾಕಷ್ಟು ಆಸಕ್ತರಾಗಿರುತ್ತಾರೆ. ಅದರಲ್ಲಿ ಒಂದು ಜರ್ಸಿ ಸಂಖ್ಯೆ 7..

ಧೋನಿ ತನ್ನ ಜರ್ಸಿ ಮೇಲೆ ನಂ.7ನೇ ಬಳಸುವುದ್ಯಾಕೆ?
ಭಾರತದ ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ( MS Dhoni) ಅವರ ಜೆರ್ಸಿ ನಂಬರ್ 7 ಬಗ್ಗೆ ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಧೋನಿ ತನ್ನ ಜರ್ಸಿಯ ಮೇಲೆ 7 ನ ನಂಬರ್​ ಅನ್ನು ಬಳಸುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಧೋನಿ ಹಲವು ವರ್ಷಗಳಿಂದ 7 ನಂಬರ್ ಜೆರ್ಸಿಯನ್ನು ಧರಿಸುತ್ತಿದ್ದಾರೆ. ಇಲ್ಲಿಯವರೆಗೆ, ಧೋನಿ ಏಳನೇ ಸಂಖ್ಯೆಯನ್ನು ಬಳಸಿದ ನಂತರ ವಿಭಿನ್ನ ಕಥೆಗಳನ್ನು ಸೇರಿಸಲಾಗಿದೆ. ಅಂತಿಮವಾಗಿ ಧೋನಿಯೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಏಳನೇ ನಂಬರ್ ಜರ್ಸಿ ಧರಿಸಲು ವಿಶೇಷ ಕಾರಣವಿಲ್ಲ ಎಂದಿರುವ ಧೋನಿ, ಇದು ನನ್ನ ಜನ್ಮ ದಿನಾಂಕ ಹಾಗಾಗಿ 7 ನೇ ನಂಬರ್ ಜೆರ್ಸಿ ಧರಿಸುತ್ತೇನೆ ಎಂದಿದ್ದಾರೆ.

ಇಂಡಿಯಾ ಸಿಮೆಂಟ್ಸ್ ಆಯೋಜಿಸಿದ್ದ CSK ವರ್ಚುವಲ್ ಚಾಟ್ ಈವೆಂಟ್​ನಲ್ಲಿ ಭಾಗವಹಿಸಿದ್ದ ಧೋನಿ, ಮೊದಲಿಗೆ ಹಲವರು 7 ನನ್ನ ಅದೃಷ್ಟದ ನಂಬರ್ ಎಂದು ಭಾವಿಸಿದ್ದರು. ನಾನು ಏಳನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಒಂದು ಸರಳ ಕಾರಣವಿದೆ. 7ನೇ ತಾರೀಖು ನನ್ನ ಜನ್ಮದಿನ. ಏಳನೇ ತಿಂಗಳು ಏಳನೇ ತಾರೀಖು. ಯಾವ ಸಂಖ್ಯೆ ಉತ್ತಮ ಎಂದು ಲೆಕ್ಕಾಚಾರ ಮಾಡುವ ಬದಲು ನಾನು ನನ್ನ ಜನ್ಮದಿನಾಂಕದ ಜೆರ್ಸಿಯನ್ನು ಬಳಸಲು ತೀರ್ಮಾನಿಸಿದೆ ಎಂದು ಧೋನಿ ಹೇಳಿದ್ದಾರೆ.

ಡ್ರೈವರ್ ಆದ ಧೋನಿ
ಐಪಿಎಲ್‌ಗೂ ಮುನ್ನ ಧೋನಿ ಪ್ರತಿ ಬಾರಿಯೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ಬಾರಿ ಅವರ ಅಣಕ ನೋಟ ವೈರಲ್ ಆಗಿತ್ತು. ಈ ಬಾರಿಯೂ ಧೋನಿ ವಿಭಿನ್ನ ರೂಪ ತಳೆದಿದ್ದಾರೆ. ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಎರಡು ಕಿರು ವೀಡಿಯೊಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಧೋನಿಯ ಈ ಹೊಸ ರೂಪವನ್ನು ಕಾಣಬಹುದು.

ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ವಿಡಿಯೋಗಳಲ್ಲಿ ಧೋನಿ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಕೇವಲ ಐದು ಸೆಕೆಂಡುಗಳ ಕಾಲದ ವೀಡಿಯೊದಲ್ಲಿ, ಧೋನಿ ಡ್ರೈವರ್ ಡ್ರೆಸ್, ಮೀಸೆ ಮತ್ತು ಗುಂಗುರು ಕೂದಲಿನಲ್ಲಿ ವಾಹನದ ಬ್ರೇಕ್ ಹಾಕುತ್ತಿರುವುದು ಕಂಡುಬಂದಿದೆ. ಎರಡನೇ ವಿಡಿಯೋದಲ್ಲಿ ಧೋನಿ ಬಸ್‌ನ ಮೆಟ್ಟಿಲುಗಳ ಮೇಲೆ ಕುಳಿತಿದ್ದಾರೆ. ಇವೆರಡರಲ್ಲೂ ಚಾಲಕನ ಖಾಕಿ ಸಮವಸ್ತ್ರ ಧರಿಸಿದ್ದಾರೆ.

ವಾಸ್ತವವಾಗಿ, ಇದು ಧೋನಿ ಚಾಲಕನಾಗಿ ಬರುತ್ತಿರುವ ಐಪಿಎಲ್‌ನ ಮುಂದಿನ ಸೀಸನ್‌ನ ಪ್ರೋಮೋ ಆಗಿದೆ. ಇವೆರಡೂ ಐಪಿಎಲ್​ ಮುಂದಿನ ಸೀಸನ್​ನ ಟೀಸರ್‌ಗಳಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಪ್ರೋಮೋ ಹೊರಬೀಳಲಿದೆ.

ಇದನ್ನೂ ಓದಿ:IND vs WI, WWC 2022: ಧೋನಿ- ಕೊಹ್ಲಿ.. ಸ್ಮೃತಿ- ಹರ್ಮನ್‌ಪ್ರೀತ್! ಜರ್ಸಿ ನಂಬರ್ 7 ಮತ್ತು 18 ರ ಮ್ಯಾಜಿಕ್ ಇದು