Quinton de Kock: ನಾನು ರೇಸಿಸ್ಟ್ ಅಲ್ಲ: ವಿವಾದಕ್ಕೆ ಕ್ವಿಂಟನ್​ ಡಿಕಾಕ್ ಸ್ಪಷ್ಟನೆ

| Updated By: ಝಾಹಿರ್ ಯೂಸುಫ್

Updated on: Oct 28, 2021 | 2:53 PM

T20 World Cup: ಟಿ20 ವಿಶ್ವಕಪ್​ನಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ (CSA) ತನ್ನ ಆಟಗಾರರಿಗೆ ಎಲ್ಲಾ ಪಂದ್ಯಗಳ ಮೊದಲು ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ಗೆ ಬೆಂಬಲವಾಗಿ ಮಂಡಿಯೂರಲು ನಿರ್ದೇಶಿಸಿದೆ. ಈ ಮೂಲಕ ವರ್ಣಬೇಧದ ವಿರುದ್ದದ ಚಳುವಳಿಗೆ ಬೆಂಬಲ ವ್ಯಕ್ತಪಡಿಸಲು ಸೂಚಿಸಿದೆ.

Quinton de Kock: ನಾನು ರೇಸಿಸ್ಟ್ ಅಲ್ಲ: ವಿವಾದಕ್ಕೆ ಕ್ವಿಂಟನ್​ ಡಿಕಾಕ್ ಸ್ಪಷ್ಟನೆ
Quinton de Kock
Follow us on

ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ನ (T20 World Cup 2021) 18ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (Quinton de Kock) ಕಣಕ್ಕಿಳಿದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಪಂದ್ಯದ ಆರಂಭಕ್ಕೂ ಮುನ್ನ ಬ್ಲ್ಯಾಕ್ ಲೈವ್ಸ್​ ಮ್ಯಾಟರ್ಸ್ (BLM)​​ ಚಳುವಳಿಗೆ ಬೆಂಬಲ ವ್ಯಕ್ತಪಡಿಸಲು ಸೂಚಿಸಿರುವುದು. ಇದನ್ನು ವಿರೋಧಿಸಿ ವೆಸ್ಟ್ ಇಂಡೀಸ್ ವಿರುದ್ದ ಡಿಕಾಕ್ ಆಡಿರಲಿಲ್ಲ. ಇದರ ಬೆನ್ನಲ್ಲೇ ಡಿಕಾಕ್ ವಿರುದ್ದ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಅದರಲ್ಲೂ ದಕ್ಷಿಣ ಆಫ್ರಿಕಾ ತಂಡದಿಂದಲೇ ಅವರನ್ನು ಕೈಬಿಡಲಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ತಮ್ಮ ನಿರ್ಧಾರದ ಬಗ್ಗೆ ಕ್ವಿಂಟನ್ ಡಿಕಾಕ್ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.

ಈ ವಿಚಾರವಾಗಿ ಕ್ರಿಕೆಟ್ ಸೌತ್ ಆಫ್ರಿಕಾ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಹೇಳಿಕೆ ನೀಡಿದ ಡಿಕಾಕ್, “ನಾನು ದೇಶಕ್ಕಾಗಿ ಕ್ರಿಕೆಟ್ ಆಡಲು ಬಯಸುತ್ತೇನೆ. ಸಹ ಆಟಗಾರರು, ಅಭಿಮಾನಿಗಳ ಬಳಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಎಂದಿಗೂ ಸಮಸ್ಯೆಯನ್ನು ಮಾಡಲು ಬಯಸಲಿಲ್ಲ. ವರ್ಣಭೇದ ನೀತಿಯ ವಿರುದ್ಧ ನಿಲ್ಲುವ ಪ್ರಾಮುಖ್ಯತೆಯನ್ನು ನಾನು ಸಹ ಅರ್ಥಮಾಡಿಕೊಂಡಿದ್ದೇನೆ. ಆದರೆ ಶಿಕ್ಷಣವನ್ನು ಉತ್ತೇಜಿಸಲು, ಇತರರ ಜೀವನವನ್ನು ಸುಧಾರಿಸಲು ಮಂಡಿಯೂರುವುದರಿಂದ ನನಗೆ “ಹೆಚ್ಚು ಸಂತೋಷವಾಗುತ್ತದೆ” ಎಂದು ತಿಳಿಸಿದ್ದಾರೆ.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಅನ್ನು ಬೆಂಬಲಿಸುತ್ತೇನೆ:
“ವೆಸ್ಟ್ ಇಂಡೀಸ್ ವಿರುದ್ಧ ಆಡದೆ, ನಾನು ಯಾರನ್ನೂ ಯಾವುದೇ ರೀತಿಯಲ್ಲಿ ಅವಮಾನಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಬಹುಶಃ ಕೆಲವರಿಗೆ ನನ್ನ ಮಾತು ಅರ್ಥವಾಗದಿರಬಹುದು. ಏಕೆಂದರೆ ಮಂಗಳವಾರದ ಪಂದ್ಯಕ್ಕೂ ಮುನ್ನವೇ ಈ ವಿಷಯ ನನ್ನ ಮನಸ್ಸಿಗೆ ಬಂದಿತ್ತು. ನನ್ನಿಂದ ಉಂಟಾದ ಗೊಂದಲ, ನೋವು ಮತ್ತು ಕೋಪಕ್ಕೆ ನಾನು ವಿಷಾದಿಸುತ್ತೇನೆ. ಈ ವಿಷಯದ ಬಗ್ಗೆ ನನ್ನ ಪರವಾಗಿ ನಾನು ಸ್ಪಷ್ಟನೆ ನೀಡಬೇಕೆಂದು ಭಾವಿಸುತ್ತೇನೆ. ಏಕೆಂದರೆ ನನ್ನ ಮಲತಾಯಿ ಸ್ವತಃ ಕಪ್ಪು ವರ್ಣೀಯಳು. ನಾನು ಹುಟ್ಟಿದ ದಿನದಿಂದಲೇ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಮಾಡುತ್ತಿದ್ದೇನೆ ಎಂದರು.

ನಾನು ಯಾವತ್ತೂ ಜನಾಂಗೀಯ ತಾರತಮ್ಯ ಮಾಡಿದವನಲ್ಲ. ಎಲ್ಲಾ ಜನರ ಹಕ್ಕುಗಳು ಮತ್ತು ಸಮಾನತೆ ಯಾವುದೇ ವ್ಯಕ್ತಿಗಿಂತ ಹೆಚ್ಚು ಮುಖ್ಯವಾಗಿದೆ. ನಮಗೆ ಹಕ್ಕುಗಳಿವೆ ಮತ್ತು ಅವು ಮುಖ್ಯ ಎಂದು ಅರ್ಥಮಾಡಿಕೊಂಡು ನಾನು ಬೆಳೆದಿದ್ದೇನೆ. ಆ ರೀತಿಯಲ್ಲಿ ಅದನ್ನು ಮಾಡಬೇಕೆಂದು ಹೇಳಿದಾಗ ನನ್ನ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ನಾನು ಭಾವಿಸಿದೆ ಎಂದು ವಿಕೆಟ್ ಕೀಪರ್ ಬ್ಯಾಟರ್ ಡಿಕಾಕ್ ತಿಳಿಸಿದರು.

ಟಿ20 ವಿಶ್ವಕಪ್​ನಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ (CSA) ತನ್ನ ಆಟಗಾರರಿಗೆ ಎಲ್ಲಾ ಪಂದ್ಯಗಳ ಮೊದಲು ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ಗೆ ಬೆಂಬಲವಾಗಿ ಮಂಡಿಯೂರಲು ನಿರ್ದೇಶಿಸಿದೆ. ಈ ಮೂಲಕ ವರ್ಣಬೇಧದ ವಿರುದ್ದದ ಚಳುವಳಿಗೆ ಬೆಂಬಲ ವ್ಯಕ್ತಪಡಿಸಲು ಸೂಚಿಸಿದೆ. ಇದಾಗ್ಯೂ ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಬೆಂಬಲಿಸಲು ಹಿಂದೇಟು ಹಾಕಿದ್ದರು.

ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಕಾಕ್ ನಾನು ಕೂಡ ಮಂಡಿಯೂರಲು ಸಿದ್ಧನಿದ್ದೇನೆ ಎನ್ನುವ ಮೂಲಕ ಎಲ್ಲಾ ವಿವಾದಗಳಿಗೂ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲದೆ ನನ್ನ ನಡೆಯಿಂದ ನೋವುಂಟಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್‌ನ ಮುಂದಿನ ಪಂದ್ಯಗಳಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್‌ ಬೆಂಬಲ ವ್ಯಕ್ತಪಡಿಸಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್​ನಿಂದ ಪ್ರಮುಖ ಆಟಗಾರ ಹೊರಕ್ಕೆ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

ಇದನ್ನೂ ಓದಿ: T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್

(Not A Racist”: Quinton de Kock Apologises)

Published On - 2:48 pm, Thu, 28 October 21