
ಉತ್ತರ ಪ್ರದೇಶದ ಅಮ್ರೋಹಾ ನಿವಾಸಿ, ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮೊಹಮ್ಮದ್ ಶಮಿ ಅವರ ಸಹೋದರ ಹಸೀಬ್ ಘಟನೆಯ ಬಗ್ಗೆ ಅಮ್ರೋಹಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ಅವರ ಆದೇಶದ ಮೇರೆಗೆ, ಅಮ್ರೋಹಾ ಸೈಬರ್ ಸೆಲ್‌ನಲ್ಲಿ ಎಫ್‌ಐಆರ್ (FIR) ಕೂಡ ದಾಖಲಿಸಲಾಗಿದೆ. ಮೊಹಮ್ಮದ್ ಶಮಿ ಪ್ರಸ್ತುತ ಐಪಿಎಲ್‌ನಲ್ಲಿ (IPL 2025) ಆಡುತ್ತಿದ್ದು, ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದಾರೆ.
ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮೇಲ್‌ನಲ್ಲಿ ಬಂದಿರುವ ಸಂದೇಶದ ಬಗ್ಗೆ ಪೂರ್ಣ ಮಾಹಿತಿ ನೀಡಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಸಹೋದರ ಹಸೀಬ್, ‘ಭಾನುವಾರ ಮೊಹಮ್ಮದ್ ಶಮಿ ಅವರ ಮೇಲ್‌ಗೆ ರಜಪೂತ್ ಸಿಂಧರ್ ಎಂಬ ಮೇಲ್ ಐಡಿಯಿಂದ ಒಂದು ಮೇಲ್ ಬಂದಿದೆ. ಈ ಮೇಲ್‌ನಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ‘ನಿನ್ನನ್ನು ಕೊಲ್ಲುತ್ತೇವೆ. ಸರ್ಕಾರ ನಮಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಈ ಮೇಲ್‌ನಲ್ಲಿ ಬರೆಯಲಾಗಿದೆ. ಈ ಮೇಲ್ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮೊಹಮ್ಮದ್ ಶಮಿ ಅವರ ಸಹೋದರ ಹಸೀಬ್ ತಿಳಿಸಿದ್ದಾರೆ.
ಮತ್ತೊಂದೆಡೆ, ಪೊಲೀಸ್ ವರಿಷ್ಠಾಧಿಕಾರಿ ಅಮ್ರೋಹಾ ಅಮಿತ್ ಕುಮಾರ್ ಆನಂದ್ ಘಟನೆಯ ಬಗ್ಗೆ ಮಾತನಾಡಿ, ‘ಮೇಲಿನ ಪ್ರಕರಣದಲ್ಲಿ ಶಮಿ ಅವರ ಸಹೋದರ ಹಸೀಬ್ ದೂರು ನೀಡಿದ್ದು, ಆರೋಪಿಗಳು ಮೇಲ್‌ನಲ್ಲಿ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ 1 ಕೋಟಿ ರೂಪಾಯಿ ನೀಡದಿದ್ದರೆ ಪರಿಣಾಮಗಳು ಕೆಟ್ಟದಾಗಿರಲಿದ್ದು, ನಿನ್ನನ್ನು ಕೊಲ್ಲುತ್ತೇವೆ ಎಂದು ಬರೆದಿದ್ದಾರೆ. ಇದೀಗ ಶಮಿ ಸಹೋದರ ಹಸೀಬ್ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
‘ನಮ್ಮ ಸಮಾಜ’; ಪಹಲ್ಗಾಮ್ ದುರಂತದಲ್ಲಿ ಮಡಿದವರಿಗೆ ಮೊಹಮ್ಮದ್ ಶಮಿ ಸಂತಾಪ
ಮೊಹಮ್ಮದ್ ಶಮಿ ಪ್ರಸ್ತುತ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರು. ಅವರು ಇದುವರೆಗೆ ಭಾರತ ಪರ 64 ಟೆಸ್ಟ್, 108 ಏಕದಿನ ಮತ್ತು 25 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಟೆಸ್ಟ್‌ನಲ್ಲಿ 229 ವಿಕೆಟ್, ಏಕದಿನದಲ್ಲಿ 206 ವಿಕೆಟ್ ಮತ್ತು ಟಿ20ಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಶಮಿ ಪ್ರಮುಖ ಪಾತ್ರ ವಹಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ