Maharaja Trophy 2025: ಮೈಸೂರು ವಿರುದ್ಧ 39 ರನ್ಗಳಿಂದ ಸೋತ ಬೆಂಗಳೂರು
Maharaja Trophy 2025: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿಯ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಬೆಂಗಳೂರು ಬ್ಲಾಸ್ಟರ್ಸ್ ಅನ್ನು ಸೋಲಿಸಿತು. ಮಳೆಯಿಂದಾಗಿ ಪಂದ್ಯವನ್ನು 16 ಓವರ್‌ಗಳಿಗೆ ಕಡಿಮೆ ಮಾಡಲಾಯಿತು. ಮೈಸೂರು 136 ರನ್ ಗಳಿಸಿದರೆ, ಬೆಂಗಳೂರು 97 ರನ್ಗಳಿಗೆ ಆಲೌಟ್ ಆಯಿತು ಮೈಸೂರು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಮತ್ತು ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯ (Maharajah T20 Trophy) 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮಳೆಯ ಕಾರಣದಿಂದಾಗಿ ಈ ಪಂದ್ಯವನ್ನು ತಲಾ 16 ಓವರ್‌ಗಳಿಗೆ ಮೀಸಲಿರಿಸಲಾಯಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡ 7 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ನಿಗದಿತ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 97 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
136 ರನ್ ಕಲೆಹಾಕಿದ ಮೈಸೂರು
ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡದ ಪರ ಯಶೋವರ್ಧನ್ ಪರಂತಪ್ ಅತ್ಯಧಿಕ 39 ರನ್ಗಳ ಇನ್ನಿಂಗ್ಸ್ ಆಡಿದರೆ, ಆರಂಭಿಕ ಅಜಿತ್ ಕಾರ್ತಿಕ್ 20 ರನ್ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಯಾವ ಆಟಗಾರನಿಗೂ 20 ರನ್ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಇತ್ತ ಬೆಂಗಳೂರು ಪರ ಮೊಹ್ಸಿನ್ ಖಾನ್ ಹಾಗೂ ವಿದ್ಯಾದರ್ ಪಾಟೀಲ್ ತಲಾ 2 ವಿಕೆಟ್ ಪಡೆದರು.
ಶಿಖರ್ ದಾಳಿಗೆ ನಲುಗಿದ ಬೆಂಗಳೂರು
ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಮೊದಲ ಓವರ್ನಲ್ಲೇ ಆಘಾತ ಎದುರಾಯಿತು. ಭರವಸೆಯ ಬ್ಯಾಟರ್ ಚೇತನ್ ಮೊದಲ ಓವರ್ನ ಮೂರನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಆ ಬಳಿಕವೂ ತಂಡದ ಇನ್ನಿಂಗ್ಸ್ ಚೇತರಿಸಿಕೊಳ್ಳಲೇ ಇಲ್ಲ. 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಾಧವ್ ಪ್ರಕಾಶ್ ಬಜಾಜ್ ತಂಡದ ಪರ ಅತ್ಯಧಿಕ 34 ರನ್ಗಳ ಇನ್ನಿಂಗ್ಸ್ ಆಡದಿದ್ದರೆ, ಇಡೀ ತಂಡ 50 ರನ್ಗಳ ಒಳಗೆ ಆಲೌಟ್ ಆಗುವ ಸಾಧ್ಯತೆಗಳಿದ್ದವು. ಆದರೆ ಮಾಧವ್ ಪ್ರಕಾಶ್ ಅವರ ಹೋರಾಟದ ನಡುವೆಯೂ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೈಸೂರು ತಂಡದ ಪರ ಶಿಖರ್ ಶೆಟ್ಟಿ 3 ವಿಕೆಟ್ ಪಡೆದರೆ, ಅನುಭವಿ ಕೃಷ್ಣಪ್ಪ ಗೌತಮ್ 2 ವಿಕೆಟ್ ಪಡೆದರು.
ಪಾಯಿಂಟ್ ಪಟ್ಟಿ ಹೀಗಿದೆ
ಈ ಆವೃತ್ತಿಯಲ್ಲಿ ಉಭಯ ತಂಡಗಳು ತಲಾ 6 ಪಂದ್ಯಗಳನ್ನಾಡಿವೆ. ಇದರಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ 2 ಗೆಲುವು ಹಾಗೂ 2 ಸೋಲಿನೊಂದಿಗೆ 6 ಪಾಯಿಂಟ್ ಕಲೆಹಾಕಿದ್ದು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತ್ತ ಬೆಂಗಳೂರು ತಂಡ 3 ಗೆಲುವು ಹಾಗೂ 3 ಸೋಲುಗಳೊಂದಿಗೆ 6 ಪಾಯಿಂಟ್ ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಮೈಸೂರು ತಂಡದ ನೆಟ್ ರನ್ರೇಟ್ ಬೆಂಗಳೂರು ತಂಡಕ್ಕಿಂತ ಉತ್ತಮವಾಗಿರುವುದರಿಂದ ಎರಡನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
