Ranji Trophy 2022: ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿ ದಾಖಲೆ ಬರೆದ ಮುಂಬೈ ಆಟಗಾರ
Suved Parkar: ಪ್ರಸ್ತುತ ಮುಂಬೈ ತಂಡದ ಕೋಚ್ ಅಮೋಲ್ ಮಜುಂದಾರ್ ಈ ದಾಖಲೆ ಬರೆದಿದ್ದರು. 1994 ರಲ್ಲಿ ಅಮೋಲ್ ದ್ವಿಶತಕದೊಂದಿಗೆ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು.
ದೇಶೀಯ ಅಂಗಳದಲ್ಲಿ ರಣಜಿ ಟ್ರೋಫಿಯ (Ranji Trophy 2022) ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದೆ. 2ನೇ ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ ಉತ್ತರಾಖಂಡ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದ ಎರಡನೇ ದಿನದಾಟದಲ್ಲಿ ಮುಂಬೈ ತಂಡವು ಮೇಲುಗೈ ಸಾಧಿಸಿದೆ. ಈಗಾಗಲೇ 600 ಕ್ಕೂ ಅಧಿಕ ರನ್ ಕಲೆಹಾಕಿದೆ. ಇನ್ನು ಮುಂಬೈ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸರ್ಫರಾಜ್ ಖಾನ್ ಹಾಗೂ ಸುವೇದ್ ಪಾರ್ಕರ್ (Suved Parkar). ಗಾಯಗೊಂಡಿರುವ ಅಜಿಂಕ್ಯ ರಹಾನೆ ಬದಲಿಗೆ ಅವಕಾಶ ಪಡೆದ ಸುವೇದ್ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲಿ ದ್ವಿಶತಕ ಗಳಿಸಿ ಇತಿಹಾಸ ಬರೆದರು.
ಸುವೇದ್ ತಮ್ಮ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲೇ ಮುಂಬೈ ಪರ ದ್ವಿಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಎಂಬ ದಾಖಲೆಯನ್ನು ಕೂಡ ಬರೆದಿದ್ದಾರೆ. ಇದಕ್ಕೂ ಮುನ್ನ ಪ್ರಸ್ತುತ ಮುಂಬೈ ತಂಡದ ಕೋಚ್ ಅಮೋಲ್ ಮಜುಂದಾರ್ ಈ ದಾಖಲೆ ಬರೆದಿದ್ದರು. 1994 ರಲ್ಲಿ ಅಮೋಲ್ ದ್ವಿಶತಕದೊಂದಿಗೆ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಇದೀಗ 28 ವರ್ಷಗಳ 252 ರನ್ ಬಾರಿಸುವ ಮೂಲಕ ಸುವೇದ್ ಪಾರ್ಕರ್ ತಮ್ಮ ಕೋಚ್ ಬರೆದಿದ್ದ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ ಪಾರ್ಕರ್ ಅವರಿಗೆ ಉತ್ತಮ ಸಾಥ್ ನೀಡಿದರು. ಸರ್ಫರಾಜ್ 153 ರನ್ ಗಳ ಇನಿಂಗ್ಸ್ ಆಡುವ ಮೂಲಕ ಈ ಬಾರಿಯ ರಣಜಿ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿ ಮಿಂಚಿದರು. ಅಲ್ಲದೆ ಈ ಜೋಡಿ ನಾಲ್ಕನೇ ವಿಕೆಟ್ಗೆ 267 ರನ್ ಜೊತೆಯಾಟವಾಡಿದರು.
447 ಎಸೆತಗಳನ್ನು ಎದುರಿಸಿದ ಸುವೇದ್ ಪಾರ್ಕರ್ 21 ಫೋರ್ ಹಾಗೂ 4 ಸಿಕ್ಸ್ನೊಂದಿಗೆ 252 ರನ್ಗಳಿಸಿ ರನೌಟ್ ಆದರು. ಹಾಗೆಯೇ ಸರ್ಫರಾಜ್ ಖಾನ್ 205 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 14 ಫೋರ್ನೊಂದಿಗೆ 153 ರನ್ ಬಾರಿಸಿ ಮಯಾಂಕ್ ಮಿಶ್ರಾ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು 8 ವಿಕೆಟ್ ಕಳೆದುಕೊಂಡು 647 ರನ್ಗಳಿಸಿ ಡಿಕ್ಲೇರ್ ಘೋಷಿಸಿದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.