Irani Cup 2024: ಸರ್ಫರಾಝ್ ದ್ವಿಶತಕಕ್ಕೆ, ಅಭಿಮನ್ಯು ಶತಕದ ಪ್ರತ್ಯುತ್ತರ
Irani Cup 2024: ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತದೆ. ಪ್ರತಿ ಸೀಸನ್ನ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಶೇಷ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಇದೀಗ ಹಾಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ಶೇಷ ಭಾರತ ತಂಡ ಇರಾನಿ ಕಪ್ ಪಂದ್ಯವಾಡುತ್ತಿದೆ.

ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇರಾನಿ ಕಪ್ ಟೂರ್ನಿಯಲ್ಲಿ ಭರ್ಜರಿ ಪೈಪೋಟಿ ಮುಂದುವರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಕೇವಲ 37 ರನ್ಗಳಿಸುವಷ್ಟರಲ್ಲಿ ಪೃಥ್ವಿ ಶಾ (4), ಆಯುಷ್ (19) ಹಾಗೂ ಹಾರ್ದಿಕ್ ತಮೋರೆ (0) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಅಜಿಂಕ್ಯ ರಹಾನೆ 97 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 57 ರನ್ ಸಿಡಿಸಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಸರ್ಫರಾಝ್ ಖಾನ್ 253 ಎಸೆತಗಳಲ್ಲಿ 23 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ ದ್ವಿಶತಕ ಪೂರೈಸಿದರು. ಈ ಮೂಲಕ ಇರಾನಿ ಕಪ್ನಲ್ಲಿ ಮುಂಬೈ ಪರ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದರು.
ಈ ಮೂಲಕ ಮೂರನೇ ದಿನದಾಟದಲ್ಲೂ ಬ್ಯಾಟಿಂಗ್ ಮುಂದುವರೆಸಿದ್ದ ಸರ್ಫರಾಝ್ ಖಾನ್ ಒಂದೆಡೆ ಅಜೇಯರಾಗಿ ಉಳಿದರೆ, ಮತ್ತೊಂದೆಡೆ ವಿಕೆಟ್ ಪತನಗೊಂಡಿತು. ಪರಿಣಾಮ ಮುಂಬೈ ತಂಡವು ಪ್ರಥಮ ಇನಿಂಗ್ಸ್ನಲ್ಲಿ 537 ರನ್ಗಳಿಸಿ ಆಲೌಟ್ ಆಗಿದೆ.
ಮುಂಬೈ ಪರ 286 ಎಸೆತಗಳನ್ನು ಎದುರಿಸಿದ ಸರ್ಫರಾಝ್ ಖಾನ್ 4 ಸಿಕ್ಸ್ ಹಾಗೂ 25 ಫೋರ್ಗಳೊಂದಿಗೆ 222 ರನ್ ಬಾರಿಸಿ ಅಜೇಯರಾಗಿ ಉಳಿದರು. ಶೇಷ ಭಾರತ ತಂಡದ ಪರ ಮುಖೇಶ್ ಕುಮಾರ್ 5 ವಿಕೆಟ್ ಕಬಳಿಸಿದರೆ, ಯಶ್ ದಯಾಳ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದು ಮಿಂಚಿದರು.
537 ರನ್ಗಳಿಗೆ ಪ್ರತ್ಯುತ್ತರವಾಗಿ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡವು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 9 ರನ್ಗಳಿಸಿ ಔಟಾದರು. ಇನ್ನು ಸಾಯಿ ಸುದರ್ಶನ್ 32 ರನ್ ಬಾರಿಸಿದರೆ, ದೇವದತ್ ಪಡಿಕ್ಕಲ್ (16) ಹಾಗೂ ಇಶಾನ್ ಕಿಶನ್ 38 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಅಭಿಮನ್ಯು ಈಶ್ವರನ್ ಕೇವಲ 117 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ತಂಡದ ಮೊತ್ತ 250ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಂತೆ ಮೂರನೇ ದಿನದಾಟದ ಅಂತ್ಯಕ್ಕೆ ಶೇಷ ಭಾರತ ತಂಡವು 4 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿದೆ.
ಸದ್ಯ ಕ್ರೀಸ್ನಲ್ಲಿ 212 ಎಸೆತಗಳಲ್ಲಿ 11 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಅಜೇಯ 151 ರನ್ ಬಾರಿಸಿದ ಅಭಿಮನ್ಯು ಈಶ್ವರನ್ ಹಾಗೂ ಧ್ರುವ್ ಜುರೇಲ್ (30) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಆಯುಷ್ ಮ್ಹಾತ್ರೆ , ಶ್ರೇಯಸ್ ಅಯ್ಯರ್ , ಅಜಿಂಕ್ಯ ರಹಾನೆ (ನಾಯಕ) , ಸರ್ಫರಾಝ್ ಖಾನ್ , ಹಾರ್ದಿಕ್ ತಮೋರೆ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಎಂ ಜುನೇದ್ ಖಾನ್.
ಇದನ್ನೂ ಓದಿ: ಹೆಚ್ಚುವರಿ 36 ಎಸೆತಗಳಿಂದ ಟೀಮ್ ಇಂಡಿಯಾ ಕೈ ತಪ್ಪಿದ ಸಾರ್ವಕಾಲಿಕ ಶ್ರೇಷ್ಠ ದಾಖಲೆ
ಶೇಷ ಭಾರತ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ) , ದೇವದತ್ ಪಡಿಕ್ಕಲ್ , ಅಭಿಮನ್ಯು ಈಶ್ವರನ್ , ಸಾಯಿ ಸುದರ್ಶನ್ , ಇಶಾನ್ ಕಿಶನ್ , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಸರನ್ಶ್ ಜೈನ್ , ಯಶ್ ದಯಾಳ್ , ಪ್ರಸಿದ್ಧ್ ಕೃಷ್ಣ , ಮುಖೇಶ್ ಕುಮಾರ್.