ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್‌ಗೆ ಅದ್ಧೂರಿ ಸ್ವಾಗತ

ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಆಟಗಾರರ ವಿನಿಮಯ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಪಂಜಾಬ್ ಸೇರಿದ್ದರೆ, ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್‌ಗೆ ಬಂದಿದ್ದಾರೆ. ಆಕಾಶ್ ಅಂಬಾನಿ ಹಾರ್ದಿಕ್‌ಗೆ ಶುಭ ಹಾರೈಸಿ, ಅರ್ಷದೀಪ್ ಆಗಮನದಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್‌ಗೆ ಅದ್ಧೂರಿ ಸ್ವಾಗತ
ಆಕಾಶ್ ಅಂಬಾನಿ, ಹಾರ್ದಿಕ್ ಪಾಂಡ್ಯ

Updated on: Nov 11, 2026 | 3:08 PM

ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಊಹಾಪೋಹ ಹಾಗೂ ಚರ್ಚೆಗಳಿಗೆ ತೆರೆ ಬಿದ್ದಿದ್ದು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಬಹುನಿರೀಕ್ಷಿತ ಆಟಗಾರರ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಒಪ್ಪಂದದ ಮೂಲಕ ಮುಂಬೈ ತಂಡ ತನ್ನ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಟ್ಟಿದ್ದರೆ, ಪಂಜಾಬ್ ಕಿಂಗ್ಸ್ ತನ್ನ ತಂಡದ ಪ್ರಮುಖ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈಗೆ ಕಳುಹಿಸಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಸಹ ಮಾಲೀಕ ಆಕಾಶ್ ಅಂಬಾನಿ, ತಂಡದಿಂದ ಹೊರನಡೆದಿರುವ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಶುಭ ಹಾರೈಸಿದ್ದಾರೆ. ಹಾರ್ದಿಕ್ ಅವರೊಂದಿಗಿನ ಒಡನಾಟದಲ್ಲಿ ಹಲವು ಸ್ಮರಣೀಯ ಕ್ಷಣಗಳನ್ನು ಕಳೆದಿದ್ದೇವೆ. ತಂಡದ ಯಶಸ್ಸಿನಲ್ಲಿ ಅವರ ಕೊಡುಗೆ, ಉತ್ಸಾಹ ಹಾಗೂ ಮೈದಾನದಲ್ಲಿನ ಹೋರಾಟದ ಮನೋಭಾವ ಬಹಳ ಮಹತ್ವದ್ದಾಗಿತ್ತು ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

ಹಾರ್ದಿಕ್ ಬಗ್ಗೆ ನನಗೆ ಅಪಾರ ಗೌರವವಿದೆ

ಈ ಕುರಿತು ಮಾತನಾಡಿರುವ ಆಕಾಶ್ ಅಂಬಾನಿ, ‘ಹಾರ್ದಿಕ್ ಅವರು ಮುಂಬೈ ಇಂಡಿಯನ್ಸ್ ಜೊತೆ ಹಲವು ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಕ್ರಿಕೆಟಿಗನಾಗಿ ಅವರು ಬೆಳೆಯುವುದನ್ನು, ವಿಶ್ವಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದನ್ನು ಹಾಗೂ ಮತ್ತೆ ತಂಡಕ್ಕೆ ಮರಳಿ ನಾಯಕತ್ವ ವಹಿಸುವುದನ್ನು ನಾವು ನೋಡಿದ್ದೇವೆ. ತಂಡಕ್ಕೆ ಅವರ ಕೊಡುಗೆ, ಉತ್ಸಾಹ ಮತ್ತು ಮೈದಾನದಲ್ಲಿ ತೋರುವ ಹೋರಾಟದ ಗುಣ ಅಮೂಲ್ಯವಾದದ್ದು. ಕ್ರಿಕೆಟಿಗನಾಗಿ ಮಾತ್ರವಲ್ಲ, ಒಬ್ಬ ವ್ಯಕ್ತಿಯಾಗಿಯೂ ಹಾರ್ದಿಕ್ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಮುಂದಿನ ಜೀವನ ಹಾಗೂ ಕ್ರಿಕೆಟ್ ಪಯಣಕ್ಕೆ ಹೃತ್ಪೂರ್ವಕ ಶುಭಾಶಯಗಳು’ ಎಂದು ತಿಳಿಸಿದ್ದಾರೆ.

Loading...

ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ

ಇದೇ ವೇಳೆ ಭಾರತದ ಪ್ರಮುಖ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಬರಮಾಡಿಕೊಂಡಿರುವ ಆಕಾಶ್ ಅಂಬಾನಿ, ಅವರ ಆಗಮನದಿಂದ ಮುಂಬೈ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಅರ್ಷದೀಪ್ ಸಿಂಗ್ ಅವರ ಆಗಮನ ನಮ್ಮ ಬೌಲಿಂಗ್ ವಿಭಾಗಕ್ಕೆ ಹೊಸ ಆಯಾಮ ನೀಡಲಿದೆ. ಅನುಭವ, ಕೌಶಲ ಮತ್ತು ಗೆಲ್ಲಬೇಕೆಂಬ ಹಸಿವು ಇರುವ ಆಟಗಾರರನ್ನು ಒಳಗೊಂಡ ಸಮತೋಲಿತ ತಂಡವನ್ನು ಕಟ್ಟುವುದು ನಮ್ಮ ಗುರಿ. ಈ ಎಲ್ಲಾ ಗುಣಗಳು ಅರ್ಷದೀಪ್ ಅವರಲ್ಲಿವೆ. ಅವರು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸೇರ್ಪಡೆಯಾಗುತ್ತಿರುವುದಕ್ಕೆ ಸಂತೋಷವಾಗಿದೆ. ನೀಲಿ ಮತ್ತು ಚಿನ್ನದ ಜೆರ್ಸಿಯಲ್ಲಿ ಅವರನ್ನು ಸ್ವಾಗತಿಸಲು ನಾವು ಕಾತರರಾಗಿದ್ದೇವೆ’ ಎಂದು ಹೇಳಿದ್ದಾರೆ.

4 ಬಾರಿ ಚಾಂಪಿಯನ್ ಆಗಿದ್ದ ಹಾರ್ದಿಕ್

ಹಾರ್ದಿಕ್ ಪಾಂಡ್ಯ ಅವರ ಈ ವರ್ಗಾವಣೆಯೊಂದಿಗೆ ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ಅವರ ಎರಡನೇ ಅವಧಿ ಅಂತ್ಯಗೊಂಡಿದೆ. ಮುಂಬೈ ತಂಡದ ಪರ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಹಾರ್ದಿಕ್, 2015ರಲ್ಲಿ ಮೊದಲ ಬಾರಿಗೆ ಈ ತಂಡವನ್ನು ಸೇರಿಕೊಂಡಿದ್ದರು. ತಮ್ಮ ಆಲ್‌ರೌಂಡ್ ಆಟದ ಮೂಲಕ ಐಪಿಎಲ್‌ನ ಅತ್ಯಂತ ಪ್ರಭಾವಿ ಆಟಗಾರರಲ್ಲಿ ಒಬ್ಬರಾಗಿ ಬೆಳೆದಿದ್ದರು. 2015, 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆಲ್ಲುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು.

ಹಾರ್ದಿಕ್ ಪಾಂಡ್ಯಗೆ ಹೊಸ ಮನೆ; ಅರ್ಷದೀಪ್‌ಗೆ ಮುಂಬೈ ಟಿಕೆಟ್

ಮುಂಬೈ ಪರ ಏಳು ಆವೃತ್ತಿಗಳನ್ನು ಕಳೆದ ಬಳಿಕ 2022ರ ಐಪಿಎಲ್‌ಗೂ ಮುನ್ನ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾದರು. ಅಲ್ಲಿ ನಾಯಕನ ಜವಾಬ್ದಾರಿ ವಹಿಸಿಕೊಂಡ ಹಾರ್ದಿಕ್, ಮೊದಲ ಆವೃತ್ತಿಯಲ್ಲೇ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟರು. 2023ರಲ್ಲೂ ಗುಜರಾತ್ ತಂಡ ಫೈನಲ್ ಪ್ರವೇಶಿಸಿತ್ತು. ಬಳಿಕ 2024ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಹಾರ್ದಿಕ್ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಒಟ್ಟಾರೆ 162 ಐಪಿಎಲ್ ಪಂದ್ಯಗಳಲ್ಲಿ 2,955 ರನ್ ಗಳಿಸಿರುವ ಅವರು, 146.28 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಜೊತೆಗೆ 82 ವಿಕೆಟ್‌ಗಳನ್ನು ಕಬಳಿಸಿದ್ದು, ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us