Viral Video: ಬೌಲಿಂಗ್ ಮಾಡುವ ಮೊದಲೇ ಬೌಲರ್​ಗಿಂತ ವೇಗವಾಗಿ ಓಡಿದ ಬ್ಯಾಟರ್..!

| Updated By: ಝಾಹಿರ್ ಯೂಸುಫ್

Updated on: Mar 14, 2022 | 4:27 PM

ಕ್ರಿಕೆಟ್​ನಲ್ಲಿ ಮನ್​ಕಡ್ ರನೌಟ್ ಅಥವಾ ಮನ್​ಕಡಿಂಗ್ ರನೌಟ್​ ಎಂಬ ಹೆಸರು ಬರಲು ಮುಖ್ಯ ಕಾರಣ ಭಾರತದ ಮಾಜಿ ಆಟಗಾರ ವಿನೂ ಮನ್​ಕಡ್.

Viral Video: ಬೌಲಿಂಗ್ ಮಾಡುವ ಮೊದಲೇ ಬೌಲರ್​ಗಿಂತ ವೇಗವಾಗಿ ಓಡಿದ ಬ್ಯಾಟರ್..!
Non-Striker
Follow us on

ಕ್ರಿಕೆಟ್ ಅಂಗಳದಲ್ಲಿ ಇತ್ತೀಚಿನ ಚರ್ಚಾ ವಿಷಯವಾಗಿ ಮನ್​ಕಡ್ ರನೌಟ್ ಏಕೆ ಬೇಕು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹಣೆ ನೀಡಲು ಸಾಧ್ಯವಿಲ್ಲ. ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟರ್​ ಕ್ರೀಸ್ ಬಿಟ್ಟರೆ, ಆಗ ಆತನನ್ನು ರನೌಟ್ ಮೂಲಕ ಔಟ್ ಮಾಡುವುದನ್ನು ಮನ್​ಕಡ್ ರನೌಟ್ ಎನ್ನಲಾಗುತ್ತದೆ. ಆದರೆ ಕ್ರಿಕೆಟ್ ಅಂಗಳದಲ್ಲಿ ಇಂತಹದೊಂದು ರನೌಟ್​ಗೆ ಅವಕಾಶವಿದ್ದರೂ ಇದಕ್ಕೆ ಕ್ರೀಡಾಸ್ಪೂರ್ತಿ ಅಡ್ಡಿಯಾಗುತ್ತಿರುವುದು ವಿಪಯಾರ್ಸ. ಇದಾಗ್ಯೂ ಇತ್ತೀಚೆಗೆ ಮೆರಿಲ್ಬೋರ್ನ್​​ ಕ್ರಿಕೆಟ್ ಕ್ಲಬ್ (MCC) ಕಾನೂನುಗಳ ಉಪ ಸಮಿತಿಯು ಮನ್​ಕಡ್ ರನೌಟ್​ಗೆ ನೇರ ಅವಕಾಶ ನೀಡುವ ನಿಯಮವನ್ನು ಎತ್ತಿ ಹಿಡಿದಿದೆ. ಇನ್ನು ಐಸಿಸಿ ಕಡೆಯಿಂದ ಮುದ್ರೆ ಬಿದ್ದರೆ ನೇರವಾಗಿ ಮನ್​ಕಡ್​ ರನೌಟ್ ಕಾರ್ಯರೂಪಕ್ಕೆ ಬರಲಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಯುರೋಪಿಯನ್ ಕ್ರಿಕೆಟ್ ಪಂದ್ಯವೊಂದರಲ್ಲಿ ಮನ್​ಕಡ್ ರನೌಟ್​ ಏಕೆ ಅವಶ್ಯಕ ಎಂಬುದನ್ನು ನಿರ್ಣಯಿಸಲು ಪ್ರಮುಖ ಸಾಕ್ಷಿ ಸಿಕ್ಕಿದೆ ಎಂದೇ ಹೇಳಬಹುದು. ಏಕೆಂದರೆ ಈ ಪಂದ್ಯದಲ್ಲಿ ನಾನ್-ಸ್ಟ್ರೈಕರ್‌ನ ತುದಿಯಲ್ಲಿರುವ ಬ್ಯಾಟರ್ ರನ್‌ಗಾಗಿ ಓಡಲು ಮುಂದಾಗಿದ್ದಾನೆ. ವಿಶೇಷ ಎಂದರೆ ಬೌಲರ್ ಚೆಂಡೆಸೆಯುವ ಮುನ್ನವೇ ಬ್ಯಾಟರ್ ಅರ್ಧ ಪಿಚ್​ ದಾಟಿದ್ದರೂ ಎಂಬುದು ವಿಶೇಷ.

ಇತ್ತ ತನಗಿಂತ ವೇಗವಾಗಿ ಓಡುತ್ತಿರುವ ಬ್ಯಾಟರ್​ನ ನೋಡಿ ಬೌಲರ್ ಚೆಂಡೆಸೆದಿರಲಿಲ್ಲ. ಅಷ್ಟೇ ಅಲ್ಲದೆ ಅಂಪೈರ್​ಗೆ ಮೊದಲ ವಾರ್ನಿಂಗ್ ಕೊಡುವಂತೆ ಸೂಚಿಸಿದ್ದರು. ಈ ಎಚ್ಚರಿಕೆಯೇ ಬ್ಯಾಟರ್​ಗಳ ಪಾಲಿಗೆ ವರದಾನವಾಗಿರುವುದು. ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಮನ್​ಕಡ್​ ರನೌಟ್​ಗೆ ಅವಕಾಶವಿದ್ದರೂ ಮೊದಲ ಎಚ್ಚರಿಕೆ ನೀಡಿದ ಬಳಿಕ, 2ನೇ ಬಾರಿಗೆ ಅದೇ ತಪ್ಪನ್ನು ಮುಂದುವರೆಸಿದರೆ ಮನ್​ಕಡ್ ರನೌಟ್ ಅನ್ನು ಪುಷ್ಠೀಕರಿಸಲಾಗುತ್ತದೆ. ನೇರವಾಗಿ ಮೊದಲೇ ರನೌಟ್ ಮಾಡಿದರೆ ಅದು ಕ್ರೀಡಾ ಸ್ಪೂರ್ತಿಗೆ ವಿರುದ್ದ ಎನ್ನಲಾಗುತ್ತದೆ.

ಇದನ್ನೇ ಬಂಡವಾಳ ಮಾಡಿಕೊಳ್ಳುವ ಬ್ಯಾಟರ್​ಗಳು ಬೌಲರ್ ಚೆಂಡೆಸೆಯುವ ಮುನ್ನವೇ ಕ್ರೀಸ್ ಬಿಟ್ಟು ರನ್​ಗಳಿಸುತ್ತಿದ್ದಾರೆ. ಯುರೋಪಿಯನ್ ಕ್ರಿಕೆಟ್ ಪಂದ್ಯದಲ್ಲಿ ಇದರ ಅತ್ಯುತ್ತಮ ಉದಾಹರಣೆ ಕಂಡು ಬಂದಿದೆ. ಎಂಸಿಸಿ ಕಾನೂನುಗಳ ಉಪ ಸಮಿತಿಯು ‘ಮನ್​ಕಡಿಂಗ್’ ನಿಯಮದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಈ ಮೂಲಕ ಅದನ್ನು ‘ರನ್-ಔಟ್’ ವರ್ಗಕ್ಕೆ ಸೇರಿಸಿದೆ. ಈ ನಿಯಮವನ್ನು ಐಸಿಸಿ ಒಪ್ಪಿಕೊಂಡರೆ ಮಾತ್ರ ಮನ್​ಕಡಿಂಗ್ ರನೌಟ್​ಗೆ ಅವಕಾಶ ದೊರೆಯಲಿದೆ. ಸದ್ಯ ಯುರೋಪಿಯನ್ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ನ ಓಟ ನೋಡಿದ್ರೆ ಐಸಿಸಿ ಖಂಡಿತವಾಗಿಯೂ ಈ ನಿಯಮಕ್ಕೆ ಮುದ್ರೆ ಒತ್ತುವ ಸಾಧ್ಯತೆಯಿದೆ.

ಮನ್​ಕಡ್​ಗೂ ಭಾರತಕ್ಕೂ ಇದೆ ನಂಟು:
ಕ್ರಿಕೆಟ್​ನಲ್ಲಿ ಮನ್​ಕಡ್ ರನೌಟ್ ಅಥವಾ ಮನ್​ಕಡಿಂಗ್ ರನೌಟ್​ ಎಂಬ ಹೆಸರು ಬರಲು ಮುಖ್ಯ ಕಾರಣ ಭಾರತದ ಮಾಜಿ ಆಟಗಾರ ವಿನೂ ಮನ್​ಕಡ್. 1947 ರಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್ ಬಿಲ್​ ಬ್ರೌನ್ ಅನ್ನು ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟ ಕಾರಣ ವಿನೂ ಮನ್​ಕಡ್ ನಾನ್​ ಸ್ಟ್ರೈಕ್​ನಲ್ಲಿ ರನೌಟ್ ಮಾಡಿದ್ದರು. ಮನ್​ಕಡ್​ ಮಾಡಿದ ಹೊಸ ರೀತಿಯ ರನೌಟ್ ಹೊಸ ಚರ್ಚೆ ಹುಟ್ಟು ಹಾಕಿತು. ಅಂದು ವಿನೂ ಮನ್​ಕಡ್ ಮಾಡಿದ ರನೌಟ್ ನಂತರ ಮನ್​ಕಡ್ ರನೌಟ್ ಎಂದೇ ಪ್ರಸಿದ್ಧಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮನ್​ಕಡಿಂಗ್ ರನೌಟ್​ ಎಂದು ಕರೆಯಲಾಯಿತು.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(Commentators In Splits As Non-Striker Sets Off For A Run Even Before Ball Is Bowled)