ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಿನ ಮೂರು ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್‌ಮನ್ ಟಾಮ್ ಲ್ಯಾಥಮ್ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 24 ವರ್ಷಗಳ ಹಳೆಯ ದಾಖಲೆಯನ್ನು ಲ್ಯಾಥಮ್ ಮುರಿದಿರುವುದು ವಿಶೇಷ . ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 9 ವಿಕೆಟ್‌ಗೆ 264 ರನ್ ಗಳಿಸಿತು. ಕಿವೀಸ್ ಪರ ಟಾಮ್ ಲ್ಯಾಥಮ್ 123 ಎಸೆತಗಳಲ್ಲಿ 140 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್ ಪರಿಣಾಮ ನೆದರ್ಲೆಂಡ್ ತಂಡವು 118 ರನ್ಗಳಿಂದ ಸೋಲನುಭವಿಸಬೇಕಾಯಿತು.
ಸಚಿನ್ ದಾಖಲೆ ಮುರಿದ ಲ್ಯಾಥಮ್:
ಜನ್ಮದಿನದಂದು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಇದೀಗ ಟಾಮ್ ಲ್ಯಾಥಮ್ ಪಾಲಾಗಿದೆ. 140 ರನ್ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಸಚಿನ್ 24 ವರ್ಷಗಳ ಹಿಂದೆ 1998 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಶಾರ್ಜಾದಲ್ಲಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ 134 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 140 ರನ್ ಬಾರಿಸಿ ಲ್ಯಾಥಮ್ ಬರ್ತ್ ಡೇ ಸ್ಪಷೆಲ್ ದಾಖಲೆ ಬರೆದಿದ್ದಾರೆ.
ಟಾಮ್ ಲ್ಯಾಥಮ್ ಮತ್ತು ಸಚಿನ್ ತೆಂಡೂಲ್ಕರ್ ಹೊರತುಪಡಿಸಿ, ರಾಸ್ ಟೇಲರ್ ಅವರು ಕೂಡ ಜನ್ಮದಿನದಂದು ಭರ್ಜರಿ ಇನ್ನಿಂಗ್ಸ್ ಆಡಿದ್ದಾರೆ . ಟೇಲರ್ 2011ರ ಹುಟ್ಟುಹಬ್ಬದಂದು 131 ರನ್ ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಅವರು 2008 ರಲ್ಲಿ ತಮ್ಮ ಜನ್ಮದಿನದಂದು 130 ರನ್ ಗಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡ ತಮ್ಮ ಹುಟ್ಟುಹಬ್ಬದಂದು ಶತಕ ಸಿಡಿಸಿದ್ದಾರೆ. ಅವರು 1993 ರಲ್ಲಿ ತಮ್ಮ ಜನ್ಮದಿನದಂದು 100 ರನ್ ಗಳಿಸಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು