T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್

Mohammad Shahzad Catch: ಗುರ್ಬಾಜ್ 37 ಎಸೆತಗಳಲ್ಲಿ 46 ರನ್ ಗಳಿಸಿದರೆ, ನಜಿಬುಲ್ಲಾ ಕೇವಲ 34 ಎಸೆತಗಳಲ್ಲಿ 59 ರನ್ ಬಾರಿಸಿದರು. ಈ ಮೂಲಕ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್​ ಪೇರಿಸಿತು.

T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್
Mohammad Shahzad

ಟಿ20 ವಿಶ್ವಕಪ್​ನ (T20 World Cup 2021) 17ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ ಅಫ್ಘಾನಿಸ್ತಾನ್ 130 ರನ್​ಗಳ ಭರ್ಜರಿ ಜಯ ಸಾಧಿಸಿತು. ಆದರೆ ಈ ಜಯಕ್ಕಿಂತಲೂ ಎಲ್ಲರನ್ನು ನಿಬ್ಬೆರಗಾಗಿಸಿದ್ದು ಅಫ್ಘಾನ್ ವಿಕೆಟ್ ಕೀಪರ್ ಮೊಹಮ್ಮದ್ ಶಹಝಾದ್ ಹಿಡಿದ ಅದ್ಭುತ ಕ್ಯಾಚ್. ಇದಕ್ಕೆ ಮುಖ್ಯ ಕಾರಣ, ಶಹಝಾದ್ ಅವರ ದೇಹ ತೂಕ. ಹೌದು, ಕ್ರಿಕೆಟ್ ಅಂಗಳದಲ್ಲಿ ಫಿಟ್​ನೆಸ್​ ಫ್ರೀಕ್​ಗಳೇ ತುಂಬಿರುವಾಗ ಕಳೆದ ಕೆಲ ವರ್ಷಗಳಿಂದ ಮೊಹಮ್ಮದ್ ಶಹಝಾದ್ ಮಾತ್ರ 90 ಕಿಲೋ ತೂಕದೊಂದಿಗೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಶಹಝಾದ್ ಈ ಬಾರಿ ವಿಕೆಟ್ ಕೀಪಿಂಗ್ ಮೂಲಕ ಮಿಂಚಿದ್ದಾರೆ. ಅದು ಕೂಡ ಸೂಪರ್ ಮ್ಯಾನ್ ಡೈವಿಂಗ್ ಮೂಲಕ ಎಂಬುದು ವಿಶೇಷ.

ಸ್ಕಾಟ್ಲೆಂಡ್ ವಿರುದ್ದದ ಪಂದ್ಯದ ವೇಳೆ 5ನೇ ಓವರ್​ನ ಎರಡನೇ ಎಸೆತ ಸ್ಕಾಟ್ಲೆಂಡ್​ನ ಮ್ಯಾಥ್ಯೂ ಕ್ರಾಸ್​ ಬ್ಯಾಟ್ ಸವರಿ ಫಸ್ಟ್ ಸ್ಲಿಪ್​ನತ್ತ ಚಿಮ್ಮಿತು. ಚೆಂಡು ಬೌಂಡರಿಗೆ ಹೋಗಲಿದೆ ಅನ್ನುವಷ್ಟರಲ್ಲಿ ಮಿಂಚಿನಂತೆ ಜಿಗಿದ ಮೊಹಮ್ಮದ್ ಶಹಝಾದ್ ಅದ್ಭುತವಾಗಿ ಬಾಲ್​ನ್ನು ತಮ್ಮ ಕೈಯಲ್ಲಿ ಬಂಧಿಸಿದರು. ದೊಡ್ಡ ದೇಹದಾರ್ಢ್ಯವನ್ನು ಹೊಂದಿದ್ದರೂ ಶಹಝಾದ್ ಅವರು ಹಾರಿ ಹಿಡಿದಿರುವ ಈ ಕ್ಯಾಚ್​ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಈ ಬಾರಿಯ ಟಿ20 ವಿಶ್ವಕಪ್​ನ ಬೆಸ್ಟ್ ಕ್ಯಾಚ್ ಎಂದು ವರ್ಣಿಸಲಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ್ ತಂಡ ಅಮೋಘ ಆಟ ಪ್ರದರ್ಶಿಸಿತು. ಆರಂಭಿಕರಾದ ಹಜರತುಲ್ಲಾ ಝಝೈ ಮತ್ತು ಮೊಹಮ್ಮದ್ ಶಹಝಾದ್ ಮೊದಲ ವಿಕೆಟ್‌ಗೆ 55 ರನ್ ಕಲೆಹಾಕಿದರು. ಇಬ್ಬರೂ ಆರಂಭಿಕರು ಔಟಾದ ನಂತರ, ರಹಮಾನುಲ್ಲಾ ಗುರ್ಬಾಜ್ ಮತ್ತು ನಜಿಬುಲ್ಲಾ ಜದ್ರಾನ್ ಮೂರನೇ ವಿಕೆಟ್‌ಗೆ 87 ರನ್‌ಗಳ ಅತ್ಯುತ್ತಮ ಜೊತೆಯಾಟ ನೀಡಿದರು.

ಗುರ್ಬಾಜ್ 37 ಎಸೆತಗಳಲ್ಲಿ 46 ರನ್ ಗಳಿಸಿದರೆ, ನಜಿಬುಲ್ಲಾ ಕೇವಲ 34 ಎಸೆತಗಳಲ್ಲಿ 59 ರನ್ ಬಾರಿಸಿದರು. ಈ ಮೂಲಕ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್​ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಟ್ ತಂಡವು ಮುಜೀಬ್​ ಉರ್ ರೆಹಮಾನ್ ಹಾಗೂ ರಶೀದ್ ಖಾನ್ ಸ್ಪಿನ್ ಮೋಡಿಗೆ ತತ್ತರಿಸಿತು. 10.2 ಓವರ್​ನಲ್ಲಿ ಕೇವಲ 60 ರನ್​ಗೆ ಆಲೌಟ್​ ಆಗುವ ಮೂಲಕ ಸ್ಕಾಟ್ಲೆಂಡ್​ 130 ರನ್​ಗಳ ಹೀನಾಯ ಸೋಲನುಭವಿಸಿತು. ಅಫ್ಘಾನ್ ಪರ ರಶೀದ್ ಖಾನ್ 4 ವಿಕೆಟ್ ಪಡೆದರೆ, 5 ವಿಕೆಟ್ ಉರುಳಿಸಿದ ಮುಜೀಬ್ ಉರ್ ರೆಹಮಾನ್ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

ಇದನ್ನೂ ಓದಿ:  Virat Kohli: ಸೋತರೂ ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Afghanistan’s Mohammad Shahzad Takes a Stunning Catch)

Click on your DTH Provider to Add TV9 Kannada