ಭಾರತ vs ಆಸ್ಟ್ರೇಲಿಯಾ ಪಂದ್ಯದ ನಡುವೆ ಹಾರಾಡಿದ ಕಾಂಡೋಮ್
India vs Australia: ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ನಿತೀಶ್ ಕುಮಾರ್ ರೆಡ್ಡಿ 171 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಪಂದ್ಯದ ವೇಳೆ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಅದು ಸಹ ಮೈದಾನಕ್ಕೆ ಕಾಂಡೋಮ್ ಅನ್ನು ತೂರಿಬಿಡುವ ಮೂಲಕ…! ಹೌದು, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಸ್ಟೇಡಿಯಂ ಗ್ಯಾಲರಿಯಿಂದ ಪ್ರೇಕ್ಷಕರು ಕಾಂಡೋಮ್ಗೆ ಗಾಳಿ ತುಂಬಿಸಿ ಹರಿಬಿಟ್ಟಿದ್ದಾರೆ.
ಪಂದ್ಯದ ನಡುವೆ ಮೈದಾನದಲ್ಲಿ ಹಾರಾಡುತ್ತಿದ್ದ ಈ ಕಾಂಡೋಮ್ ಬಲೂನ್ ನೋಡಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರೇಕ್ಷಕರ ನಡೆಗೆ ಪರ ವಿರೋಧ ಪ್ರತಿಕ್ರಿಯೆಗಳು ಮೂಡಿಬರುತ್ತಿವೆ.
ಎಂಸಿಜಿ ಮೈದಾನದಲ್ಲಿ ಹರಾಡಿದ ಕಾಂಡೋಮ್ ವಿಡಿಯೋ:
ಮೆಲ್ಬೋರ್ನ್ ಟೆಸ್ಟ್ ಪಂದ್ಯ:
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಮಾಡಿದ ಸ್ಯಾಮ್ ಕೊನ್ಸ್ಟಾಸ್ (60), ಉಸ್ಮಾನ್ ಖ್ವಾಜಾ (57) ಹಾಗೂ ಮಾರ್ನಸ್ ಲಾಬುಶೇನ್ (70) ಅರ್ಧಶತಕ ಬಾರಿಸಿ ಮಿಂಚಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು. ಈ ಸೆಂಚುರಿ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಪೇರಿಸಿ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೇವಲ 3 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕೆಎಲ್ ರಾಹುಲ್ (24) ಔಟಾದರು. ಇನ್ನು ವಿರಾಟ್ ಕೊಹ್ಲಿ 36 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 82 ರನ್ಗಳ ಕೊಡುಗೆ ನೀಡಿದರು.
ಇದನ್ನೂ ಓದಿ: BGT ಸರಣಿ ಬೆನ್ನಲ್ಲೇ ರೋಹಿತ್ ಶರ್ಮಾ ನಿವೃತ್ತಿ..!
ಆ ಬಳಿಕ ಬಂದ ಆಕಾಶ್ ದೀಪ್ (0) ಶೂನ್ಯಕ್ಕೆ ಔಟಾದರೆ, ರಿಷಭ್ ಪಂತ್ 28 ರನ್ಗಳಿಸಿ ನಿರ್ಗಮಿಸಿದರು. ಇನ್ನು ರವೀಂದ್ರ ಜಡೇಜಾ ಅವರ ಇನಿಂಗ್ಸ್ 17 ರನ್ಗಳಿಗೆ ಸೀಮಿತವಾಯಿತು. ಈ ಹಂತದಲ್ಲಿ ಜೊತೆಗೂಡಿದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಶತಕದ ಜೊತೆಯಾಟವಾಡಿದರು. ಒಂದೆಡೆ ವಾಷಿಂಗ್ಟನ್ ಸುಂದರ್ 50 ರನ್ಗಳಿಸಿದರೆ, ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ ಅಜೇಯ ಶತಕ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ 3ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿದೆ. ನಾಲ್ಕನೇ ದಿನದಾಟಕ್ಕೆ ನಿತೀಶ್ ಕುಮಾರ್ ರೆಡ್ಡಿ (105) ಹಾಗೂ ಮೊಹಮ್ಮದ್ ಸಿರಾಜ್ (2) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Published On - 1:30 pm, Sat, 28 December 24