ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs New Zealand) ಸೋಲು ಕಂಡಿದೆ. ಈ ಸೋಲಿನ ನಡುವೆ ಭಾರತೀಯ ಅಭಿಮಾನಿಗಳನ್ನು ಖುಷಿ ಪಡಿಸಿದ್ದು ಲೆಜೆಂಡರಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni). ಎಂಎಸ್ಡಿ ತಮ್ಮ ತವರು ಮೈದಾನದಲ್ಲಿ ಪತ್ನಿ ಸಾಕ್ಷಿ ಜೊತೆ ಭಾರತ-ನ್ಯೂಜಿಲೆಂಡ್ ನಡುವಣ ಪಂದ್ಯ ವೀಕ್ಷಿಸಲು ಹಾಜರಿದ್ದರು. ಸ್ಟೇಡಿಯಂನಲ್ಲಿ ಮೆರೆದಿದ್ದ ಪ್ರೇಕ್ಷಕರು ಧೋನಿಯನ್ನು ಕಂಡ ಕೂಡಲೇ ಧೋನಿ… ಧೋನಿ… ಎಂದು ಜೋರಾಗಿ ಕೂಗಲು ಪ್ರಾರಂಭಿಸಿದ್ದಾರೆ. ಈ ಸಂದರ್ಭ ಕೂಲ್ ಕ್ಯಾಪ್ಟನ್ ಅಭಿಮಾನಿಗಳ ಕಡೆ ನೋಡಿ ನಗುತ್ತಾ ಕೈ ಬೀಸಿದ್ದಾರೆ. ಧೋನಿಯ ಈ ರಿಯಾಕ್ಷನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಮೊದಲ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ರಾಂಚಿ ಮೈದಾನಕ್ಕೆ ಬಂದ ದಿನ ಕೂಡ ಎಂಎಸ್ ಧೋನಿ ಸ್ಟೇಡಿಯಂಗೆ ದಿಢೀರ್ ಬೇಟಿ ನೀಡಿದ್ದರು. ಬಳಿಕ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಆಟಗಾರರ ಜೊತೆ ಮಾತುಕತೆ ನಡೆಸಿದರು. ಧೋನಿ ತನ್ನ ತವರಿನ ರಾಂಚಿಯ ಕ್ರೀಡಾಂಗಣಕ್ಕೆ ತೆರಳಿ ಟೀಮ್ ಇಂಡಿಯಾ ಪ್ಲೇಯರ್ಸ್ ಬೇಟಿ ಆದ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಧೋನಿ ಅವರು ನಾಯಕ ಹಾರ್ದಿಕ್, ಇಶಾನ್ ಕಿಶನ್, ಶಿವಂ ಮಾವಿ, ವಾಷಿಂಗ್ಟನ್ ಸುಂದರ್ ಜೊತೆ ಹೆಚ್ಚು ಸಮಯ ಕಳೆದಿರುವುದು ಕಂಡುಬಂದಿದೆ. ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣ ಧೋನಿಯ ತವರು ಮೈದಾನವಾಗಿದ್ದು ಆಗಾಗ್ಗ ಇಲ್ಲಿಗೆ ಬೇಟಿ ನೀಡುತ್ತಾ ಇರುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಸದ್ಯ 16ನೇ ಆವೃತ್ತಿಗಾಗಿ ಅಭ್ಯಾಸ ಆರಂಭಿಸಿದ್ದಾರೆ.
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಡೆವೊನ್ ಕಾನ್ವೆ (52) ಹಾಗೂ ಡೆರಲ್ ಮಿಚೆಲ್(59) ಅವರ ಅರ್ಧಶತಕಗಳ ನೆರವಿನಿಂದ 176 ರನ್ ಪೇರಿಸಿತು. ಫಿನ್ ಅಲೆನ್ 35, ಗ್ಲೇನ್ ಫಿಲ್ಲಿಪ್ಸ್ 17 ರನ್ಗಳ ಕೊಡುಗೆ ನೀಡಿದರು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಶಿವಂ ತಲಾ ಒಂದು ವಿಕೆಟ್ ಪಡೆದರು. 177 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು.
ನಾಯಕ ಹಾರ್ದಿಕ್ ಪಾಂಡ್ಯ (21) ಹಾಗೂ ಸೂರ್ಯಕುಮಾರ್ ಯಾದವ್(47) ಜೊತೆಯಾಟದ ಮೂಲಕ ಭರವಸೆ ಮೂಡಿಸಿದರೂ ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 50 ರನ್ ಬಾರಿಸಿದರೂ ಸಹ ಇತರೆ ಬ್ಯಾಟರ್ಗಳು ಸಾಥ್ ನೀಡಲಿಲ್ಲ. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 9 ವಿಕೆಟ್ಗೆ 155 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲು ಕಂಡಿತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 0-1 ರ ಹಿನ್ನಡೆಯಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Sat, 28 January 23