Zim Afro T10 2023: 5 ಸಿಕ್ಸ್, 4 ಫೋರ್: ಸಿಕಂದರ್ ರಾಝ ಸ್ಪೋಟಕ ಅರ್ಧಶತಕ
Zim Afro T10 2023: ಚೊಚ್ಚಲ ಝಿಮ್ ಆಫ್ರೊ ಟಿ10 ಲೀಗ್ನ ಮೊದಲ ಪಂದ್ಯ ಗೆದ್ದ ಶ್ರೇಯಸ್ಸು ಬುಲವಾಯೊ ಬ್ರೇವ್ಸ್ ತಂಡದ ಪಾಲಾಗಿದೆ.
Zim Afro T10 2023: ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಝಿಮ್ ಆಫ್ರೊ ಟಿ10 ಲೀಗ್ನ ಮೊದಲ ಪಂದ್ಯದಲ್ಲಿ ಸಿಕಂದರ್ ರಾಝ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹರಾರೆ ಹರಿಕೇನ್ಸ್ ತಂಡವು ಟಾಸ್ ಗೆದ್ದು, ಬುಲವಾಯೊ ಬ್ರೇವ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಬುಲವಾಯೊ ಬ್ರೇವ್ಸ್ ಪರ ಇನಿಂಗ್ಸ್ ಆರಂಭಿಸಿದ ಬೆನ್ ಮೆಕ್‌ಡರ್ಮಾಟ್ (18) ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು.
ಆದರೆ ಮತ್ತೋರ್ವ ಆರಂಭಿಕ ಕೋವ್ ಹರ್ಫ್ಟ್ (5) ರನೌಟ್ ಆಗುವ ಮೂಲಕ ನಿರ್ಗಮಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಸಿಕಂದರ್ ರಾಝ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ರಾಝ ಹರಾರೆ ಹರಿಕೇನ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ರಾಝ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅರ್ಧಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ರಾಝ ಕೇವಲ 30 ಎಸೆತಗಳಲ್ಲಿ ಅಜೇಯ 61 ರನ್ ಚಚ್ಚಿದರು. ಸಿಕಂದರ್ ರಾಝ್ ಅವರ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಬುಲವಾಯೊ ಬ್ರೇವ್ಸ್ ತಂಡವು ನಿಗದಿತ 10 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 128 ರನ್ ಕಲೆಹಾಕಿತು.
129 ರನ್ಗಳ ಕಠಿಣ ಗುರಿ ಬೆನ್ನತ್ತಿದ ಹರಾರೆ ಹರಿಕೇನ್ಸ್ ಪರ ರಾಬಿನ್ ಉತ್ತಪ್ಪ ಶೂನ್ಯಕ್ಕೆ ಔಟಾದರೆ, ಇರ್ಫಾನ್ ಪಠಾಣ್ ಕೇವಲ 15 ರನ್ಗಳಿಸಿದರು. ಇನ್ನು ಮೊಹಮ್ಮದ್ ನಬಿ 22 ರನ್ಗಳಿಸಿದ್ದು ತಂಡದ ಪರ ಗರಿಷ್ಠ ಸ್ಕೋರ್. ಇತ್ತ ಬೌಲಿಂಗ್ ಮೂಲಕವೂ ಮಿಂಚಿದ ರಾಝ 3 ವಿಕೆಟ್ ಕಬಳಿಸಿದರು. ಪರಿಣಾಮ ಹರಾರೆ ಹರಿಕೇನ್ಸ್ ತಂಡವು 10 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 79 ರನ್ಗಳಿಸಿ 49 ರನ್ಗಳಿಂದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಚೊಚ್ಚಲ ಝಿಮ್ ಆಫ್ರೊ ಟಿ10 ಲೀಗ್ನ ಮೊದಲ ಪಂದ್ಯ ಗೆದ್ದ ಶ್ರೇಯಸ್ಸು ಬುಲವಾಯೊ ಬ್ರೇವ್ಸ್ ತಂಡದ ಪಾಲಾಯಿತು.
ಹರಾರೆ ಹರಿಕೇನ್ಸ್ ಪ್ಲೇಯಿಂಗ್ 11: ಇಯಾನ್ ಮೋರ್ಗನ್ (ನಾಯಕ) , ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಸಮಿತ್ ಪಟೇಲ್ , ಇರ್ಫಾನ್ ಪಠಾಣ್ , ಟಿನೊಟೆಂಡಾ ಮಪೋಸಾ , ಮೊಹಮ್ಮದ್ ನಬಿ , ಬ್ರ್ಯಾಂಡನ್ ಮಾವುಟಾ , ನಾಂದ್ರೆ ಬರ್ಗರ್ , ಕ್ರಿಸ್ ಎಂಪೋಫು , ಲ್ಯೂಕ್ ಜೊಂಗ್ವೆ , ಡೊನಾವೊನ್ ಫೆರೇರಾ , ತಶಿಂಗಾ ಮುಸೆಕಿ.
ಇದನ್ನೂ ಓದಿ: Team India: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ
ಬುಲವಾಯೊ ಬ್ರೇವ್ಸ್ ಪ್ಲೇಯಿಂಗ್ 11: ಬೆನ್ ಮೆಕ್‌ಡರ್ಮಾಟ್ (ವಿಕೆಟ್ ಕೀಪರ್) , ಕೋಬ್ ಹರ್ಫ್ಟ್ , ಸಿಕಂದರ್ ರಾಝ (ನಾಯಕ) , ಆಷ್ಟನ್ ಟರ್ನರ್ , ರಿಯಾನ್ ಬರ್ಲ್ , ತಿಸಾರಾ ಪೆರೆರಾ , ಟಿಮಿಸೆನ್ ಮರುಮಾ , ಪ್ಯಾಟ್ರಿಕ್ ಡೂಲಿ , ತಸ್ಕಿನ್ ಅಹ್ಮದ್ , ಟೈಮಲ್ ಮಿಲ್ಸ್ , ಫರಾಜ್ ಅಕ್ರಮ್ , ತನಕಾ ಚಿವಂಗಾ.
Published On - 5:57 pm, Sat, 22 July 23