T10 League 2023: ಟಿ10 ಲೀಗ್ ಟ್ರೋಫಿ ಎತ್ತಿ ಹಿಡಿದ ಪೊಲಾರ್ಡ್ ಪಡೆ

New York Strikers vs Deccan Gladiators: ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು ಆರಂಭದಲ್ಲೇ ಮುಹಮ್ಮದ್ ವಸೀಮ್ (6) ಹಾಗೂ ರಹಮಾನುಲ್ಲಾ ಗುರ್ಬಾಝ್ (1) ವಿಕೆಟ್ ಕಳೆದುಕೊಂಡಿತು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿರೋಶನ್ ಡಿಕ್​ವೆಲ್ಲಾ 14 ರನ್​ಗಳಿಸಿ ಔಟಾದರು.

T10 League 2023: ಟಿ10 ಲೀಗ್ ಟ್ರೋಫಿ ಎತ್ತಿ ಹಿಡಿದ ಪೊಲಾರ್ಡ್ ಪಡೆ
New York Strikers
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 10, 2023 | 2:24 PM

ಅಬುಧಾಬಿಯಲ್ಲಿ ನಡೆದ ಟಿ10 ಲೀಗ್​ನ (T10 League 2023) ಫೈನಲ್ ಪಂದ್ಯದಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಕ್ಕೆ ಸೋಲುಣಿಸಿ ನ್ಯೂಯಾರ್ಕ್​ ಸ್ಟ್ರೈಕರ್ಸ್​ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಯಾರ್ಕ್​ ಸ್ಟ್ರೈಕರ್ಸ್​ ತಂಡದ ನಾಯಕ ಕೀರನ್ ಪೊಲಾರ್ಡ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್​ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾದ ಕ್ಯಾಡ್​ಮೋರ್ (13) ಹಾಗೂ ಪೂರನ್ (15) 28 ರನ್​ಗಳಿಸುಷ್ಟುವಲ್ಲಿ ಔಟಾದರು. ಇನ್ನು ಆ್ಯಂಡ್ರೆ ಫ್ಲೆಚರ್ ಇನಿಂಗ್ಸ್​ 5 ರನ್​ಗಳಿಗೆ ಸೀಮಿತವಾಯಿತು. ಮತ್ತೊಂದೆಡೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆ್ಯಂಡ್ರೆ ರಸೆಲ್ 18 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 30 ರನ್ ಬಾರಿಸಿದರು. ಇನ್ನು ರಸೆಲ್​ಗೆ ಸಾಥ್ ನೀಡಿದ ಡೇವಿಡ್ ವೀಝ 11 ಎಸೆತಗಳಲ್ಲಿ 20 ರನ್​ ಚಚ್ಚಿದರು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು 10 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 91 ರನ್ ಕಲೆಹಾಕಿತು.

ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು ಆರಂಭದಲ್ಲೇ ಮುಹಮ್ಮದ್ ವಸೀಮ್ (6) ಹಾಗೂ ರಹಮಾನುಲ್ಲಾ ಗುರ್ಬಾಝ್ (1) ವಿಕೆಟ್ ಕಳೆದುಕೊಂಡಿತು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿರೋಶನ್ ಡಿಕ್​ವೆಲ್ಲಾ 14 ರನ್​ಗಳಿಸಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಆಸಿಫ್ ಅಲಿ ಹಾಗೂ ಕೀರನ್ ಪೊಲಾರ್ಡ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ನ್ಯೂಯಾರ್ಕ್​ ಸ್ಟ್ರೈಕರ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಈ ಜೋಡಿಯು ಅರ್ಧಶತಕದ ಜೊತೆಯಾಟವಾಡಿದರು.

ಅಂತಿಮವಾಗಿ ಆಸಿಫ್ ಅಲಿ 25 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 48 ರನ್ ಬಾರಿಸಿದರೆ, ಕೀರನ್ ಪೊಲಾರ್ಡ್ 13 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಜೇಯ 22 ರನ್​ ಸಿಡಿಸಿದರು. ಈ ಮೂಲಕ 9.2 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು 94 ರನ್​ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಕೀರನ್ ಪೊಲಾರ್ಡ್ ನಾಯಕತ್ವದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು ಚೊಚ್ಚಲ ಬಾರಿಗೆ ಟಿ10 ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನ್ಯೂಯಾರ್ಕ್​​ ಸ್ಟ್ರೈಕರ್ಸ್​ ಪ್ಲೇಯಿಂಗ್ 11: ಮುಹಮ್ಮದ್ ವಸೀಮ್ , ನಿರೋಶನ್ ಡಿಕ್​ವೆಲ್ಲಾ (ವಿಕೆಟ್ ಕೀಪರ್) , ಆಸಿಫ್ ಅಲಿ , ಕೀರನ್ ಪೊಲಾರ್ಡ್ (ನಾಯಕ) , ಓಡಿಯನ್ ಸ್ಮಿತ್ , ಚಾಮಿಕಾ ಕರುಣಾರತ್ನೆ , ಸುನಿಲ್ ನರೈನ್ , ಮೊಹಮ್ಮದ್ ಅಮೀರ್ , ಅಕೇಲ್ ಹೊಸೈನ್ , ಮುಹಮ್ಮದ್ ಜವಾದುಲ್ಲಾ , ಜಾರ್ಜ್ ಸ್ಕ್ರಿಮ್ಶಾ , ರಹಮಾನುಲ್ಲಾ ಗುರ್ಬಾಝ್.

ಇದನ್ನೂ ಓದಿ: IPL 2024: ಕೈ ಕೊಡುವ ಭಯದಲ್ಲೇ ಸ್ಟಾರ್ ಆಟಗಾರನ ಕೈ ಬಿಟ್ಟ RCB..!

ಡೆಕ್ಕನ್ ಗ್ಲಾಡಿಯೇಟರ್ಸ್​ ಪ್ಲೇಯಿಂಗ್ 11: ನಿಕೋಲಸ್ ಪೂರನ್ (ನಾಯಕ) , ಟಾಮ್ ಕೊಹ್ಲರ್-ಕಾಡ್​ಮೋರ್ , ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್) , ಆಂಡ್ರೆ ರಸೆಲ್ , ಇಮಾದ್ ವಾಸಿಮ್ , ಫ್ಯಾಬಿಯನ್ ಅಲೆನ್ , ಡೇವಿಡ್ ವೀಝ, ನುವಾನ್ ತುಷಾರ , ಜಹೂರ್ ಖಾನ್ , ಮೊಹಮ್ಮದ್ ಜಾಹಿದ್ , ಟ್ರೆಂಟ್ ಬೌಲ್ಟ್ , ವಕಾರ್ ಸಲಾಮ್.