ಏಕದಿನ ವಿಶ್ವಕಪ್ 2023 ರ (ICC World Cup 2023) 41 ನೇ ಪಂದ್ಯವು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ (New Zealand vs Sri Lanka) ನಡುವೆ ನಡೆಯಲಿದೆ. ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಈಗಾಗಲೇ 3 ತಂಡಗಳು ಪ್ರವೇಶ ಪಡೆದಿವೆ. ಇದರಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೇರಿವೆ. ಈಗ ಉಳಿದಿರುವ ಒಂದು ಸ್ಥಾನಕ್ಕೆ 3 ತಂಡಗಳು ಪೈಪೋಟಿ ನಡೆಸಲಿವೆ. ಈ 3 ತಂಡಗಳ ಪೈಕಿ ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಸೇರಿವೆ. ಹಾಗಾಗಿ ಸೆಮಿಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನ್ಯೂಜಿಲೆಂಡ್‌ಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಮತ್ತೊಂದೆಡೆ ಈಗಾಗಲೇ ವಿಶ್ವಕಪ್ನಿಂದ ಹೊರಬಿದ್ದಿರುವ ಶ್ರೀಲಂಕಾಗೆ ಇದು ಕೇವಲ ಔಪಚಾರಿಕ ಪಂದ್ಯವಾಗಿದೆ. ಆದರೆ ಸತತ ಸೋಲುಗಳಿಂದ ಕಂಗೆಟ್ಟಿದ್ದರೂ ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್ ಎಂದಿಗೂ ಕಡಿಮೆ ಅಂದಾಜು ಮಾಡುವಂತಿಲ್ಲ. ಹೀಗಾಗಿ ಸೆಮಿಸ್ಗೇರಬೇಕೆಂದರೆ, ಕಿವೀಸ್ ಪಡೆ ಈ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕಾಗಿದೆ. ಈ ಉಭಯ ತಂಡಗಳ ಹೈವೋಲ್ಟೇಜ್ ಕದನ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಕೆಲವು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿರುವುದರಿಂದ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕದಲ್ಲಿ ಕೇನ್ ಪಡೆ ಇದೆ.
ಗುರುವಾರ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಪಂದ್ಯ ಆರಂಭವಾಗುವ ವೇಳೆಗೆ ಅಂದರೆ ಮಧ್ಯಾಹ್ನ 2 ಗಂಟೆಯ ನಂತರ ಮಳೆಯ ಸಾಧ್ಯತೆ ಶೇ.50ಕ್ಕೆ ಇಳಿಕೆಯಾಗಲಿದೆ. ಮಳೆಯಿಂದಾಗಿ ಟಾಸ್ ವಿಳಂಬವಾಗುವ ಸಾಧ್ಯತೆ ಇದೆ. ಇದಾದ ಬಳಿಕ ಸಂಜೆಯೂ ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯದುದ್ದಕ್ಕೂ ಮಳೆ ಸುರಿಯಲ್ಲಿದೆ ಎಂದು ವರದಿಯಾಗಿದೆ.
ಒಂದು ವೇಳೆ ಮಳೆ ಬಂದು ಪಂದ್ಯ ನಿಂತರೆ ನ್ಯೂಜಿಲೆಂಡ್‌ಗೆ ಸೆಮಿಸ್ ಲೆಕ್ಕಾಚಾರದಲ್ಲಿ ಭಾರಿ ಹಿನ್ನಡೆಯುಂಟಾಗಲಿದೆ. ಶ್ರೀಲಂಕಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ನ್ಯೂಜಿಲೆಂಡ್ ಈ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಅದು ಸೆಮಿಫೈನಲ್ ತಲುಪಲು ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಈ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್ ಕೇವಲ 9 ಅಂಕಗಳನ್ನು ಗಳಿಸಲಿದೆ. ಇಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ತಮ್ಮ ತಮ್ಮ ಮುಂದಿನ ಪಂದ್ಯಗಳನ್ನು ಗೆಲ್ಲುವ ಮೂಲಕ 10 ಅಂಕಗಳನ್ನು ತಲುಪುವ ಅವಕಾಶವನ್ನು ಹೊಂದಿರುತ್ತದೆ. ಎಲ್ಲಾ ತಂಡಗಳು ತಮ್ಮ ಪಂದ್ಯಗಳನ್ನು ಗೆದ್ದು ತಲಾ 10 ಅಂಕಗಳನ್ನು ಗಳಿಸಿದರೆ, ನೆಟ್ ರನ್ ರೇಟ್ ಆಧಾರದ ಮೇಲೆ ಯಾವ ತಂಡವು ಭಾರತದೊಂದಿಗೆ ಸೆಮಿಫೈನಲ್ ಆಡಲಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿಕೊಂಡಿದೆ. ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ 401 ರನ್ ಕಲೆ ಹಾಕಿದ ಹೊರತಾಗಿಯೂ ಈ ಪಂದ್ಯದಲ್ಲಿ ಸೋಲುಂಡಿತ್ತು. ಮಳೆ ಪೀಡಿತ ಈ ಪಂದ್ಯವನ್ನು ಪಾಕಿಸ್ತಾನ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ 21 ರನ್ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ ಈ ಪಂದ್ಯದಲ್ಲೂ ರನ್ ಸುರಿಮಳೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ