T20 World Cup 2022: ಸೆಮಿಫೈನಲ್​ಗೆ ನ್ಯೂಜಿಲೆಂಡ್; ಭಾರತ ಈಗ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕು! ಏಕೆ ಗೊತ್ತಾ?

| Updated By: ಪೃಥ್ವಿಶಂಕರ

Updated on: Nov 04, 2022 | 2:27 PM

T20 World Cup 2022: ಐಸಿಸಿ ಈವೆಂಟ್‌ಗಳಲ್ಲಿ, ನ್ಯೂಜಿಲೆಂಡ್ ತಂಡ ಯಾವಾಗಲೂ ಟೀಮ್ ಇಂಡಿಯಾ ಎದುರು ಮೇಲುಗೈ ಸಾಧಿಸಿದೆ. ಇದಕ್ಕೆ ಇತಿಹಾಸವೇ ಸಾಕ್ಷಿ.

T20 World Cup 2022: ಸೆಮಿಫೈನಲ್​ಗೆ ನ್ಯೂಜಿಲೆಂಡ್; ಭಾರತ ಈಗ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕು! ಏಕೆ ಗೊತ್ತಾ?
team india
Follow us on

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಭರ್ಜರಿ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್ ತಂಡ (New Zealand team) ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಮೊದಲ ತಂಡ ಎನಿಸಿಕೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಸೋಲಿಸಿ ನ್ಯೂಜಿಲೆಂಡ್‌ ಸೆಮಿಫೈನಲ್‌ ಟಿಕೆಟ್ ಖಚಿತಪಡಿಸಿಕೊಂಡಿದೆ. ಕಿವೀಸ್ ತಂಡದ ಗೆಲುವಿನ ಸ್ಕ್ರಿಪ್ಟ್ ಬರೆದ ನಾಯಕ ವಿಲಿಯಮ್ಸನ್ 35 ಎಸೆತಗಳಲ್ಲಿ 61 ರನ್ ಗಳಿಸಿ ತ್ವರಿತ ಅರ್ಧಶತಕ ಗಳಿಸಿದರು. ಅಂದಹಾಗೆ, ನ್ಯೂಜಿಲೆಂಡ್ ಗೆಲುವಿನ ನಂತರ ಇದೀಗ ಟೀಂ ಇಂಡಿಯಾಕ್ಕೆ (Team India) ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಟೀಂ ಇಂಡಿಯಾಕ್ಕೆ ಕಿವೀಸ್ ಕಂಟಕ

ಐಸಿಸಿ ಈವೆಂಟ್‌ಗಳಲ್ಲಿ, ನ್ಯೂಜಿಲೆಂಡ್ ತಂಡ ಯಾವಾಗಲೂ ಟೀಮ್ ಇಂಡಿಯಾ ಎದುರು ಮೇಲುಗೈ ಸಾಧಿಸಿದೆ. ಇದಕ್ಕೆ ಇತಿಹಾಸವೇ ಸಾಕ್ಷಿ. ಕಳೆದ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿತ್ತು. 2019 ರ ವಿಶ್ವಕಪ್‌ನಲ್ಲೂ ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿ, ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು. 2016ರ ಟಿ20 ವಿಶ್ವಕಪ್‌ನಲ್ಲೂ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತ್ತು. ಹಾಗೆಯೇ 2007ರ ಟಿ20 ವಿಶ್ವಕಪ್‌ನಲ್ಲೂ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು.

ನ್ಯೂಜಿಲೆಂಡ್ ಸೇಮಿಸ್ ಎದುರಾಳಿಯಾಗಬಾರದು

ಈಗ ನ್ಯೂಜಿಲೆಂಡ್ ವಿರುದ್ಧ ಭಾರತ ಕಣಕ್ಕಿಳಿಯುವುದನ್ನು ತಪ್ಪಿಸಬೇಕಾದರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಬೇಕಿದೆ. ಟಿ20 ವಿಶ್ವಕಪ್ 2022 ರ ನಿಯಮಗಳ ಪ್ರಕಾರ, ಗ್ರೂಪ್ 1 ರ ಅಗ್ರಸ್ಥಾನದಲ್ಲಿರುವ ತಂಡವು ಸೆಮಿಫೈನಲ್‌ನಲ್ಲಿ ಗ್ರೂಪ್ 2 ರ ಎರಡನೇ ಶ್ರೇಯಾಂಕದ ತಂಡದೊಂದಿಗೆ ಸ್ಪರ್ಧಿಸುತ್ತದೆ. ಹೀಗಾಗಿ ನ್ಯೂಜಿಲೆಂಡ್ ತಂಡ ಈಗಾಗಲೇ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ.

ಇದನ್ನೂ ಓದಿ: ಸೆಮಿಫೈನಲ್​ಗೆ ನ್ಯೂಜಿಲೆಂಡ್ ಎಂಟ್ರಿ; ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಹೆಚ್ಚಾಯ್ತು ಸಂಕಷ್ಟ..!

ಇದಕ್ಕೆ ಟೀಂ ಇಂಡಿಯಾ ಪ್ರಮುಖವಾಗಿ ತನ್ನ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಬೇಕಿದೆ. ಒಂದು ವೇಳೆ ಇದು ಸಾಧ್ಯವಾದರೆ, ರೋಹಿತ್ ಪಡೆ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ನೊಂದಿಗೆ ಸ್ಪರ್ಧಿಸುತ್ತದೆ. ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್​ಗಿಂತ, ಭಾರತಕ್ಕೆ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಹೆಚ್ಚು ಸುಲಭವಾದ ಎದುರಾಳಿಯಾಗಿವೆ.ಅಲ್ಲದೆ ಈ ಎರಡು ತಂಡಗಳ ವಿರುದ್ಧ ಭಾರತ ಉತ್ತಮ ಪ್ರದರ್ಶನ ನೀಡಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಹಾಗೆಯೇ ತವರಿನಲ್ಲಿ ನಡೆದ ಟಿ20 ಸರಣಿಯಲ್ಲೂ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Fri, 4 November 22