
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿರುದ್ಧ ಕಳೆದ ಹಲವು ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ( NEET Protest) ನಡೆಯುತ್ತಿವೆ. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಮೌನ ಮುರಿದಿದ್ದಾರೆ. ಪರಸ್ಪರ ಗೌರವ, ಸಹಾನುಭೂತಿ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗಳ ಮೇಲೆ ಗಮನಹರಿಸುವಂತೆ ಗಿಲ್ ಮನವಿ ಮಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಗಿಲ್, ‘ಯುವ ಭಾರತೀಯನಾಗಿ, ನಮ್ಮ ಪೀಳಿಗೆ ಕಲಿಯಲು, ಕನಸು ಕಾಣಲು ಮತ್ತು ಅವರು ಆಶಿಸುವ ಭವಿಷ್ಯವನ್ನು ರೂಪಿಸಲು ಪ್ರತಿಯೊಂದು ಅವಕಾಶಕ್ಕೂ ಅರ್ಹರು ಎಂದು ನಾನು ನಂಬುತ್ತೇನೆ. ತಮ್ಮ ಅಭಿಪ್ರಾಯಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬ ಯುವಕನನ್ನು ನಾನು ಗೌರವಿಸುತ್ತೇನೆ. ಶಿಕ್ಷಣವು ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ನಾವು ಸಹಾನುಭೂತಿ, ಪರಸ್ಪರ ಗೌರವ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಹಿತಾಸಕ್ತಿಗಳೊಂದಿಗೆ ಮುಂದುವರಿಯುತ್ತೇವೆ ಎಂದು ನಾನು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಕೂಡ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ನನ್ನ ತಂದೆ ಪ್ರಾಧ್ಯಾಪಕರು, ಅನೇಕರಿಗೆ ಮಾರ್ಗದರ್ಶಕರಾಗಿದ್ರು. ಬಾಲ್ಯದಲ್ಲೇ ನನ್ನ ತಂದೆ ಅಮೂಲ್ಯ ಜೀವನ ಪಾಠ ಕಲಿಸಿದ್ದಾರೆ. ವಿಫಲತೆ ತಪ್ಪಲ್ಲ ಆದರೆ, ಮೋಸ ಮಾಡುವುದು ತಪ್ಪು. ಎಂದೂ ಅಡ್ಡದಾರಿ ಹಿಡಿಯಬೇಡ ಎಂದು ನನ್ನ ತಂದೆ ಹೇಳಿದ್ರು. ಸಮಾಜದ ಸಂಸ್ಕೃತಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಫಲಕ್ಕಿಂತ ಶ್ರಮಕ್ಕೆ ಗೌರವ ನೀಡುವ ಸಮಾಜ ನಮಗೆ ಬೇಕು. ಅರ್ಹತೆಗಿಂತ ಅಡ್ಡದಾರಿ ಹುಡುಕುವ ಮನೋಭಾವ ಬೇಡ.
ನೀಟ್ ಪ್ರತಿಭಟನೆ, ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ವಿದ್ಯಾರ್ಥಿಗಳ ನಿರಾಶೆ ಸಹಜ. ಶ್ರಮಕ್ಕೆ ಫಲ ಸಿಗದಿದ್ದಾಗ ಆಗುವ ನೋವು ಅರ್ಥವಾಗುತ್ತೆ. ಈ ನಿರಾಶೆ ಮತ್ತೆ ಬರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎಲ್ಲರೂ ಕೂಡಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯುವ ಭಾರತ ಕನಸು ಮತ್ತು ಉತ್ಸಾಹದಿಂದ ತುಂಬಿದೆ ಯುವಕರೇ ದೇಶದ ಯಶಸ್ಸಿನ ನಿಜವಾದ ಶಕ್ತಿ. ಯುವಕರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಸ್ನೇಹಿತರು, ಬಂಧುಗಳ ಬೆಂಬಲ ಕೂಡ ಅಗತ್ಯ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ