
ಪಂಜಾಬ್ ಕ್ರಿಕೆಟ್ ಸಂಸ್ಥೆಯ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಶೇರ್-ಎ-ಪಂಜಾಬ್ ಟಿ20 ಲೀಗ್ನಲ್ಲಿ ಅಮೃತಸರ್ ಸೂರ್ಮಾಸ್ ತಂಡದ ನಾಯಕ ನಮನ್ ಧೀರ್ ವಿಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ಟಿ20 ಲೀಗ್ ಇತಿಹಾಸದಲ್ಲೇ ಗರಿಷ್ಠ ವೈಯುಕ್ತಿಕ ಸ್ಕೋರ್ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ನಮನ್ ಧೀರ್ ತಮ್ಮದಾಗಿಸಿಕೊಂಡಿದ್ದಾರೆ.
ಮೊಹಾಲಿ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ನಮನ್ ಧೀರ್, ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 37 ಎಸೆತಗಳಲ್ಲಿ ಶತಕ ಮೂಡಿಬಂತು.
ಭರ್ಜರಿ ಸೆಂಚುರಿ ಬಳಿಕ ಸ್ಫೋಟಕ ಇನಿಂಗ್ಸ್ ಮುಂದುವರೆಸಿದ ನಮನ್ ಧೀರ್ 16 ಬೌಂಡರಿ ಹಾಗೂ 12 ಸಿಕ್ಸರ್‌ಗಳು ಒಳಗೊಂಡಂತೆ ಕೇವಲ 64 ಎಸೆತಗಳಲ್ಲಿ 173 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಶೇರ್-ಎ-ಪಂಜಾಬ್ ಟಿ20 ಟೂರ್ನಿಯಲ್ಲಿ ಕೇವಲ 64 ಎಸೆತಗಳಲ್ಲಿ 173 ರನ್ ಚಚ್ಚಿದ ನಮನ್ ಧೀರ್, ಭಾರತೀಯ ಕ್ರಿಕೆಟ್ ಹಾಗೂ ವಿಶ್ವ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಹಲವು ಬೃಹತ್ ದಾಖಲೆಗಳನ್ನು ಬರೆದಿದ್ದಾರೆ. ಆ ದಾಖಲೆಗಳ ಪಟ್ಟಿ ಇ ಕೆಳಗಿನಂತಿದೆ…
ಗರಿಷ್ಠ ವೈಯಕ್ತಿಕ ಸ್ಕೋರ್: ಭಾರತದ ಯಾವುದೇ ಬ್ಯಾಟರ್ ಅಧಿಕೃತ ಅಥವಾ ರಾಜ್ಯ ಮಟ್ಟದ ಟಿ20 ಲೀಗ್‌ಗಳಲ್ಲಿ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದಾಗಿದೆ. ಈ ಮುನ್ನ ಐಪಿಎಲ್ 2026 ರಲ್ಲಿ ಕೆ.ಎಲ್. ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಗಳಿಸಿದ್ದ 152* ರನ್ ಗಳ ದಾಖಲೆಯನ್ನು ನಮನ್ ಧೀರ್ ಮುರಿದಿದ್ದಾರೆ.
2ನೇ ಗರಿಷ್ಠ ಸ್ಕೋರ್: ಒಟ್ಟಾರೆ ಜಾಗತಿಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಅತ್ಯುತ್ತಮ ಸ್ಕೋರ್ ಆಗಿದೆ. ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ವಿಶ್ವ ದಾಖಲೆ (175* ರನ್) ಯನ್ನು ಮುರಿಯುವ ಅವಕಾಶವನ್ನು ಕೇವಲ 3 ರನ್ಗಳಿಂದ ನಮನ್ ಧೀರ್ ತಪ್ಪಿಸಿಕೊಂಡಿದ್ದಾರೆ.
ಅತೀ ವೇಗದ ಶತಕ: ನಮನ್ ಧೀರ್ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಶೇರ್-ಎ-ಪಂಜಾಬ್ ಟಿ20 ಟೂರ್ನಿ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಬರೆದ ಆಟಗಾರ ಎನಿಸಿಕೊಂಡರು.
ಅತಿ ಹೆಚ್ಚು ಬೌಂಡರಿ: ಒಂದೇ ಇನ್ನಿಂಗ್ಸ್‌ನಲ್ಲಿ 16 ಫೋರ್ ಹಾಗೂ 12 ಸಿಕ್ಸರ್ ಒಳಗೊಂಡಂತೆ ಒಟ್ಟು 28 ಬೌಂಡರಿಗಳನ್ನು ಬಾರಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದರು.
ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್: ಭಾರೀ ಹಿನ್ನಡೆ ಭೀತಿಯಲ್ಲಿ ಸೌತ್ ಝೋನ್
ನಮನ್ ಧೀರ್ ಅವರ ಭರ್ಜರಿ ಶತಕದ ನೆರವಿನೊಂದಿಗೆ ಈ ಪಂದ್ಯದಲ್ಲಿ ಅಮೃತಸರ್ ಸೂರ್ಮಾಸ್ ತಂಡ ನಿಗದಿತ 20 ಓವರ್‌ಗಳಲ್ಲಿ 279/7 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಮೊಹಾಲಿ ಕಿಂಗ್ಸ್ ತಂಡವನ್ನು 212/9 ರನ್‌ಗಳಿಗೆ ನಿಯಂತ್ರಿಸಿ, ಸೂರ್ಮಾಸ್ 67 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ನಮನ್ ಧೀರ್, ಬೌಲಿಂಗ್‌ನಲ್ಲೂ ಮಿಂಚಿ 8 ರನ್‌ಗಳಿಗೆ 2 ವಿಕೆಟ್ ಕಸಿದು ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.