Faf du Plessis: ಕೊಹ್ಲಿ ನಾಯಕತ್ವದ ಶೈಲಿ ಆಗಲ್ಲ, ಧೋನಿ ಬೆಸ್ಟ್ ಕ್ಯಾಪ್ಟನ್: RCB ನಾಯಕನ ಮನದಾಳದ ಮಾತು
IPL 2022 RCB Squad: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್ವುಡ್.
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2022) ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ. ವಿಶೇಷ ಎಂದರೆ ಈ ಹಿಂದೆ ಫಾಫ್ ಡು ಸಿಎಸ್ಕೆ ಪರ ಆಡಿದ್ದರು. ಹೀಗಾಗಿಯೇ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವವನ್ನು ತುಂಬಾ ಹತ್ತಿರದಿಂದ ಬಲ್ಲ ಆಟಗಾರರಲ್ಲಿ ಫಾಫ್ ಡುಪ್ಲೆಸಿಸ್ ಕೂಡ ಒಬ್ಬರು. ಈ ಬಗ್ಗೆ ಮಾತನಾಡಿರುವ ಫಾಫ್ ಡು ಪ್ಲೆಸಿಸ್, ನನ್ನ ನಾಯಕತ್ವದ ವಿಧಾನವು ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಅವರಂತೆಯೇ ಇದೆ ಎಂದು ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಆರ್ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫಾಫ್ ಡು ಪ್ಲೆಸಿಸ್ 2012 ರಿಂದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದರು. ಕಳೆದ 10 ಸೀಸನ್ನಲ್ಲಿ ಸಿಎಸ್ಕೆ ಪರ ಆಡಿರುವ ಡುಪ್ಲೆಸಿಸ್ ಇದುವರೆಗೆ ಐಪಿಎಲ್ನಲ್ಲಿ ನಾಯಕರಾಗಿ ಕಾಣಿಸಿಕೊಂಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಆರ್ಸಿಬಿಗೆ ಆಯ್ಕೆಯಾಗಿರುವ ಸೌತ್ ಆಫ್ರಿಕಾ ಆಟಗಾರನಿಗೆ ಕ್ಯಾಪ್ಟನ್ ಪಟ್ಟ ದೊರೆತಿದೆ.
ಚೊಚ್ಚಲ ಬಾರಿ ಐಪಿಎಲ್ನಲ್ಲಿ ಕ್ಯಾಪ್ಟನ್ಸಿ ಸಿಕ್ಕಿರುವ ಬಗ್ಗೆ ಮಾತನಾಡಿರುವ ಫಾಫ್ ಡುಪ್ಲೆಸಿಸ್, ನನ್ನ ಕ್ರಿಕೆಟ್ ಪ್ರಯಾಣದಲ್ಲಿ ಕೆಲವು ಶ್ರೇಷ್ಠ ನಾಯಕರೊಂದಿಗೆ ಆಡಿರುವುದು ನನ್ನ ಅದೃಷ್ಟ. ನಾನು ಗ್ರೇಮ್ ಸ್ಮಿತ್ ಅವರೊಂದಿಗೆ ಆಡುತ್ತಾ ಬೆಳೆದಿದ್ದೇನೆ. ಅವರು ದಕ್ಷಿಣ ಆಫ್ರಿಕಾದ ಅತ್ಯುತ್ತಮ ನಾಯಕರಾಗಿದ್ದಾರೆ. ಆ ಬಳಿಕ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರೊಂದಿಗೆ 10 ವರ್ಷಗಳನ್ನು ಕಳೆದಿದ್ದೇನೆ. ಈ ಇಬ್ಬರೂ ಶ್ರೇಷ್ಠ ನಾಯಕರು.
ನನ್ನ ಹಾಗೂ ಎಂಎಸ್ ಧೋನಿ ನಾಯಕತ್ವದಲ್ಲಿ ಸಾಮ್ಯತೆ ಇದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವಿಬ್ಬರೂ ತುಂಬಾ ಶಾಂತ ಸ್ವಭಾವದವರು. ಆದರೆ ನನಗೆ ಆಸಕ್ತಿದಾಯಕ ವಿಷಯವೆಂದರೆ ನಾನು ಸಿಎಸ್ಕೆ ತಂಡದಲ್ಲಿ ಆಡಲು ಪ್ರಾರಂಭಿಸಿದಾಗ, ನನಗೆ ಧೋನಿ ವಿಭಿನ್ನವಾಗಿ ಕಂಡಿದ್ದರು. ದಕ್ಷಿಣ ಆಫ್ರಿಕಾದ ನಾಯಕತ್ವ ಸಂಸ್ಕೃತಿಯಲ್ಲಿದ್ದ ನನಗೆ ಎಂಎಸ್ ಸಂಪೂರ್ಣವಾಗಿ ವಿರುದ್ಧ ನಿಲುವುಗಳನ್ನು ಹೊಂದಿರುವ ಆಟಗಾರ ಎನಿಸಿಕೊಂಡಿದ್ದೆ ಎಂದು ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ.
ನಾನು ಯೋಚಿಸಿದ್ದೇ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಾಯಕತ್ವದ ವಿಭಿನ್ನ ಮಾರ್ಗಗಳಿರಬಹುದು, ಆದರೆ ನಿಮ್ಮದೇ ಆದ ದಾರಿಯನ್ನು ಹೊಂದಿರುವುದು ಮುಖ್ಯ ಎಂದು ನಾನು ಮತ್ತೊಮ್ಮೆ ತಿಳಿದುಕೊಂಡೆ. ಏಕೆಂದರೆ ಒತ್ತಡ ಬಂದಾಗ, ನಿಮ್ಮ ಸ್ವಂತ ವಿಧಾನವು ಸಹಾಯ ಮಾಡುತ್ತದೆ. ವಿರಾಟ್ ಕೊಹ್ಲಿ ನಾಯಕತ್ವದ ಶೈಲಿಯನ್ನು ನಾನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾನು ವಿರಾಟ್ ಕೊಹ್ಲಿ ಅಲ್ಲ. ಹಾಗೆಯೇ ನಾನು ಎಂಎಸ್ ಧೋನಿಯಂತೆ ನಾಯಕನಾಗಲು ಪ್ರಯತ್ನಿಸಲು ಸಾಧ್ಯವಿಲ್ಲ ಎಂದು ಫಾಫ್ ಡುಪ್ಲೆಸಿಸ್ ಹೇಳಿದರು.
ಆದರೆ ನನ್ನ ನಾಯಕತ್ವ ಶೈಲಿಯಲ್ಲಿ ಸಹಾಯ ಮಾಡುವ ಕೆಲವು ವಿಷಯಗಳನ್ನು ನಾನು ಕಲಿತಿದ್ದೇನೆ. ಈ ಪ್ರಯಾಣಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಎಂಎಸ್ (ಧೋನಿ) ಒಬ್ಬ ಅದ್ಭುತ ನಾಯಕ ಮತ್ತು ಪ್ರಾಯಶಃ ವಿಶ್ವದ ಯಾವುದೇ ನಾಯಕರಿಗಿಂತ ಹೆಚ್ಚಿನ ಯಶಸ್ಸನ್ನು ಗಳಿಸಿದ್ದಾರೆ. ಈ ಪಯಣದ ಭಾಗವಾಗಿರುವುದು ಒಂದು ಗೌರವ. ಇದೀಗ ನಾನು ಕೂಡ ಆರ್ಸಿಬಿ ತಂಡವನ್ನು ಯಶಸ್ಸಿನ ಪಥದತ್ತ ಮುನ್ನಡೆಸುವ ವಿಶ್ವಾಸ ಹೊಂದಿದ್ದೇನೆ ಎಂದು ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್