ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಶನಿವಾರ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ನಿತೀಶ್ ಕುಮಾರ್ ರೆಡ್ಡಿ ಆಕರ್ಷಕ ಶತಕ ಬಾರಿಸಿ ಮಿಂಚಿದ್ದರು. ಇತ್ತ ನಿತೀಶ್ ಶತಕ ಪೂರೈಸುತ್ತಿದ್ದರೆ, ಅತ್ತ ಅವರ ತಂದೆ ಮುತ್ಯಾಲ ರೆಡ್ಡಿ ಆನಂದಭಾಷ್ಪ ಸುರಿಸಿದ್ದರು.
ಇದಾದ ಬಳಿಕ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಕಾಮೆಂಟ್ರಿ ರೂಮ್ ಬಳಿ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ದಿ ಲೆಜೆಂಡ್ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾಗಿದ್ದಾರೆ. ಗವಾಸ್ಕರ್ ಅವರೊಂದಿಗೆ ಮಾತನಾಡುತ್ತಾ ಮುತ್ಯಾಲ ರೆಡ್ಡಿ ದಂಪತಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.
ಇದೀಗ ಗವಾಸ್ಕರ್ ಅವರಿಂದ ಆಶೀರ್ವಾದ ಪಡೆಯುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಅವರ ಪೋಷಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Nitish Kumar Reddy’s family meet the great Sunil Gavaskar @abcsport #AUSvIND pic.twitter.com/hUBOghxM2e
— Ben Cameron (@BenCameron23) December 29, 2024
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಯಾಮ್ ಕೊನ್ಸ್ಟಾಸ್ (60), ಉಸ್ಮಾನ್ ಖ್ವಾಜಾ (57) ಹಾಗೂ ಮಾರ್ನಸ್ ಲಾಬುಶೇನ್ (72) ಅರ್ಧಶತಕ ಬಾರಿಸಿದರೆ, ಸ್ಟೀವ್ ಸ್ಮಿತ್ (140) ಶತಕ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿದೆ.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ 8ನೇ ವಿಕೆಟ್ಗೆ ಜೊತೆಯಾದ ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಶತಕದ ಜೊತೆಯಾಟವಾಡಿದರು.
ವಾಷಿಂಗ್ಟನ್ ಸುಂದರ್ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಿತೀಶ್ ಕುಮಾರ್ ರೆಡ್ಡಿ 114 ರನ್ಗಳ ಭರ್ಜರಿ ಶತಕ ಸಿಡಿಸಿದರು. ಈ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 369 ರನ್ ಕಲೆಹಾಕಿದೆ.
ಇದನ್ನೂ ಓದಿ: ಭಾರತ vs ಆಸ್ಟ್ರೇಲಿಯಾ ಪಂದ್ಯದ ನಡುವೆ ಹಾರಾಡಿದ ಕಾಂಡೋಮ್
ಇದೀಗ 105 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ಶುರು ಮಾಡಿದ್ದು, 31 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.